ದಾವಣಗೆರೆ:
ಸ್ವಸ್ತ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕ್ರೀಡೆ ಸಹಕಾರಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅಭಿಪ್ರಾಯಪಟ್ಟರು.
ನಗರದ ಪ್ರೌಢಶಾಲಾ ಆವರಣದಲ್ಲಿರುವ ಟೆನ್ನಿಸ್ ಕೋರ್ಟ್‍ನಲ್ಲಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆ ಹಾಗೂ ದಾವಣಗೆರೆ ವೈದ್ಯರ ಟೆನ್ನಿಸ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಐಎಂಎ ಸದಸ್ಯರುಗಳಿಗಾಗಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಟೆನ್ನಿಸ್ ಪಂದ್ಯಾವಳಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಮನುಷ್ಯ ಉತ್ತಮವಾದ ಆರೋಗ್ಯ, ಮಾನಸಿಕ ನೆಮ್ಮದಿ ಹಾಗೂ ಸಂತೋಷದಾಯಕ ಜೀವನ ನಡೆಸಲು ಟೆನ್ನಿಸ್ ಸೇರಿದಂತೆ ಇತರೆ ಕ್ರೀಡೆಗಳನ್ನು ಬಿಟ್ಟರೆ, ಬೇರೆ ಯಾವ ಪರ್ಯಾಯ ಮಾರ್ಗಗಳಿಲ್ಲ. ಈ ನಿಟ್ಟಿನಲ್ಲಿ ಇದನ್ನು ಪ್ರತಿಯೊನ್ನರೂ ಅರ್ಥ ಮಾಡಿಕೊಂಡು ದಿನದಲ್ಲಿ ಸ್ವಲ್ಪ ಹೊತ್ತಾದರೂ ಟೆನ್ನಿಸ್ ಸೇರಿದಂತೆ ಇತರೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇಂದು ಇಲ್ಲಿ ವೈದ್ಯರ ರಾಜ್ಯ ಮಟ್ಟದ ಟೆನ್ನಿಸ್ ಪಂದ್ಯಾವಳಿ ಆಯೋಜಿಸಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಕಳೆದ ಹತ್ತು ವರ್ಷಗಳ ಹಿಂದೆ ಭಾರತೀಯ ವೈದ್ಯಕೀಯ ಸಂಘ(ಐಎಂಎ)ದಲ್ಲಿ ದಾವಣಗೆರೆಯಲ್ಲಿ ಡಿಸ್ಟ್ರಿಕ್ಟ್ ಟೆನ್ನಿಸ್ ಚಾಪ್ಟರ್ ಆರಂಭವಾಯಿತು. ಅಂದಿನಿಂದ ಇಂದಿನ ವರೆಗೆ ವೈದ್ಯರು ನಗರದಲ್ಲಿ ಟೆನ್ನಿಸ್ ಪ್ರಾಕ್ಟಿಸ್ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ನಗರದಲ್ಲಿ ಪ್ರೌಢಶಾಲಾ ಆವರಣದಲ್ಲಿ, ಆಫಿಸರ್ಸ್ ಕ್ಲಬ್ ಹಾಗೂ ದಾವಣಗೆರೆ ಕ್ಲಬ್ ಈ ಮೂರು ಕಡೆಗಳಲ್ಲಿ ಟೆನ್ನಿಸ್ ಕೋರ್ಟ್‍ಗಳಿದ್ದು, ಈ ಮೂರು ಅಂಕಣಗಳ ಸದುಪಯೋಗ ಪಡೆಸಿಕೊಂಡು ನೀವು (ವೈದ್ಯರು) ಟೆನ್ನಿಸ್ ಆಡುವುದರ ಜೊತೆಗೆ ನಿಮ್ಮ ಮನೆಯ ಸದಸ್ಯರನ್ನು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಏಕೆಂದರೆ, ಸಾರ್ವಜನಿಕರು ಆಟವಾಡಿ ಆರೋಗ್ಯ ಮತ್ತು ಮಾನಸಿಕ ಸ್ಥಿಮಿತ ಕಾಪಾಡಿಕೊಳ್ಳುವುದರಿಂದ ಅಪರಾಧಗಳ ಸಂಖ್ಯೆ ಕಡಿಮೆಯಾಗಿ, ಪೊಲೀಸರಿಗೂ ಕೆಲಸ ಕಡಿಮೆ ಆಗಲಿದೆ ಎಂದು ನುಡಿದರು.
