ಪರಿಹಾರ ಹುಡುಕಲು ಹೈರಾಣಾಗುತ್ತಿರುವ ತೆರಿಗೆ ವೃತ್ತಿನಿರತರು

ವಿಶೇಷ ವರದಿ : ಸಾ.ಚಿ.ರಾಜಕುಮಾರ

      ಒಂದು ದೇಶ, ಒಂದು ತೆರಿಗೆ ಘೋಷಣೆಯಡಿ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ ಬರುವ ಜುಲೈ 1ಕ್ಕೆ ಮೂರು ವರ್ಷ ತುಂಬುತ್ತದೆ. 2017ರ ಜುಲೈ 1 ರಿಂದ ಜಾರಿಯಾದ ಇಡೀ ರಾಷ್ಟ್ರಕ್ಕೆ ಅನ್ವಯಿಸಬಹುದಾದ ಒಂದು ಮಹೋನ್ನತ ಹೆಜ್ಜೆ ಎಂದೇ ಬಣ್ಣಿಸಲ್ಪಟ್ಟ ಜಿ.ಎಸ್.ಟಿ. ಮೂರು ವರ್ಷಗಳಾಗುತ್ತಾ ಬಂದರೂ ಸಮಸ್ಯೆಗಳ ಸುಳಿಯಿಂದ ಹೊರಬರಲು ಸಾಧ್ಯವಾಗಿಲ್ಲ. 

     ಜಿ.ಎಸ್.ಟಿ. ಜಾರಿಗೆ ಬಂದ ಹೊಸದರಲ್ಲಿ ಕೆಲವರು ಹೇಳಿದ್ದೇನೆಂದರೆ ಕೆಲವು ತಿಂಗಳು ಈ ಸಮಸ್ಯೆ ಇರುತ್ತದೆ, ವರ್ಷ ಕಳೆದ ನಂತರ ಎಲ್ಲವೂ ಸರಿ ಹೋಗುತ್ತದೆ. ಜಿ.ಎಸ್.ಟಿ. ವ್ಯಾಪ್ತಿಗೆ ಎಲ್ಲರೂ ಒಳಪಡುತ್ತಾರೆ ಎಂದೆಲ್ಲಾ ಹೇಳಿಕೊಂಡಿದ್ದರು. ಇದನ್ನು ನಂಬಿಯೂ ಇದ್ದರು. ಅದಕ್ಕೆ ಪೂರಕವಾಗಿಯೇ ಎಲ್ಲರೂ ಹೊಂದಿಕೊಳ್ಳಲು ಪ್ರಯತ್ನಿಸಿದರು. ಆದರೆ ಜಿ.ಎಸ್.ಟಿ. ಜಾರಿಯಾದ ಸಂದರ್ಭದಲ್ಲಿ ಇದ್ದ ಗೊಂದಲ, ಅಸ್ಪಷ್ಟತೆಗಳು ಇಂದಿಗೂ ಮುಂದುವರೆದಿವೆ.

    ಕೆಲವಷ್ಟೇ ಬಗೆಹರಿದಿದ್ದರೆ ಮತ್ತೆ ಕೆಲವು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಇದರಿಂದ ಹೆಚ್ಚು ಸಂಕಟಕ್ಕೆ ಒಳಗಾಗುತ್ತಿರುವವರು ಲೆಕ್ಕ ಪರಿಶೋಧಕರು, ತೆರಿಗೆ ವೃತ್ತಿನಿರತರು. ಇವರಷ್ಟೇ ಅಲ್ಲ, ತೆರಿಗೆ ಇಲಾಖೆಯ ಅಧಿಕಾರಿಗಳಂತೂ ಸಮಸ್ಯೆಗಳಿಗೆ ಉತ್ತರ ಕೊಡಲಾಗದೆ ನಿರ್ಲಿಪ್ತ ಸ್ಥಿತಿಗೆ ಬಂದು ನಿಂತಿದ್ದಾರೆ.

