ತುಮಕೂರು : ಸಮಸ್ಯೆಗಳ ಆಗರವಾದ ಅಂತರಸನಹಳ್ಳಿ ಮಾರುಕಟ್ಟೆ!!

 ತುಮಕೂರು :

      ನಗರದ ಹೊರ ವಲ ಯದಲ್ಲಿರುವ ಅಂತರಸನಹಳ್ಳಿ ಮಾರುಕಟ್ಟೆಯು ಅಕ್ಷರಶ: ಸಮಸ್ಯೆಗಳ ಆಗರವಾಗಿದೆ. ಇಲ್ಲೆನೂ ಒಂದೆರಡು ಸಮಸ್ಯೆಗಳಿಲ್ಲ, ಪಟ್ಟಿ ಮಾಡುತ್ತಾ ಹೋದರೆ ಪಟ್ಟಿ ಉದ್ದವಾಗುತ್ತದೆ ವಿನ: ಸಮಸ್ಯೆಗಳು ಕಡಿಮೆಯಾಗಲಾರವು. ಮುಗಿಯದ ರಸ್ತೆ ಕಾಮಗಾರಿ, ಮಳೆ ಬಂದರೆ ಕೊಚ್ಚೆ ಗುಂಡಿಯಾಗುವ ರಸ್ತೆಗಳು, ಜೀವ ಕೈಲಿಡಿದು ಬೀದಿ ಬದಿ ವ್ಯಾಪಾರ ಮಾಡುವ ವ್ಯಾಪಾರಿಗಳು, ಇಲ್ಲದ ವಾಹನ ಪಾರ್ಕಿಂಗ್ ವ್ಯವಸ್ಥೆ, ಪದೆ ಪದೆ ಕೈ ಕೊಡುವ ವಿದ್ಯುತ್ ಮುಂತಾದ ಹಲವು ಹತ್ತು ಮೂಲಭೂತ ಸೌಕರ್ಯಗಳಿಲ್ಲದೆ, ಮಾರುಕಟ್ಟೆ ಶಾಪಗ್ರಸ್ತವಾಗಿ ಪರಿಣಮಿಸಿದೆ ಎನ್ನುತ್ತಾರೆ ಮಾರುಕಟ್ಟೆಗೆ ಮಾಲು ತರುವ ರೈತರು ಮತ್ತು ಕೊಳ್ಳಲು ಬರುವ ಗ್ರಾಹಕರು ಹಾಗೂ ಇಲ್ಲಿನ ವ್ಯಾಪಾರಿಗಳು.

ಆಮೆಗತಿ ಕಾಮಗಾರಿ :

      ಮಾರುಕಟ್ಟೆಯೊಳಗಿನ ರಸ್ತೆ ಕಾಮಗಾರಿ ಕಳೆದ ಏಪ್ರಿಲ್‍ನಲ್ಲಿ ಆರಂಭವಾಗಿದ್ದು, ಇದುವರೆಗೂ ಪೂರ್ಣವಾಗಿಲ್ಲ. ಮೊದಲನೇ ಗೇಟ್ ಎದುರಿನಲ್ಲಿ ಎಲ್ ಆಕಾರದ ರಸ್ತೆ ನಿರ್ಮಿಸಿ ಅಲ್ಲಿ ಈ ಹಿಂದೆ ಇದ್ದ ತರಕಾರಿ-ದಿನಸಿ ವ್ಯಾಪಾರಸ್ಥರಿಗೆ ವ್ಯಾಪಾರಕ್ಕೆ ಅನುಮತಿಸಲಾಗಿದೆ. ಆದರೇ ಹೂವು, ಹಣ್ಣು ಇನ್ನಿತರೇ ವಸ್ತುಗಳನ್ನು ಮಾರಾಟ ಮಾಡುವ ಮಾರುಕಟ್ಟೆಯ ಇನ್ನೂ ಸುಮಾರು ಆರು ರಸ್ತೆಗಳ ನಿರ್ಮಾಣ ಆಗದೇ ಮಳೆ ಬಂದಾಗ ರಸ್ತೆ ಗುಂಡಿಗಳಲ್ಲಿ ನೀರು ನಿಂತು ಕೊಚ್ಚೆ ಗುಂಡಿಯಾಗಿ ಪರಿಣಮಿಸಿ, ವ್ಯಾಪಾರಿಗಳು, ಗ್ರಾಹಕರು ಮತ್ತು ತಮ್ಮ ಬೆಳೆ ತಂದ ರೈತರಿಗೆ ನರಕ ಸದೃಶವಾಗುತ್ತದೆ ಎಂಬ ಆರೋಪ ಕೇಳಿ ಬಂದಿದ್ದು ಶೀಘ್ರ ಸಂಪೂರ್ಣ ರಸ್ತೆ ಕಾಮಗಾರಿ ಮುಗಿಸಿ ಸುಗಮ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕೆಂದು ಇಲ್ಲಿನ ವ್ಯಾಪಾರಿಗಳು ಎಪಿಎಂಸಿ ಆಡಳಿತವನ್ನು ಒತ್ತಾಯಿಸಿದ್ದಾರೆ.

