ಅಯೋಧ್ಯೆಯಲ್ಲಿ ವಿರಾಜಮಾನನಾದ ರಾಮಲಲ್ಲಾ………..!

ಬೆಂಗಳೂರು/ತುಮಕೂರು

     ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬ ಕೋಟ್ಯಾಂತರ ರಾಮಭಕ್ತರು, ಹಿಂದೂಗಳ ಕನಸು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಸಾರಥ್ಯದಲ್ಲಿ ನೆರವೇರಿದ್ದು, ಭಾರತದ ಚರಿತ್ರೆಯಲ್ಲಿ ಐತಿಹಾಸಿಕ ಘಟನೆಯೆನಿಸಿತು.

ಪ್ರತಿಷ್ಠಾಪನೆ:

      ಬಿಗಿ ಭದ್ರತೆಯ ಸರ್ಪಗಾವಲಿನಲ್ಲಿ ಸೋಮವಾರ ಬೆಳಿಗ್ಗೆ ಅಯೋಧ್ಯೆ ಪ್ರವೇಶಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭವ್ಯ ಸ್ವಾಗತ ನೀಡಿ ಮಂದಿರದೊಳಗೆ ಕರೆದೊಯ್ಯಲಾಯಿತು. ಮಧ್ಯಾಹ್ನ 12.28 ರಿಂದ 12.39ರವರೆಗಿನ ಶುಭ ಅಭಿಜನ್ ಲಗ್ನದಲ್ಲಿ ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯವನ್ನು ಪ್ರಧಾನಿ ನೆರವೇರಿಸಿದ್ದು, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್‌ಭಾಗವತ್, ಮಂದಿರ ಟ್ರಸ್ಟಿಗಳಾದ ಉಡುಪಿ ಪೇಜಾವರ ಮಠದ ಶ್ರೀವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳು, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿ ಬೆನ್ ಹಾಗೂ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್‌ದಾಸ್ ಅವರು ಸಾಥ್ ನೀಡಿದರು.

     ಅತ್ತ ಗರ್ಭಗುಡಿಯೊಳಗೆ ಪ್ರಾಣ ಪ್ರತಿಷ್ಠೆ ಕಾರ್ಯ ಸಾಂಗವಾಗಿ ನೆರವೇರಿದರೆ, ಇತ್ತ ಮಂದಿರದ ಹೊರಗಡೆ ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಸಾಧು ಸಂತರು, ಆಮಂತ್ರಿತ ಗಣ್ಯರು, ಜನಪ್ರತಿನಿಧಿಗಳು, ರಾಮಭಕ್ತರು, ಜೈ ಶ್ರೀರಾಮ್ ಜೈ ಶ್ರೀರಾಮ್ ಉದ್ಘೋಷ ಮೊಳಗಿಸುತ್ತಾ ಭಜನೆಯಲ್ಲಿ ಪಾಲ್ಗೊಂಡರು. ಪ್ರಸಿದ್ಧ ಗಾಯಕರಿಂದ ರಘುಪತಿ ರಾಘವ ರಾಜರಾಂ ಭಜನೆ ಸೇರಿದಂತೆ ರಾಮ ಸಂಕೀರ್ತನೆ ಮೊಳಗಿತು. ಪ್ರತಿಷ್ಠಾಪನೆ ನೆರವೇರಿಸಿ ಹೊರ ಬಂದ ಪ್ರಧಾನಿಮೋದಿಯವರು ದೇವಾಲಯ ನಿರ್ಮಾಣದಲ್ಲಿ ತೊಡಗಿದ ಕಾರ್ಮಿಕರಿಗೆ ಪುಷ್ಪವೃಷ್ಟಿ ಮಾಡಿ ಅಭಿನಂದಿಸಿದ್ದು ವಿಶೇಷವೆನಿಸಿತು.