    ವರ್ಷಗಳು ಉರುಳಿದರೂ ಜಿ.ಎಸ್.ಟಿ. ರಿಟರ್ನ್ ಸಲ್ಲಿಕೆ ಪ್ರಕ್ರಿಯೆ ಸಮರ್ಪಕಗೊಂಡಿಲ್ಲ, ಸರಳವೂ ಆಗಿಲ್ಲ. ಪರಿಣಾಮ ತೆರಿಗೆ ಸಂಗ್ರಹದ ಮೇಲೆ ಬಿದ್ದಿದೆ. ಪಾರದರ್ಶಕತೆಯೂ ಇಲ್ಲಿ ಕಾಣುತ್ತಿಲ್ಲ. ವರ್ತಕರು ಮತ್ತು ವಹಿವಾಟುದಾರರು ಈ ವ್ಯಾಪ್ತಿಗೆ ಒಳಪಟ್ಟು ಗೊಣಗಾಡುತ್ತಲೇ ಇದ್ದಾರೆ. ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವವರು ಹಲವು ಸಂಕಷ್ಟಗಳನ್ನು ಮತ್ತು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ವಂಚಕರು ಮಾತ್ರ ಹಿಂದಿನ ಸ್ಥಿತಿಯಲ್ಲಿಯೇ ಮುಂದುವರೆದಿದ್ದಾರೆ.

    ಅಂತಹವರನ್ನು ಮಟ್ಟ ಹಾಕಲು ಸಾಧ್ಯವಾಗಿಲ್ಲ. ಬಿಲ್‍ಗಳ ದುರ್ಬಳಕೆ ನಿಂತಿಲ್ಲ. ಇ-ವೇ ಬಿಲ್‍ನಲ್ಲೂ ಸೋರಿಕೆಯಾಗುತ್ತಿರುವ ವ್ಯಾಪಕ ಆರೋಪ ಕೇಳಿಬರುತ್ತಲೇ ಇದೆ. ಸರಕು ಮತ್ತು ಸೇವಾ ಕಾಯ್ದೆಗೆ ತಕ್ಕಂತೆ ಆಧುನಿಕ ಸಾಫ್ಟ್‍ವೇರ್ ಸಿದ್ಧಗೊಳ್ಳಬೇಕು, ಕಾಯ್ದೆಗೆ ಅನುಗುಣವಾಗಿ ನಿಯಮಗಳು ರೂಪುಗೊಳ್ಳಬೇಕು ಎಂಬ ಒತ್ತಾಯಗಳು ಈ ಕಾಯ್ದೆ ಜಾರಿಗೆ ಬಂದಾಗ ಕೇಳಿಬಂದವು. ಆರಂಭದಲ್ಲಿ ಇದ್ದ ಸಮಸ್ಯೆಗಳು ಬಗೆಹರಿದಿಲ್ಲ. ಮತ್ತಷ್ಟು ಸಮಸ್ಯೆಗಳು ಹುಟ್ಟಿಕೊಳ್ಳುತ್ತಲಿವೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹಲವರು ಜಿ.ಎಸ್.ಟಿ. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದಾರೆ. ಜಿ.ಎಸ್.ಟಿ. ವ್ಯಾಪ್ತಿಗೆ ಒಳಪಟ್ಟು ನೋಂದಣಿಯಾದ ಡೀಲರ್‍ಗಳೂ ಸಹ ಅತಂತ್ರ ಸ್ಥಿತಿಯಲ್ಲಿ ಇದ್ದಾರೆ.

    ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳು ಆನ್‍ಲೈನ್‍ನಲ್ಲೇ ನಡೆಯಬೇಕು. ಈ ತೆರಿಗೆ ತುಂಬಲಿಕ್ಕಾಗಿಯೇ ಒಂದು ಜಿಎಸ್‍ಟಿಎನ್ ವೆಬ್‍ಸೈಟ್ ಇದೆ. ಈ ವೆಬ್‍ಸೈಟ್‍ಗೆ ಲಾಗಿನ್ ಆಗಿ ಎಲ್ಲ ವಿವರಗಳನ್ನು ನಮೂದಿಸಿ ಅಪ್‍ಲೋಡ್ ಮಾಡುವುದೇ ಒಂದು ದೊಡ್ಡ ಸಾಹಸವಾಗಿ ಪರಿಗಣಿತವಾಗಿದೆ. ಈ ವೆಬ್‍ಸೈಟ್ ಎಲ್ಲ ಸಂದರ್ಭಗಳಲ್ಲೂ ಕಾರ್ಯನಿರ್ವಹಿಸುವುದಿಲ್ಲ.

    ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ವೆಬ್‍ಸೈಟ್ ತೆರೆದುಕೊಂಡರೂ ಓಟಿಪಿ ಸಂಖ್ಯೆ ಬಾರದೆ ಇರುವುದು, ಡೇಟಾ ಸೇವ್ ಆಗದೇ ಇರುವುದು, ಚಲನ್ ಕ್ರೆಡಿಟ್ ಲೆಡ್ಜರ್‍ಗೆ ವರ್ಗಾವಣೆಯಾಗಿ ಅಲ್ಲಿ ನಮೂದಾಗದೇ ಇರುವುದು, ಪರಿಣಾಮ ತನ್ನದಲ್ಲದ ತಪ್ಪಿಗೆ ವಿಳಂಬ ಶುಲ್ಕ ಪಾವತಿಸಬೇಕಾಗಿರುವುದು… ಇಂತಹ ಹಲವು ಹತ್ತು ಸಮಸ್ಯೆಗಳು ನಿತ್ಯ ಕಾಡುತ್ತಿವೆ.

      ಎಲ್ಲ ದಾಖಲೆಗಳನ್ನು ಸಮರ್ಪಕವಾಗಿಟ್ಟುಕೊಂಡು ವೆಬ್‍ಪೋರ್ಟಲ್‍ಗೆ ಹಾಕಿದರೂ ಅಲ್ಲಿನ ವಿಳಂಬ ನೀತಿಯಿಂದಾಗಿ ಡೀಲರ್‍ಗಳು, ತೆರಿಗೆ ವೃತ್ತಿನಿರತರು, ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಗಮನಿಸಬೇಕಾದ ಮತ್ತೊಂದು ಪ್ರಮುಖ ಸಮಸ್ಯೆ ಎದುರಾಗುತ್ತಿರುವುದು ನಿಗದಿತ ಸಮಯದಲ್ಲಿ ಜಿ.ಎಸ್.ಟಿ. ಪಾವತಿಸಿದರೂ ತಾಂತ್ರಿಕ ವಿಳಂಬ ನೀತಿಯಿಂದಾಗಿ ಕ್ರೆಡಿಟ್ ಲೆಡ್ಜರ್‍ಗೆ ಮಾಹಿತಿ ರವಾನೆಯಾಗಿ ಅಲ್ಲಿ ನೋಂದಣಿಯಾಗದೇ ಇರುವುದು.

     ಬಹಳಷ್ಟು ಜನ ತಲೆಕೆಡಿಸಿಕೊಳ್ಳುತ್ತಿರುವುದು ಇದೇ ವಿಷಯಕ್ಕಾಗಿ. ವಾಯಿದೆಗೆ ಮುನ್ನ ಅಂದರೆ, ನಾಲ್ಕೈದು ದಿನಗಳ ಮುಂಚಿತವಾಗಿಯೇ ಮಾಸಿಕ ತೆರಿಗೆ ಪಾವತಿಸಲಾಗುತ್ತದೆ. ಹೀಗೆ ಪಾವತಿಯಾದ ಜಿ.ಎಸ್.ಟಿ. ತೆರಿಗೆ ಸಂಬಂಧಿತ ದಾಖಲೆಯಲ್ಲಿ ನಮೂದಾಗಲೇಬೇಕು. ಆದರೆ ತಡವಾಗಿ ನಮೂದಾಗುವುದರಿಂದ ಮುಂಚಿತವಾಗಿ ಪಾವತಿಸಿದರೂ ಅದು ಪ್ರಯೋಜನಕ್ಕೆ ಬರುತ್ತಿಲ್ಲ. ಯಾವಾಗ ಕ್ರೆಡಿಟ್ ಲೆಡ್ಜರ್‍ಗೆ ನಮೂದಾಗುತ್ತದೆಯೋ ಆ ದಿನಾಂಕವನ್ನೇ ಪರಿಗಣಿಸಲಾಗುತ್ತಿದೆ.