ಜೀವ ಕೈಲಿಡಿದು ವ್ಯಾಪಾರ :

      ಸದ್ಯ ಮಾರುಕಟ್ಟೆಯೊಳಗೆ ಕಾಮಗಾರಿ ನಡೆಯುತ್ತಿದ್ದು, ಬೆಳಗ್ಗೆ 10ರ ತನಕ ಮಾತ್ರ ವ್ಯಾಪಾರ ಮಾಡಲು ಅವಕಾಶವಿದೆ. ಹಾಗಾಗಿ 10 ಗಂಟೆಯ ನಂತರ ಇಲ್ಲಿನ ಸಣ್ಣ-ಪುಟ್ಟ ಚಿಲ್ಲರೆ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮಾರುಕಟ್ಟೆ ಹೊರಗಿನ ಸರ್ವಿಸ್ ರಸ್ತೆ ಹಾಗೂ ಮಾರುಕಟ್ಟೆ ಎದುರಿನ ರಸ್ತೆಯ ಇಕ್ಕೆಲಗಳಿಗೆ ಸ್ಥಳಾಂತರಿಸಿ ರಾತ್ರಿವರೆಗೂ ವ್ಯಾಪಾರ ಮಾಡುತ್ತಾರೆ. ಈ ರಸ್ತೆಯು ಮಧುಗಿರಿ, ಕೊರಟಗೆರೆ, ಪಾವಗಡ ತಾಲ್ಲೂಕುಗಳಿಗೆ ಸಂಪರ್ಕಸುತ್ತ ಪಕ್ಕದ ಆಂಧ್ರ ರಾಜ್ಯಕ್ಕೂ ಮಾರ್ಗ ಸಾಗುತ್ತದೆ. ಆದ್ದರಿಂದ ರಸ್ತೆಯಲ್ಲಿ ಬಸ್, ಲಾರಿ, ಟ್ರಕ್, ಕಾರು ಮೊದಲಾದ ಬೃಹತ್ ಗಾತ್ರದ ಹೆಚ್ಚು ವಾಹನಗಳ ಓಡಾಟವಿದ್ದು, ಒಂದು ವೇಳೆ ವಾಹನಗಳು ವೇಗವಾಗಿ ಬಂದರೇ ಅಥವಾ ಬ್ರೇಕ್‍ಫೇಲ್ ಏನಾದ್ರೂ ಆದರೇ ಇಲ್ಲಿನ ವ್ಯಾಪಾರಿಗಳು ಮತ್ತು ಗ್ರಾಹಕರ ಜೀವಕ್ಕೆ ಸಂಚಕಾರ ಗ್ಯಾರಂಟಿ ಎನ್ನುವಂತಾಗಿದ್ದು, ಎಪಿಎಂಸಿಯವರು ಕಾಮಗಾರಿ ಮುಗಿಯುವ ತನಕ ತಾತ್ಕಲಿಕವಾಗಿಯಾದರೂ ಬದಲಿ ಜಾಗದ ವ್ಯವಸ್ಥೆ ಮಾಡಿಕೊಡಬೇಕೆಂದು ಇಲ್ಲಿನ ವ್ಯಾಪಾರಿಗಳು ಒತ್ತಾಯಿಸಿದ್ದಾರೆ.

ಮೂಲಭೂತ ಸೌಕರ್ಯಗಳೇ ಇಲ್ಲ :

