ತ್ರಿಶೂರ್:
ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರನ್ನು ‘ಭಾರತದ ಮಾತೆ’ ಎಂದು ಮತ್ತು ದಿವಂಗತ ಕಾಂಗ್ರೆಸ್ ಮುಖ್ಯಮಂತ್ರಿ ಕೆ ಕರುಣಾಕರನ್ ಅವರನ್ನು ‘ಧೈರ್ಯಶಾಲಿ ಆಡಳಿತಗಾರ’ ಎಂದು ಕೇಂದ್ರ ಸಚಿವ, ಬಿಜೆಪಿ ನಾಯಕ ಸುರೇಶ್ ಗೋಪಿ ಅವರು ಬಣ್ಣಿಸಿದ್ದಾರೆ.
ತ್ರಿಶೂರ್‌ನ ಪುಂಕುನ್ನಂನಲ್ಲಿರುವ ಕರುಣಾಕರನ್ ಅವರ ಸ್ಮಾರಕ “ಮುರಳಿ ಮಂದಿರಂ” ಗೆ ಭೇಟಿ ನೀಡಿ, ಗೌರವ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಸುರೇಶ್ ಗೋಪಿ, ಕರುಣಾಕರನ್ ಮತ್ತು ಹಿರಿಯ ಮಾರ್ಕ್ಸ್‌ವಾದಿ ಇ ಕೆ ನಾಯನಾರ್ ಅವರನ್ನು ತಮ್ಮ ರಾಜಕೀಯ ಗುರುಗಳು ಎಂದು ಹೇಳಿದ್ದಾರೆ.
ಕುತೂಹಲಕಾರಿ ವಿಚಾರ ಎಂದರೆ ಕಳೆದ ಏಪ್ರಿಲ್ 26 ರಂದು ನಡೆದ ಲೋಕಸಭೆ ಚುನಾವಣೆಯಲ್ಲಿ ಕರುಣಾಕರನ್ ಅವರ ಪುತ್ರ ಮತ್ತು ಕಾಂಗ್ರೆಸ್ ಮುಖಂಡ ಕೆ ಮುರಳೀಧರನ್ ಅವರ ವಿರುದ್ಧ ಸುರೇಶ್ ಗೋಪಿ ಅವರು ತ್ರಿಶೂರ್ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.
ಕರುಣಾಕರನ್ ಸ್ಮಾರಕಕ್ಕೆ ಭೇಟಿ ನೀಡಿದ ಬಗ್ಗೆ ಯಾವುದೇ ರಾಜಕೀಯ ಅರ್ಥವನ್ನು ಕಲ್ಪಿಸಬೇಡಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಒತ್ತಾಯಿಸಿದ ಬಿಜೆಪಿ ನಾಯಕ, ತಮ್ಮ ‘ಗುರು’ಗಳಿಗೆ ನಮನ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.
ಇಕೆ ನಾಯನಾರ್ ಮತ್ತು ಅವರ ಪತ್ನಿ ಶಾರದಾ ಟೀಚರ್ ಮತ್ತು ಕರುಣಾಕರನ್ ಹಾಗೂ ಅವರ ಪತ್ನಿ ಕಲ್ಯಾಣಿಕುಟ್ಟಿ ಅಮ್ಮ ಅವರೊಂದಿಗೆ ತಾವು ಆತ್ಮೀಯತೆ ಹೊಂದಿರುವುದಾಗಿ ಸುರೇಶ್ ಗೋಪಿ ತಿಳಿಸಿದ್ದಾರೆ.
ಸುರೇಶ್ ಗೋಪಿ ಅವರು ಇಂದಿರಾ ಗಾಂಧಿಯನ್ನು ಭಾರತದ ಮಾತೆ ಮತ್ತು ಕರುಣಾಕರನ್ ಅವರು ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ಪಿತಾಮಹ ಎಂದು ಕೂಡ ಹೇಳಿದ್ದಾರೆ. ಇದಲ್ಲದೆ ಪ್ರಸಿದ್ಧ ಲೂರ್ದ್ ಮಾತಾ ಚರ್ಚ್‌ಗೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.