      ಹೇಗೋ ಮುಂಚಿತವಾಗಿಯೇ ತನ್ನ ಕರ್ತವ್ಯ ನಿರ್ವಹಿಸಿದ್ದೇನೆಂದು ಡೀಲರ್‍ಗಳು ನೆಮ್ಮದಿಯಿಂದ ಕುಳಿತುಕೊಳ್ಳುವಂತೆಯೂ ಇಲ್ಲ. ತಡವಾಗಿದ್ದಕ್ಕೆ ವಿಳಂಬ ಶುಲ್ಕ ಹೇರಲಾಗುತ್ತದೆ. ಅದೆಷ್ಟೋ ಮಂದಿ ಇಂತಹ ವಿಳಂಬ ಶುಲ್ಕ ಪಾವತಿಸಿರುವ ಉದಾಹರಣೆಗಳಿವೆ. ವಿಳಂಬ ಶುಲ್ಕವನ್ನು ಪಾವತಿಸುತ್ತೇವೆ. ಆದರೆ ಅದಕ್ಕೂ ನೋಟೀಸ್ ನೀಡಲಾಗುತ್ತದೆ. ಇದು ಯಾವ ನ್ಯಾಯ ಎನ್ನುತ್ತಾರೆ ಕೆಲವರು.

      ಜಿ.ಎಸ್.ಟಿ. ಪೋರ್ಟಲ್ ಸಮಸ್ಯೆಗಳ ಬಗ್ಗೆ ತೆರಿಗೆ ವೃತ್ತಿನಿರತ ಅನೇಕರು ಈ ಸಮಸ್ಯೆಗಳನ್ನು ಪರಿಹರಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯುತ್ತಲೇ ಬಂದಿದ್ದಾರೆ. ಆದರೆ ಈವರೆಗೂ ಸಮರ್ಪಕ ಉತ್ತರಗಳು ಮಾತ್ರ ದೊರಕಿಲ್ಲ. ಜಿ.ಎಸ್.ಟಿ. ಕೌನ್ಸಿಲ್, ಹೆಲ್ಪ್ ಡೆಸ್ಕ್ ಮುಂತಾದವುಗಳಿಗೆ ಸಮಸ್ಯೆಗಳನ್ನು ರವಾನಿಸಿದರೂ ಉತ್ತರ ಕೊಡುವ ಮಾರ್ಗಗಳು ಅಲ್ಲಿ ಕಂಡುಬರುತ್ತಿಲ್ಲ. ಇದರಿಂದ ಬೇಸತ್ತ ಅನೇಕರು ನೇರವಾಗಿ ವಿತ್ತ ಸಚಿವಾಲಯ, ಪ್ರಧಾನ ಮಂತ್ರಿಗಳ ಕಾರ್ಯಾಲಯಕ್ಕೂ ಪತ್ರಗಳನ್ನು ರವಾನಿಸಿದ್ದಾರೆ.