     ಹೇಳಿಕೊಳ್ಳಲು ಮಾತ್ರ ದೊಡ್ಡ ಮಾರುಕಟ್ಟೆ ಆದರೇ ಇಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳೇ ಇಲ್ಲ ಎಂಬ ಆರೋಪವೂ ಕೇಳಿ ಬಂದಿದ್ದು, ಇಡೀ ಮಾರುಕಟ್ಟೆಗೆ ಒಂದೇ ಟಿಸಿ ಇದ್ದು, ಬೆಳಗ್ಗೆ ಕರೆಂಟ್ ಕೈ ಕೊಟ್ಟರೆ ಸಂಜೆವರೆಗೂ ಬರದೆ ವ್ಯಾಪಾರಿಗಳು ತಮ್ಮ ಎಲೆಕ್ಟ್ರಿಕಲ್ ಸ್ಕೇಲ್‍ಗಳನ್ನು ಚಾರ್ಜ್ ಮಾಡಿಕೊಳ್ಳಲಾಗದೇ ಯುಪಿಎಸ್ ಮೊರೆ ಹೋಗಿದ್ದಾರೆ. ಕೆಲವರು ತಮ್ಮ ಮನೆಗೆ ಹೋಗಿ ಚಾರ್ಜ್ ಮಾಡಿಕೊಂಡು ಬರುವುದು ಉಂಟು. ಬೀದಿ ದೀಪಗಳು ಸಮರ್ಪಕವಾಗಿ ಉರಿಯದೆ ಮುಂಜಾನೆಗೂ ಮುನ್ನ ಆರಂಭವಾಗುವ ಹಾಗೂ ರಾತ್ರಿ ವ್ಯಾಪಾರಕ್ಕೆ ಹಿನ್ನಡೆಯಾಗಿದೆ. ಸೂಕ್ತ ವಾಹನ ಪಾರ್ಕಿಂಗ್ ಸೌಲಭ್ಯ, ಸೆಕ್ಯುರಿಟಿ, ಕುಡಿಯುವ ನೀರು, ಶೌಚಾಲಯ, ಬಸ್‍ನಿಲ್ದಾಣ, ಕ್ಯಾಂಟೀನ್ ಇಲ್ಲದಿರುವುದು ಮಾರುಕಟ್ಟೆಯ ಒಟ್ಟಾರೇ ಮೂಲಭೂತ ಸೌಕರ್ಯಕ್ಕೆ ಧಕ್ಕೆಯಾಗಿದೆ.

 ಕರೆಂಟ್ ಬಿಲ್‍ನಲ್ಲಿ ಅನ್ಯಾಯ :

      ಇಡೀ ಮಾರುಕಟ್ಟೆಗೆ ಪೂರೈಕೆಯಾಗುವ ವಿದ್ಯುತ್‍ಗೆ ಒಂದೇ ಮೀಟರ್ ಅಳವಡಿಸಿದ್ದು, ತಿಂಗಳ ಒಟ್ಟು ಬಿಲ್‍ನ ಮೊತ್ತವನ್ನು ಭಾಗಿಸಿ ವ್ಯಾಪಾರಿಗಳಿಂದ ಬಿಲ್ ಹಣ ವಸೂಲಿ ಮಾಡುತ್ತಿದ್ದಾರೆ. 1 ಬಲ್ಪ್ ಹಾಕಿದವರಿಗೂ, 6 ಬಲ್ಪ್ ಹಾಕಿದವರಿಗೂ ಸಮಾನ ಮೊತ್ತದ ಬಿಲ್ ನೀಡುತ್ತಿದ್ದು, ಇದು ಅನ್ಯಾಯವೆಂದು ಇಲ್ಲಿನ ಸಣ್ಣ-ಪುಟ್ಟ ವ್ಯಾಪಾರಿಗಳು ವ್ಯವಸ್ಥೆಯ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

 ರೈತರು-ವ್ಯಾಪಾರಿಗಳಿಗೆ ಕಳ್ಳರ ಭಯ :

     ಮುಂಜಾನೆ 3 ಗಂಟೆಗೆಲ್ಲಾ ಆರಂಭವಾಗುವ ಮಾರುಕಟ್ಟೆಗೆ ಸ್ಥಳಿಯ ಹಾಗೂ ಅಕ್ಕ-ಪಕ್ಕದ ತಾಲ್ಲೂಕುಗಳ ರೈತರು ತಾವು ಬೆಳೆದ ಮಾಲನ್ನು ತೆಗೆದುಕೊಂಡು ವ್ಯಾಪಾರಕ್ಕೆ ಬರುತ್ತಾರೆ. ಈ ಸಂದರ್ಭದಲ್ಲಿ ಇನ್ನೂ ಕತ್ತಲೆ ಇರುವುದರಿಂದ ಇಲ್ಲಿ ಸಮರ್ಪಕ ಬೀದಿ ದೀಪ, ಸೂಕ್ತ ಪೊಲೀಸ್ ಬೀಟ್ ಮತ್ತು ಸೆಕ್ಯುರಿಟಿ ವ್ಯವಸ್ಥೆ ಇಲ್ಲದಿರುವುದರಿಂದ ರೈತರು ತಾವು ಮಾರಿದ ತಮ್ಮ ಮಾಲಿನ ಹಣವನ್ನು ತೆಗೆದುಕೊಂಡು ಹೋಗುವಾಗ ಹಾಗೂ ಮಾಲು ಕೊಳ್ಳಲು ಹಣದೊಂದಿಗೆ ಸರಿ ರಾತ್ರಿವೇಳೆ ಬರುವ ವ್ಯಾಪಾರಿಗಳಿಗೆ ಕಳ್ಳರ ಭಯವಿದ್ದು, ಇವರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂಬ ಕೂಗು ಕೇಳಿ ಬಂದಿದೆ.

