ತುಮಕೂರು
ತುಮಕೂರು ಮಹಾನಗರ ಪಾಲಿಕೆಯ ಅಧಿಕಾರ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೈತ್ರಿ ಉಂಟಾಗಿದೆಯಾದರೂ, ಅಧಿಕಾರ ಹಿಡಿಯಲು ಕ್ಷಣಗಣನೆ ಆರಂಭವಾಗಿದ್ದರೂ, ಇದೀಗ ಜೆಡಿಎಸ್‍ನ 10 ಸದಸ್ಯರುಗಳ ಪೈಕಿ ಮೂವರು ಪಕ್ಷದ ವಿಪ್ ನಿರಾಕರಿಸಿದ್ದಾರೆಂಬ ಸುದ್ದಿ ಊಹಾಪೋಹಗಳಿಗೆಡೆಮಾಡಿದೆ.
ಜೆಡಿಎಸ್ ಧುರೀಣ ಹಾಗೂ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ತುಮಕೂರಿನ ನಿವಾಸದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಪಾಲಿಕೆಯ ಹಾಲಿ ಮೇಯರ್ ಲಲಿತಾ ರವೀಶ್ (21 ನೇ ವಾರ್ಡ್-ಕುವೆಂಪು ನಗರ) ಸದಸ್ಯರುಗಳಾದ ಟಿ.ಕೆ.ನರಸಿಂಹಮೂರ್ತಿ (23 ನೇ ವಾರ್ಡ್- ಸತ್ಯಮಂಗಲ) ಮತ್ತು ಎ.ಶ್ರೀನಿವಾಸ್ (20 ನೇ ವಾರ್ಡ್- ಹನುಮಂತಪುರ) ವಿಪ್ ಸ್ವೀಕರಿಸಲು ನಿರಾಕರಿಸಿದ್ದಾರೆ ಹಾಗೂ ಸಾಮೂಹಿಕ ಪ್ರವಾಸದಿಂದಲೂ ದೂರ ಉಳಿದಿದ್ದಾರೆ.
ಈ ವಿಷಯವನ್ನು ಬಿಜೆಪಿ ಸದಸ್ಯರು ಬಹಿರಂಗಪಡಿಸುತ್ತಿದ್ದು, ಜನವರಿ 30 ರ ಚುನಾವಣೆ ಸಂದರ್ಭದಲ್ಲಿ ಇದರ ಪರಿಣಾಮ ಕಂಡುಬರಬಹುದೆಂದು ಊಹಿಸುತ್ತಿದ್ದಾರೆ.
ವಾಸ್ತವವೇ ಬೇರೆ
ಆದರೆ ವಾಸ್ತವ ಸಂಗತಿಯೇ ಬೇರೆಯಾಗಿದೆ. ಈ ಮೂವರು ಸದಸ್ಯರುಗಳು ವಿಪ್ ನಿರಾಕರಿಸಲು ಮತ್ತು ಪ್ರವಾಸದಿಂದ ದೂರ ಉಳಿಯಲು ಕಾರಣವೇ ಬೇರೆಯಾಗಿದೆಯೆಂದು ಮೂಲಗಳು ಸ್ಪಷ್ಟಪಡಿಸಿವೆ. ಸದರಿ ಸಭೆಯಲ್ಲಿ ಮೈತ್ರಿ ವಿಚಾರವಾಗಿ ಮುಕ್ತ ಚರ್ಚೆ ನಡೆಯುತ್ತಿತ್ತು. ಅನೇಕ ಭಿನ್ನಾಭಿಪ್ರಾಯಗಳೂ ವ್ಯಕ್ತಗೊಂಡವು. ಅಂತಿಮವಾಗಿ ಎಲ್ಲರೂ ಎಸ್.ಆರ್.ಶ್ರೀನಿವಾಸ್ ಅವರ ಮಾತಿಗೆ ಒಪ್ಪಿಗೆ ಕೊಟ್ಟರು.
ಹೀಗೆ ಒಪ್ಪಿಗೆ ಸೂಚಿಸುವಾಗ ವಿಪ್ ವಿಚಾರ ಪ್ರಸ್ತಾಪವಾಯಿತು. ಆಗ ಈ ಮೂವರು ಸದಸ್ಯರುಗಳು ವಿಪ್ ಸ್ವೀಕರಿಸಲು ನಿರಾಕರಿಸಿದರು. ನಾವು ಈ ಪಕ್ಷವನ್ನು ಕಟ್ಟಿದವರು. ಈ ಪಕ್ಷಕ್ಕೆ ನಾವು ಮುಖಂಡರೂ ಹೌದು. ಹೀಗಿರುವಾಗ ನಮಗೇಕೆ ವಿಪ್ ಅಗತ್ಯವಿದೆ? ನಾವೇಕೆ ಸ್ವೀಕರಿಸಬೇಕು? ನಾವೇಕೆ ಪ್ರವಾಸಕ್ಕೆ ಹೋಗಬೇಕು? ಎಂಬ ಪ್ರಶ್ನೆಗಳನ್ನು ಮುಂದಿಟ್ಟರು. ಪಕ್ಷದ ತೀರ್ಮಾನಕ್ಕೆ ನಾವು ಬದ್ಧರೆಂದು ನಾವು ಈಗಾಗಲೇ ಮಾತು ಕೊಟ್ಟಿದ್ದೇವೆ. ಆ ಮಾತಿಗೆ ಅನುಗುಣವಾಗಿ ಜನವರಿ 30 ರಂದು ಚುನಾವಣೆಗೆ ಬಂದು ಮೈತ್ರಿ ಪರವಾಗಿ ನಾವು ಮತ ನೀಡುತ್ತೇವೆ. ನಾವು ಮಾತು ತಪ್ಪುವುದಿಲ್ಲ ಎಂದು ಈ ಮೂವರೂ ಖಡಕ್ ಆಗಿ ಹೇಳಿದ್ದಾರೆ. ಇದು ವಾಸ್ತವ ವಿಚಾರ ಎಂಬುದು ಮೂಲಗಳು ಬಹಿರಂಗಪಡಿಸಿರುವ ಸಂಗತಿ.