ಶ್ರೀರಾಮ ಏಕತೆಯ ಸಂಕೇತ:

     ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಯವರು ಕೋಟ್ಯಾಂತರ ಭಾರತೀಯರ ಮನಸ್ಸಿನಲ್ಲಿ ವಿರಾಜಮಾನನಾಗಿರುವ ರಾಮ ಏಕತೆಯ ಸಂಕೇತ. ಭಾರತದ ಕಣಕಣದಲ್ಲಿ ರಾಮನಲ್ಲಿದ್ದಾನೆ. ಎಲ್ಲಾ ಭಾಷೆಗಳನ್ನು ಮೀರಿದವನೂ ರಾಮ. ಕಲಿಯುಗದಲ್ಲೂ ರಾಮ ಜೀವಂತವಾಗಿದ್ದು, ರಾಮಯಣ ಅನಂತವಾಗಿದೆ. ಅಯೋಧ್ಯೆ ರಾಮಮಂದಿರ ನಿರ್ಮಾಣದ ಹಿಂದೆ ರಾಮನ ಆಶೀರ್ವಾದವಿದೆ. ಹಲವರ ತ್ಯಾಗ ಬಲಿದಾನದ ಫಲವಿದು ಇದು ವಿಜಯವಲ್ಲ.

     ವಿನಯದ ಕ್ಷಣ. ಮಂದಿರ ನಿರ್ಮಾಣಕ್ಕೆ ಹಲವು ಕಷ್ಟಗಳು, ಸಂಘರ್ಷಗಳು ಎದುರಾದವು. ಎಲ್ಲವೂ ಸುಖಾಂತ್ಯವಾಗಿ ಮಂದಿರ ನಿರ್ಮಾಣಗೊಂಡಿದೆ. ಇಂದಿನಿAದ ಹೊಸ ಕಾಲ ಚಕ್ರ. ಇದು ಅಂತ್ಯ ಅಲ್ಲ. ಆರಂಭ. ರಾಮರಾಜ್ಯ ಸ್ಥಾಪನೆಗೆ ಇದು ಸಕಾಲವಾಗಿದೆ. ನಾವು ಬೀಳದೆ. ಮುನ್ನುಗ್ಗಬೇಕು ಎಂದು ಕರೆಕೊಟ್ಟರು.

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಗಣ್ಯರು

    ಕೇಂದ್ರ ಸಚಿವರಾದ ಅಮಿತ್‌ಷಾ, ರಾಜನಾಥ್‌ಸಿಂಗ್, ಬಾಲಿವುಡ್ ನಟರಾಜ್ ಅಮಿತಾಭ್ ಬಚ್ಚನ್, ರಣಬೀರ್ ಕಪೂರ್, ಆಲಿಯಾ ಭಟ್, ಸ್ಯಾಂಡಲ್‌ವುಡ್ ನಟ ರಿಷಬ್ ಶೆಟ್ಟಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ, ಖ್ಯಾತ ಕ್ರಿಕೆಟಿಗ ಭಾರತರತ್ನ ಸಚಿನ್ ತೆಂಡೂಲ್ಕರ್, ಮುಕೇಶ್ ಅಂಬಾನಿ ಕುಟುಂಬಸ್ಥರು, ಗಾಯಕರಾದ ಸೋನು ನಿಗಮ್, ತೆಲುಗು ನಟ ಚಿರಂಜೀವಿ, ಅವರ ಪುತ್ರ ರಾಮ್ ಚರಣ್ ತೇಜ್ ಸೇರಿ ಸುಮಾರು 7 ಸಾವಿರಕ್ಕೂ ಅಧಿಕ ಗಣ್ಯರು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಸಾಕ್ಷಿಯಾದರು. ರಾಮಜನ್ಮಭೂಮಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಷಿ, ಮೊದಲೇ ಘೋಷಿಸಿದಂತೆ ಇಂಡಿಯಾ ಒಕ್ಕೂಟದ ಕಾಂಗ್ರೆಸ್, ಟಿಎಂಸಿ ನಾಯಕರು ಗೈರಾಗಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap