ನವದೆಹಲಿ:
ತನ್ನ ಭಕ್ತರಾದರೂ ದುರಹಂಕಾರ ಹೊಂದಿದ್ದವರಿಗೆ ರಾಮನು 241 ಸ್ಥಾನ ಬರುವಂತೆ ಮಾಡಿದನು. ರಾಮನ ಮೇಲೆ ನಂಬಿಕೆ ಇಲ್ಲದವರಿಗೆ 234 ಸ್ಥಾನಗಳನ್ನು ಮಾತ್ರ ನೀಡಿದನು. ಇದು ದೇವರ ನ್ಯಾಯ ಎಂದು ಹೇಳಿಕೆ ನೀಡಿದ್ದ ಆರ್ ಎಸ್ ಎಸ್ ಮುಖಂಡ ಇಂದ್ರೇಶ್ ಕುಮಾರ್ ಯೂ ಟರ್ನ್ ಹೊಡೆದಿದ್ದಾರೆ.
ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿರುವ ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್, ರಾಮನನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಿ, ಮಂದಿರ ನಿರ್ಮಾಣಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಸರ್ಕಾರ ರಚಿಸಿದ್ದಾರೆ ಎಂದು ಹೇಳುವ ಮೂಲಕ ತೇಪೆ ಹಚ್ಚುವ ಪ್ರಯತ್ನ ಮಾಡಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖಂಡ ಇಂದ್ರೇಶ್ ಕುಮಾರ್ ಇದೀಗ ಡ್ಯಾಮೇಜ್ ಕಂಟ್ರೋಲ್ ಮಾಡುವ ಹೇಳಿಕೆ ನೀಡಿದ್ದು, ಭಗವಾನ್ ರಾಮನ ಸಂಕಲ್ಪವನ್ನು ತೆಗೆದುಕೊಂಡವರು ಈಗ ಅಧಿಕಾರದಲ್ಲಿದ್ದಾರೆ ಎಂದಿದ್ದಾರೆ. ಗುರುವಾರ ಜೈಪುರ ಸಮೀಪದ ಕನೋಟಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಇಂದ್ರೇಶ್ ಕುಮಾರ್, ಲೋಕಸಭೆ ಚುನಾವಣೆಯಲ್ಲಿ ಸ್ವಂತವಾಗಿ ಸಂಪೂರ್ಣ ಬಹುಮತವನ್ನು ಗೆಲ್ಲಲು ಸಾಧ್ಯವಾಗದ ಆಡಳಿತ ಪಕ್ಷದ ವೈಫಲ್ಯಕ್ಕೆ ಅದರ ಅಹಂಕಾರವೇ ಕಾರಣ ಎಂದಿದ್ದರು.
ರಾಮನ ಭಕ್ತಿ ಮಾಡಿದವರು ಕ್ರಮೇಣ ದುರಹಂಕಾರಿಯಾದರು. ಆ ಪಕ್ಷವನ್ನು ಅತಿದೊಡ್ಡ ಪಕ್ಷವೆಂದು ಘೋಷಿಸಲಾಯಿತು. ಆದರೆ ದುರಹಂಕಾರದ ಕಾರಣದಿಂದ ರಾಮನು 241ಕ್ಕೆ ನಿಲ್ಲಿಸಿದನು ಎಂದು ಅವರು ಹೇಳಿದ್ದರು. ಇದು ಬಿಜೆಪಿಗೆ ತೀವ್ರ ಮುಜುಗರ ಉಂಟುಮಾಡಿತ್ತು. ಈ ಹಿನ್ನೆಲೆಯಲ್ಲಿ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿರುವ ಇಂದ್ರೇಶ್ ಕುಮಾರ್ ಬಿಜೆಪಿಯನ್ನು ಹೊಗಳಿದ್ದಾರೆ. ರಾಮನನ್ನು ವಿರೋಧಿಸಿದವರೆಲ್ಲರೂ ಅಧಿಕಾರದಿಂದ ಹೊರಗುಳಿದಿದ್ದಾರೆ. ಆದರೆ ರಾಮನ ಸಂಕಲ್ಪವನ್ನು ತೆಗೆದುಕೊಂಡವರು ಈಗ ಅಧಿಕಾರದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಇಂದ್ರೇಶ್ ಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದು, ಅವರು ಸಂತೋಷವಾಗಿರಲಿ.. ಭಗವಾನ್ ರಾಮ ನಮಗೆ ಕೆಲಸ ಮಾಡಲು ಆದೇಶ ನೀಡಿದ್ದಾನೆ ಮತ್ತು ನಾವು ಕೆಲಸ ಮಾಡುತ್ತಿದ್ದೇವೆ, ಇದನ್ನು ಹೇಳುವವರು ತಮ್ಮ ಬಗ್ಗೆ ಯೋಚಿಸಬೇಕು ಎಂದು ಆರ್‌ಎಸ್‌ಎಸ್ ನಾಯಕರ ಟೀಕೆಗೆ ಮಾಂಝಿ ಪ್ರತಿಕ್ರಿಯಿಸಿದ್ದಾರೆ.
