ದಾವಣಗೆರೆ :
ಮಹಿಳೆಯರು ಮಕ್ಕಳಿಗೆ ಆಚಾರ, ವಿಚಾರ ಮತ್ತು ಸಂಸ್ಕೃತಿ ಕಲಿಸುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕೆಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ ಕರೆ ನೀಡಿದರು.ನಗರದ ಎ.ವಿ.ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ್ದ ಮಹಿಳಾ ಸಾಂಸ್ಕೃತಿಕ ಉತ್ಸವವನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆ ಸಾಮಾನ್ಯ ಅಲ್ಲ ಎಂಬುದಕ್ಕೆ ನಾರಿಯರು ಪೈಲಟ್, ರೈಲು ಚಾಲಕಿ ಸೇರಿದಂತೆ ಎಲ್ಲಾ ವಲಯಗಳಲ್ಲೂ ಸಾಧನೆ ಮಾಡಿರುವುದೇ ಸಾಕ್ಷಿಯಾಗಿದೆ. ಅಲ್ಲದೆ, ಇತ್ತೀಚೆಗೆ ಸುಪ್ರೀಂ ಕೋರ್ಟ್ ಸ್ತ್ರೀಯರಿಗೆ ಸೇನೆಯ ಕಮಾಂಡರ್ ಹುದ್ದೆಯನ್ನು ಅಲಂಕರಿಸಲು ಅವಕಾಶ ಕಲ್ಪಿಸಿರುವುದು ಮಹಿಳೆಯರ ಸಾಮಥ್ರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ತಾಯಿ, ಪತ್ನಿ, ಮಗಳು, ಸಹೋದರಿ, ಗೆಳತಿ ಹೀಗೆ ಎಲ್ಲಾ ಪಾತ್ರ ನಿಭಾಯಿಸುವ ಮಹಿಳೆಯೇ ಕುಟುಂಬದ ಆಧಾರ ಸ್ತಂಭವಾಗಿ ದ್ದಾಳೆ. ಇದಕ್ಕೆ ಮಹಿಳೆಯರು ಜಂಬಾ ಪಡಬಾರದು. ಏಕೆಂದರೆ, ಇವತ್ತು ನಾನು ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿದ್ದೇನೆ. ಮತ್ತಷ್ಟು ಮಹಿಳೆಯರು ಬೇರೆ, ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆಂದರೆ, ಅದಕ್ಕೆ ಅವರ ಮನೆಯ ಪುರುಷರ ಸಹಕಾರ ಇದೆ ಎಂಬುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಮಹಿಳೆ ಮತ್ತು ಪುರುಷ ಒಂದು ಬಂಡಿಯ ಜೋಡೆತ್ತು ಗಳಿದ್ದಂತೆ, ಇಬ್ಬರ ಪೈಕಿ ಯಾರೇ ಒಬ್ಬರೂ ಹಿಂದೆ ಸರಿದರೆ, ಸಂಸಾರ ಎಂಬ ಬಂಡಿ ಮುಂದೆ ಸಾಗುವುದಿಲ್ಲ. ಹೀಗಾಗಿ ಇಬ್ಬರೂ ಒಬ್ಬರನ್ನೊಬ್ಬರು ಅರಿತು ನಡೆಯಬೇಕು. ಆದ್ದರಿಂದ ಕೆಲ ಮಹಿಳೆಯರು ಪುರುಷರನ್ನು ಅಲ್ಲಗೆಳೆಯುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಮಾತನಾಡಿ, ಎಲ್ಲಿ ನಾರಿಯರನ್ನು ಪೂಜಿಸುತ್ತಾರೊ ಅಲ್ಲಿ ದೇವತೆಗಳು ನೆಲೆಸಿರುತ್ತವೆ. ಇದರ ಅರ್ಥ ಮಹಿಳೆ ದೇವರಷ್ಟೇ ಸಮಾನಳು ಎಂಬುದಾಗಿದೆ. ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಲ್ಲದು ಎಂಬುದನ್ನು ಈಗಾಗಲೇ ಸಾಧಿಸಿ ತೋರಿಸಿದ್ದೇವೆ ಎಂದರು.