ಹಾವೇರಿ
ಮಡಿವಾಳ ಮಾಚಿದೇವ, ಸವಿತಾ ಮಹರ್ಷಿ, ಛತ್ರಪತಿ ಶಿವಾಜಿ, ಸೇವಾಲಾಲ ಜಯಂತಿ, ಸಾರ್ವಜ್ಞ ಜಯಂತಿ, ಕಾಯಕ ಶರಣರ ಜಯಂತಿಗಳನ್ನು ಫೆಬ್ರುವರಿ ಮಾಹೆಯ ನಿಗಧಿತ ದಿನಗಳಂದು ವ್ಯವಸ್ಥಿತ ಹಾಗೂ ಅರ್ಥಪೂರ್ಣವಾಗಿ ಸಮಾಜದ ಮುಖಂಡರ ಸಮನ್ವಯದೊಂದಿಗೆ ಆಚರಿಸಲು ನಿರ್ಧರಿಸಲಾಯಿತು.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಶರಣರ ಜಯಂತಿ ಆಚರಣೆಯ ಪೂರ್ವ ಸಿದ್ಧತಾ ಸಭೆಯು ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಸರ್ಕಾರ ನಿಗಧಿಪಡಿಸಿದಂತೆ ಫೆಬ್ರುವರಿ 1 ರಂದು ಮಡಿವಾಳ ಮಾಚಿದೇವ ಜಯಂತಿ, ಸವಿತಾ ಮಹರ್ಷಿ ಜಯಂತಿ, ಫೆಬ್ರುವರಿ 15 ರಂದು ಸಂತ ಸೇವಾಲಾಲ ಜಯಂತಿ, ಫೆಬ್ರುವರಿ 19 ರಂದು ಛತ್ರಪತಿ ಶಿವಾಜಿ ಜಯಂತಿ, ಫೆಬ್ರುವರಿ 20 ತ್ರಿಪದಿಕವಿ ಸರ್ವಜ್ಞ ಜಯಂತಿ, ಫೆ.21 ರಂದು ಕಾಯಕ ಶರಣರ ಜಯಂತಿಯನ್ನು ಆಯಾ ತಾಲೂಕಾ ಆಡಳಿತದಿಂದ ನಿಗಧಿತ ದಿನದಂದು ಆಚರಿಸಲು ನಿರ್ಧರಿಸಲಾಯಿತು.
ಜಿಲ್ಲಾ ಮಟ್ಟದಲ್ಲಿ ಮಡಿವಾಳ ಮಾಚಿದೇವ ಜಯಂತಿಯನ್ನು ಫೆಬ್ರುವರಿ 1 ರಂದು ಗುರುಭವನದಲ್ಲಿ, ಛತ್ರಪತಿ ಶಿವಾಜಿ ಜಯಂತಿಯನ್ನು ಫೆ.19 ರಂದು ಶಿವಾಜಿ ನಗರದ ಸಮುದಾಯ ಭವನದಲ್ಲಿ ಹಾಗೂ ಫೆ.20 ರಂದು ದಿ.ದೇವರಾಜ ಅರಸು ಭವನದಲ್ಲಿ ಸರ್ವಜ್ಞ ಜಯಂತಿಯನ್ನು, ಫೆಬ್ರುವರಿ 19 ರಂದು ಕಾಯಕ ಶರಣರ ಜಯಂತಿಯನ್ನು ಆಚರಿಸಲು ಸಮಾಜದ ಮುಖಂಡರು ನಿರ್ಧರಿಸಿದರು. ಆದರೆ ಫೆಬ್ರುವರಿ 1ರ ಬದಲಾಗಿ ಫೆಬ್ರುವರಿ 11ನೇ ತಾರೀಖ ರಾಣೇಬೆನ್ನೂರಿನಲ್ಲಿ ಸವಿತಾ ಮಹರ್ಷಿ ಅವರ ಜಯಂತಿ ಹಾಗೂ ಫೆಬ್ರುವರಿ 15 ರಂದು ನಡೆಯಬೇಕಾಗಿದ್ದ ಸೇವಾಲಾಲ ಜಯಂತಿಯನ್ನು ಫೆ.23ರ ನಂತರ ನಡೆಸಲು ಸಮಾಜದ ಮುಖಂಡರು ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಜಿಲ್ಲಾಡಳಿತ ಲಿಖಿತ ರೂಪದಲ್ಲಿ ಬದಲಿ ದಿನಾಂಕ ಹಾಗೂ ಕಾರ್ಯಕ್ರಮ ನಡೆಸುವ ಸ್ಥಳ ಕುರಿತಂತೆ ಪತ್ರ ಸಲ್ಲಿಸಲು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಎಲ್ಲ ಶರಣರ ಜಯಂತಿಗಳನ್ನು ಶಾಲಾಗಳಲ್ಲಿ ಆಚರಿಸುವಂತೆ ಸುತ್ತೋಲೆ ಹೊರಡಿಸಲು ಅಪರ ಜಿಲ್ಲಾಧಿಕಾರಿಗಳಿಗೆ ಸಮಾಜದ ವಿವಿಧ ಮುಖಂಡರು ಮನವಿ ಮಾಡಿಕೊಂಡರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಶಶಿಕಲಾ ಹುಡೇದ, ವಾರ್ತಾಧಿಕಾರಿ ಬಿ.ಆರ್.ರಂಗನಾಥ್ ಹಾಗೂ ವಿವಿಧ ಸಮಾಜದ ಮುಖಂಡರು, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