ಜಿಲ್ಲಾ ಟೆನ್ನಿಸ್ ಅಸೋಸಿಯೇಷನ್‍ನ ಪ್ರಧಾನ ಕಾರ್ಯದರ್ಶಿ ಹಾಗೂ ನಿವೃತ್ತ ಡಿವೈಎಸ್‍ಪಿಯು ಆದ ಚಂದ್ರಪ್ಪ ಮಾತನಾಡಿ, ಇಂದು ನಡೆಯುತ್ತಿರುವ ವೈದ್ಯರ ರಾಜ್ಯ ಮಟ್ಟದ ಟೆನ್ನಿಸ್ ಪಂದ್ಯಾವಳಿಯಲ್ಲಿ ಬಹಳಷ್ಟು ಜನ ವೈದ್ಯರು ಹೆಸರು ನೊಂದಾಯಿಸಿಕೊಂಡಿರುವುದು ಸಂತಸದ ಸಂಗತಿಯಾಗಿದೆ. ಏಕೆಂದರೆ, ಬಿಡುವಿಲ್ಲದ ಅವಧಿಯಲ್ಲೂ ಕ್ರೀಡೆಯಲ್ಲಿ ಭಾಗವಹಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಟೂರ್ನಮೆಂಟ್ ಕಮಿಟಿಯ ಅಧ್ಯಕ್ಷ ಡಾ.ಶ್ರೈಶೈಲ ಎಂ. ಬ್ಯಾಡಗಿ, ಈ ಟೆನ್ನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ವೈದ್ಯರು ಅತ್ಯುತ್ಸಾಹದಿಂದ ಕ್ರೀಡೆಯಲ್ಲಿ ಭಾಗವಹಿಸಿ ಏಂಜಾಯ್ ಮಾಡುವ ಮೂಲಕ ಬೇರೆ ಜಿಲ್ಲೆಗಳಿಂದ ಬಂದಿರುವ ವೈದ್ಯರು ನಮ್ಮ ದಾವಣಗೆರೆಯ ಸವಿನೆನಪುಗಳನ್ನು ನಿಮ್ಮ ಜಿಲ್ಲೆಗೆ ತೆಗೆದುಕೊಂಡು ಹೋಗಬೇಕೆಂದು ಶುಭ ಹಾರೈಸಿದರು.
ರಾಜ್ಯದ ವಿವಿಧ ಜಿಲ್ಲೆಗಳ 90 ಮಂದಿ ವೈದ್ಯರು ಈ ಟೆನ್ನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಭಾನುವಾರ ಸಂಜೆಯ ವರೆಗೂ ಹೈಸ್ಕೂಲ್ ಪೀಲ್ಡ್‍ನಲ್ಲಿರುವ ಟೆನ್ನಿಸ್ ಕೋರ್ಟ್ ಹಾಗೂ ದಾವಣಗೆರೆ ಕ್ಲಬ್‍ನಲ್ಲಿರುವ ಕ್ಲೇ ಟೆನ್ನಿಸ್ ಕೋರ್ಟ್‍ನಲ್ಲಿ ಟೂರ್ನಿ ನಡೆಯಲಿದ್ದು, ಜ.26ರ ಸಂಜೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್.ಎಸ್. ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ.ಪಿ.ನಾಗರಾಜ್, ಟೂರ್ನಿಮೆಂಟ್ ಕಮಿಟಿಯ ಛೇರ್ಮನ್ ಡಾ.ಎಚ್.ಎಲ್.ಸುಬ್ಬರಾವ್, ಡಾ.ಕರ್ಜಗಿ, ಡಾ.ನಾಗಪ್ರಕಾಶ್, ಡಾ.ಮಾಲ್ವೆಗೌಡ ಮತ್ತಿತರರು ಉಪಸ್ಥಿತರಿದ್ದರು. ಕು.ಸೃಷ್ಟಿ ಪ್ರಾರ್ಥಿಸಿದರು. ಡಾ.ಗಿರೀಶ್ ಸ್ವಾಗತಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