      ಆದರೆ ಅಲ್ಲಿಂದಲೂ ಸಮರ್ಪಕ ಉತ್ತರಗಳು ಸಿಗದೆ ಇರುವುದು ಬೇಸರ ತರಿಸಿದೆ. ತುಮಕೂರಿನ ಉದಾಹರಣೆಯನ್ನೇ ತೆಗೆದುಕೊಂಡರೆ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಲೆಕ್ಕ ಪರಿಶೋಧಕರು, ಜಿಎಸ್.ಟಿ. ತಜ್ಞರೂ ಆಗಿರುವ ಎಸ್.ಪ್ರಕಾಶ್ ಅವರು ಸುಮಾರು 50ಕ್ಕೂ ಹೆಚ್ಚು ಪತ್ರಗಳನ್ನು ವಿವಿಧ ಇಲಾಖೆಗಳಿಗೆ, ಅಧಿಕಾರಿಗಳಿಗೆ ರವಾನಿಸಿದ್ದಾರೆ. ಇವರು ಬರೆದಿರುವ ಪತ್ರಗಳ ಒಂದಿಷ್ಟು ಸಾರಾಂಶವನ್ನು ಇಲ್ಲಿ ನೀಡಲಾಗಿದೆ.

    ಜಿ.ಎಸ್.ಟಿ. ಕಾಯ್ದೆ ಬಂದ ನಂತರ ಹಲವು ಗೊಂದಲಗಳು ಎದುರಾಗುತ್ತಲೇ ಇವೆ. ಮೂಲ ಕಾನೂನು ಹಾಗೂ ನಂತರದ ತಿದ್ದುಪಡಿಗಳು, ಸುತ್ತೋಲೆಗಳು, ಪತ್ರಿಕಾ ಪ್ರಕಟಣೆಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಬದಲಿಗೆ ಗೊಂದಲ ಮೂಡಿಸುತ್ತಿವೆ. ಈ ಅಸ್ಪಷ್ಟತೆಯಿಂದ ವರ್ತಕ ಸಮುದಾಯ ಮತ್ತು ವೃತ್ತಿನಿರತರು ನಿತ್ಯ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಎದುರಾಗಿರುವ ಗೊಂದಲಗಳ ಬಗ್ಗೆ ಸ್ಪಷ್ಟತೆ ನೀಡಬೇಕು ಹಾಗೂ ಪಾಲಿಸಿ ವಿಷಯಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡಬೇಕು ಎಂದು 2019ರಲ್ಲಿ ಅನೇಕ ಮನವಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿಕೊಟ್ಟಿದ್ದಾರೆ.

     ವಿತ್ತ ಸಚಿವಾಲಯ, ಪ್ರಧಾನಿಯವರ ಕಾರ್ಯಾಲಯಕ್ಕೂ ರವಾನಿಸಿದ್ದಾರೆ. ಆದರೆ ಅಲ್ಲಿಂದ ಬರುತ್ತಿರುವ ಉತ್ತರಗಳು ಮಾತ್ರ ಸಮಾಧಾನಕರವಾಗಿಲ್ಲ. ತಾವು ಎತ್ತಿರುವ ಸಮಸ್ಯೆಗಳು ಪಾಲಿಸಿ ವಿಷಯಕ್ಕೆ ಸಂಬಂಧಿತ ಅಂಶಗಳಾಗಿರುವುದರಿಂದ ಅದಕ್ಕೆ ಸಂಬಂಧಿಸಿದ ಇಲಾಖೆಗೆ ವರ್ಗಾವಣೆ ಮಾಡುತ್ತಿದ್ದೇವೆ ಎಂದು ಅರ್ಜಿಯನ್ನೇ ಮುಕ್ತಾಯಗೊಳಿಸಲಾಗಿದೆ. ಹೀಗಾದರೆ ನಾವು ಯಾರನ್ನು ಕೇಳಬೇಕು? ಎಲ್ಲಿ ಪ್ರಶ್ನಿಸಬೇಕು ಎನ್ನುತ್ತಾರೆ ಎಸ್.ಪ್ರಕಾಶ್.

ಮುಂದುವರೆಯುವುದು…..

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap