ಚಿತ್ರದುರ್ಗ :
ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಅಂಗವಾಗಿ ಫೆ. 10 ರಂದು ಜಿಲ್ಲೆಯ 01 ರಿಂದ 19 ವರ್ಷದೊಳಗಿನ 4.55 ಲಕ್ಷ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಗಳನ್ನು ನೀಡುವ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದು, ಪ್ರತಿಯೊಂದು ಮಕ್ಕಳಿಗೂ ತಪ್ಪದೆ ಮಾತ್ರೆ ನೀಡಿಕೆ ಆಗಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಆಯೋಜಿಸುವ ಕುರಿತು ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಂತುಹುಳು ನಿವಾರಣಾ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು, ಅಂಗನವಾಡಿ ಹಾಗೂ ಕಾಲೇಜುಗಳಲ್ಲಿನ 01 ರಿಂದ 19 ವರ್ಷ ವಯೋಮಾನದೊಳಗಿನ ಎಲ್ಲ ಮಕ್ಕಳಿಗೆ ಫೆ. 10 ರಂದು ಜಂತುಹುಳು ನಿವಾರಕ ಅಲ್ಬೆಂಡಾಜೋಲ್ ಮಾತ್ರೆಯನ್ನು ನೀಡಬೇಕು. ಕೆಲವು ಮಕ್ಕಳು ಅಂಗನವಾಡಿ ಹಾಗೂ ಶಾಲೆಯಿಂದಲೂ ಹೊರಗುಳಿಯುವ ಸಾಧ್ಯತೆಗಳಿದ್ದು, ಈ ರೀತಿ ಹೊರಗುಳಿದ ಮಕ್ಕಳನ್ನು ಸೋಂಕು ಮುಕ್ತರಾಗಿಸಲು ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕರ ಮುಖಾಂತರ ಅಲ್ಬೆಂಡಾಜೋಲ್ ಮಾತ್ರೆ ವಿತರಣೆ ಮಾಡಬೇಕು.
ಜಿಲ್ಲೆಯಲ್ಲಿ 1 ರಿಂದ 2 ವರ್ಷದೊಳಗಿನ ಒಟ್ಟು 30983 ಮಕ್ಕಳು ಹಾಗೂ 2 ರಿಂದ 19 ವರ್ಷದೊಳಗಿನ 4,24,429 ಮಕ್ಕಳು ಸೇರಿದಂತೆ ಒಟ್ಟು 455412 ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನೀಡುವ ಗುರಿ ಹೊಂದಲಾಗಿದೆ. ಮಾತ್ರೆಯನ್ನು ಶಾಲೆ, ಅಂಗನವಾಡಿಗಳಲ್ಲಿಯೇ ಮಕ್ಕಳಿಗೆ ಸೇವನೆಗೆ ನೀಡಬೇಕು. ಯಾವುದೇ ಕಾರಣಕ್ಕೂ ಮಾತ್ರೆಯನ್ನು ಮನೆಗೆ ತೆಗೆದುಕೊಂಡು ಹೋಗಲು ಅವಕಾಶ ನೀಡಬಾರದು. ಫೆ.10 ರಂದು ಕಾರಣಾಂತರಗಳಿಂದ ಯಾವುದಾದರೂ ಮಕ್ಕಳು ಮಾತ್ರೆ ಸೇವನೆಯಿಂದ ವಂಚಿತರಾಗಿದ್ದಲ್ಲಿ, ಅಂತಹ ಮಕ್ಕಳಿಗೆ ನಂತರದ ದಿನದಲ್ಲಿ ತಪ್ಪದೆ ಮಾತ್ರೆ ನೀಡಬೇಕು. ಮಾತ್ರೆಯನ್ನು ಮಕ್ಕಳಿಗೆ ಸೇವನೆಗೆ ನೀಡುವುದಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಹಾಗೂ ತರಬೇತಿಯನ್ನು ಸಂಬಂಧಪಟ್ಟವರಿಗೆ ಮೊದಲೇ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಅವರು, ಜಂತುಹುಳು ನಿವಾರಕ ಮಾತ್ರೆಯನ್ನು ಸಂಬಂಧಪಟ್ಟವರ ಮೇಲ್ವಿಚಾರಣೆಯಲ್ಲಿಯೇ ಮಕ್ಕಳಿಗೆ ನೀಡಬೇಕು. ಜಂತುಹುಳು ನಿವಾರಕ ಮಾತ್ರೆ ನೀಡಿಕೆ ಕಾರ್ಯಕ್ರಮ ಕುರಿತು ಪ್ರತಿಯೊಂದು ಗ್ರಾಮಗಳಲ್ಲಿಯೂ ವ್ಯಾಪಕ ಪ್ರಚಾರ ನೀಡಬೇಕು. ಒಟ್ಟಾರೆ ಕಾರ್ಯಕ್ರಮ ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ಸೂಕ್ತ ಮೇಲ್ವಿಚಾರಣೆಯೊಂದಿಗೆ ಯಶಸ್ವಿಯಾಗಬೇಕು ಎಂದು ಸೂಚನೆ ನೀಡಿದರು.
ಕಾರ್ಯಕ್ರಮ ಅನುಷ್ಠಾನಾಧಿಕಾರಿಯಾಗಿರುವ ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಕುಮಾರಸ್ವಾಮಿ ಅವರು ಮಾತನಾಡಿ, ಜಿಲ್ಲೆಯಲ್ಲಿ 4.55 ಲಕ್ಷ ಮಕ್ಕಳಿಗೆ ಜಂತುಹುಳು ನಿವಾರಕ ಮಾತ್ರೆ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೆ ಅಗತ್ಯ ಮಾತ್ರೆಗಳು ಜಿಲ್ಲೆಗೆ ಸರಬರಾಜಾಗಿವೆ. ಜಿಲ್ಲೆಯ 2250 ಶಾಲೆಗಳು, 2333-ಅಂಗನವಾಡಿ ಕೇಂದ್ರಗಳು, 28-ನರ್ಸಿಂಗ್ ಕಾಲೇಜು, 51-ಐಟಿಐ, 9-ಪಾಲಿಟೆಕ್ನಿಕ್, 55-ಪದವಿ ಕಾಲೇಜು ಸೇರಿದಂತೆ ಒಟ್ಟು 5216 ಸಂಸ್ಥೆಗಳಲ್ಲಿ ಮಕ್ಕಳಿಗೆ ಜಂತುಹುಳು ನಿವಾರಕ ಮಾತ್ರೆ ನೀಡಲಾಗುವುದು.
ಅನೈರ್ಮಲ್ಯ, ಸೋಂಕಿತ ಮಣ್ಣಿನ ಸಂಪರ್ಕ, ಬಯಲು ಮಲವಿಸರ್ಜನೆ ಕಾರಣಗಳಿಂದ ಜಂತುಹುಳುಗಳು ಮಾನವನ ದೇಹ ಪ್ರವೇಶಿಸಿ, ಅವರ ಪೋಷಕಾಂಶ ಹೀರಲು ಪ್ರಾರಂಭಿಸುತ್ತವೆ. ಕೊಕ್ಕೆಹುಳು, ಚಾಟಿಹುಳು, ದುಂಡುಹುಳು ಇವು ಪ್ರಮುಖ ಜಂತುಹುಳುಗಳಾಗಿದ್ದು, ಇದರಿಂದಾಗಿ ಮಕ್ಕಳು ಪದೇ ಪದೇ ರೋಗಕ್ಕೆ ತುತ್ತಾಗುವುದು, ರಕ್ತಹೀನತೆ, ಕಲಿಕಾ ಸಾಮಥ್ರ್ಯ ಕುಸಿತ, ದೇಹ ಬೆಳವಣಿಗೆಯಲ್ಲಿ ಕುಂಠಿತ ಹಾಗೂ ಅಪೌಷ್ಠಿಕತೆಗೆ ಕಾರಣವಾಗುತ್ತದೆ. ಇದನ್ನು ತಡೆಗಟ್ಟಲು ಮಕ್ಕಳಿಗೆ ಜಂತುನಿವಾರಕ ಮಾತ್ರೆ ನೀಡುವ ಕಾರ್ಯಕ್ರಮವನ್ನು ಇಲಾಖೆ ಆಯೋಜಿಸಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ. ರೇಣುಪ್ರಸಾದ್, ತಾಲ್ಲೂಕು ವೈದ್ಯಾಧಿಕಾರಿ ಡಾ. ಗಿರೀಶ್, ಡಾ. ಆನಂದಪ್ರಕಾಶ್, ಡಾ. ಸುಧಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಆರೋಗ್ಯ ಇಲಾಖೆ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