ಒಟ್ಟಿಗೆ ಬಂದು ಮತದಾನ
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ಸಂಖ್ಯಾಬಲ 22 ಆಗಿದೆ. ಇದರಲ್ಲಿ ಪಕ್ಷೇತರರಾದ ಇಬ್ಬರು ಸದಸ್ಯರೂ ಇದ್ದಾರೆ. ಜೊತೆಗೆ ಜೆಡಿಎಸ್‍ನ ಓರ್ವ ವಿಧಾನ ಪರಿಷತ್ ಸದಸ್ಯರೂ ಇದ್ದು, ಒಟ್ಟು ಸಂಖ್ಯೆ 23 ಆಗಲಿದೆ. ಪ್ರಸ್ತುತ ಪ್ರವಾಸ ತೆರಳಿರುವ ಎಲ್ಲ ಸದಸ್ಯರುಗಳೂ ಜ.30 ರಂದು ಬೆಳಗ್ಗೆ ತುಮಕೂರು ನಗರಕ್ಕೆ ಆಗಮಿಸಿ ಒಂದೆಡೆ ಸೇರುವರು. ಬಳಿಕ ಪ್ರವಾಸಕ್ಕೆ ಹೋಗದಿರುವ ಈ ಮೂವರು ಜೆಡಿಎಸ್ ಸದಸ್ಯರನ್ನೂ ಜೊತೆಗೆ ಸೇರಿಸಿಕೊಂಡು ಒಟ್ಟಾಗಿ 22 ಸದಸ್ಯರುಗಳು ನೇರವಾಗಿ ತುಮಕೂರು ಮಹಾನಗರ ಪಾಲಿಕೆ ಕಚೇರಿಗೆ ಆಗಮಿಸಿ, ಮತದಾನದಲ್ಲಿ ಪಾಲ್ಗೊಳ್ಳುವರು. ಇದು ಖಚಿತ ಎಂದು ಮೂಲಗಳು ಹೇಳುತ್ತಿವೆ.
ಬಿಜೆಪಿ ಯತ್ನಿಸಬಹುದಿತ್ತು
ಈ ಮಧ್ಯೆ ಬಿಜೆಪಿ ವಲಯದಲ್ಲಿ ನಿರಾಶೆ ಆವರಿಸಿದೆ. ಮೇಯರ್ ಚುನಾವಣೆಯನ್ನು ಬಿಜೆಪಿ ಎದುರಿಸಬಹುದಿತ್ತು ಹಾಗೂ ಸುಲಭವಾಗಿ ವಿಜಯವನ್ನೂ ಸಾಧಿಸಬಹುದಿತ್ತು. ಆದರೆ ಏಕೋ ಏನೋ ನಮ್ಮ ತುಮಕೂರು ನಗರದ ಶಾಸಕರು ಈ ವಿಷಯದಲ್ಲಿ ಗಟ್ಟಿ ಮನಸ್ಸು ಮಾಡಲಿಲ್ಲ ಎಂಬ ನಿರಾಶೆಯ ಮಾತೊಂದು ಬಿಜೆಪಿ ಸದಸ್ಯರಲ್ಲೇ ಕೇಳಿಬರುತ್ತಿರುವುದು ಮತ್ತೊಂದು ಬೆಳವಣಿಗೆಯಾಗಿದೆ.ಎಂದಿನಂತೆ ವಿರೋಧ ಪಕ್ಷದ ನಾಯಕನ ಸ್ಥಾನ ಬಿಜೆಪಿಗೆ ಲಭಿಸಲಿದೆ. ಜೊತೆಗೆ ಒಂದು ಅಥವಾ ಎರಡು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವನ್ನೂ ಬಿಜೆಪಿ ಪಡೆದುಕೊಳ್ಳಲಿದೆ. ಈ ಸ್ಥಾನಗಳ ಮೇಲೆ ಈಗ ಬಿಜೆಪಿ ಸದಸ್ಯರುಗಳು ಕಣ್ಣಿಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