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ತಾಯಿಯೇ ಮೊದಲು ಗುರು ಈ ಘೋಷಣೆಗಳು ಮಹಿಳೆಯರ ಸಾಮಥ್ರ್ಯವನ್ನು ಬಿಂಬಿಸುತ್ತವೆ ಎಂದು ವಿಶ್ಲೇಷಿಸಿದ ಅವರು, ಇಂದು ಎಲ್ಲಾ ಪರೀಕ್ಷೆಗಳ ಫಲಿತಾಂಶಗಳಲ್ಲೂ ವಿದ್ಯಾರ್ಥಿನಿಯರು ಮೇಗೈ ಸಾಧಿಸುತ್ತಿರುವುದು ನಮ್ಮ ಸಾಧನೆಯ ಸಂಕೇತವಾಗಿದೆ. ಆದ್ದರಿಂದ ಮಹಿಳೆಯು ಪುರುಷರಿಗಿಂತ ದೈಹಿಕ ಮತ್ತು ಮಾನಸಿಕವಾಗಿ ಸದೃಢಳಾಗಿದ್ದಾಳೆ ಎಂದರೆ, ಅತಿಶಯೋಕ್ತಿ ಆಗಲಾರದು ಎಂದು ಹೇಳಿದರು.
ಭೂಮಿ ತೂಕದ ಹೆಣ್ಣು ಎಂಬ ವಾಕ್ಯ ಮಹಿಳೆಯ ಆತ್ಮವಿಶ್ವಾಸ, ನಿಷ್ಠೆ ಮತ್ತು ಸಹನೆಯನ್ನು ಬಿಂಬಿಸಲಿದೆ. ಮಹಿಳೆ ಮತ್ತು ಸದೃಢತೆ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ನಾವು ಪುರುಷರಿಗಿಂತ ಅಲ್ಪರು ಎಂಬ ಕೀಳರಿಮೆ ನಿಮ್ಮಲ್ಲಿ ಇದ್ದರೆ ಮೊದಲು ಅದನ್ನು ಮನಸ್ಸಿನಿಂದ ಕಿತ್ತು ಹೊರಗೆ ಹಾಕುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಸದುಪಯೋಗ ಪಡೆಯುವ ಮೂಲಕ ಸಾಧನೆಯತ್ತ ಮುನ್ನುಗ್ಗಬೇಕೆಂದು ಕರೆ ನೀಡಿದರು.
ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ಮಾತನಾಡಿ, ಮಹಿಳೆ ಎಂದರೆ ಸಂಸ್ಕೃತಿ. ಸಂಸ್ಕೃತಿ ಎಂದರೆ ಮಹಿಳೆ. ಮಹಿಳೆ ಕುರಿತಾದ ಆರೋಗ್ಯಕರ ಚರ್ಚೆಗಳಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಗಾದೆ ಮಾತುಗಳು, ಜಾನಪದ ಕಲೆಗಳು, ನೃತ್ಯ, ಸಾಹಿತ್ಯ ಮತ್ತು ಸಂಗೀತ ಸೇರಿದಂತೆ ಎಲ್ಲಾ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದರು.
ಮಹಿಳಾ ಸಾಂಸ್ಕೃತಿಕ ಉತ್ಸವದ ಪ್ರಯುಕ್ತ ಪೌರಕಾರ್ಮಿಕ ಮಹಿಳೆಯರಿಗೆ ರಂಗೋಲಿ ಬಿಡಿಸುವ ಸ್ಪರ್ಧೆ ಮತ್ತು ಕಾಲೇಜು ವಿದ್ಯಾರ್ಥಿನಿಯರಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಎವಿಕೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಶಿವಪ್ರಕಾಶ್.ಪಿ.ಎಸ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ್ ಕುರ್ಕಿ, ಎಸ್.ಜೆ.ಜೆ.ಎಂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ರಾಜೇಶ್ವರಿ ಅಣ್ಣಿಗೇರಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