 ಕೊಚ್ಚೆ-ಕಸದ ಕೊಂಪೆ :

      ಮಾರುಕಟ್ಟೆಯಲ್ಲಿ ಪ್ರತಿದಿನ ತರಕಾರಿ, ಹಣ್ಣು, ಹೂವು ಸೇರಿದಂತೆ ಇತರೆ ತ್ಯಾಜ್ಯವು ಹೇರಳವಾಗಿ ಉತ್ಪಾದನೆಯಾಗುತ್ತಿದ್ದು, 1 ಟ್ರ್ಯಾಕ್ಟರ್ ಇಟ್ಟುಕೊಂಡು ಇಡೀ ಮಾರುಕಟ್ಟೆಯ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲಾಗುತ್ತಿಲ್ಲ. ಮಾರುಕಟ್ಟೆಯೊಳಗೆ ಎಲ್ಲೆಂದರಲ್ಲಿ ಕಸ-ತ್ಯಾಜ್ಯ ಕೊಳೆತು ನಾರುತ್ತಿದ್ದು, ಉಗುಳು ಉಗಿಯುವುದಕ್ಕೂ ಮನಸ್ಸು ಬರುವುದಿಲ್ಲ. ಮೂಗು ಮುಚ್ಚಿದರೂ ತಪ್ಪದ ಚರಂಡಿ ವಾಸನೆ, ಉಸಿರಾಡಲು ಸಾಧ್ಯವಾಗದಂತಹ ಗಬ್ಬೆದ್ದು ನಾರುವ ಕಸದ ರಾಶಿ, ಮಳೆ ಬಂದರೇ ಸಾಕು ಅಲ್ಲಲ್ಲಿ ತುಂಬಿಕೊಳ್ಳುವ ಕೊಳಚೆ ನೀರು, ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೇ ಇಲ್ಲಿನ ವ್ಯಾಪಾರಿಗಳು, ತಮ್ಮ ಉತ್ಪನ್ನ ಮಾರಲು ಬರುವ ರೈತರು, ಖರೀದಿಗೆ ಬರುವ ಗ್ರಾಹಕರು ರೋಸಿ ಹೋಗಿದ್ದಾರೆ. ಇನ್ನಾದರೂ ಎಪಿಎಂಸಿ ಆಡಳಿತ ಸ್ವಚ್ಛತೆಗೆ ಸೂಕ್ತ ಕ್ರಮ ಕೈಗೊಂಡು ಮಾರುಕಟ್ಟೆ ರೋಗ ಹರಡುವ ತಾಣ ಆಗುವುದನ್ನು ತಪ್ಪಿಸಬೇಕಿದೆ ಎನ್ನುತ್ತಾರೆ ಇಲ್ಲಿನ ಹೆಸರು ಹೇಳಲು ಇಚ್ಛಿಸದ ವ್ಯಾಪಾರಿಗಳು.

       ಮಾರುಕಟ್ಟೆಯೊಳಗಿನ ರಸ್ತೆ ಕಾಮಗಾರಿ ತೀವ್ರ ನಿಧಾನವಾಗಿದ್ದು, 6 ತಿಂಗಳು ಕಳೆದ ಮೇಲೆ ಈಗ 1 ಕಡೆ ರಸ್ತೆ ನಿರ್ಮಿಸಿ ವ್ಯಾಪಾರಕ್ಕೆ ಮುಕ್ತ ಮಾಡಿದ್ದಾರೆ. ಉಳಿದ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸಲು ಇನ್ನೆಷ್ಟು ತಿಂಗಳು-ವರ್ಷ ತೆಗೆದುಕೊಳ್ಳುತ್ತಾರೋ ಗೊತ್ತಾಗುತ್ತಿಲ್ಲ. ವ್ಯಾಪಾರಕ್ಕೆ ತುಂಬಾ ಸಮಸ್ಯೆಯಾಗಿ ಜೀವನ ನಡೆಸುವುದೇ ಕಷ್ಟವಾಗಿದೆ. ಎಪಿಎಂಸಿ ಆಡಳಿತ ಮಂಡಳಿ, ಜನಪ್ರತಿನಿಧಿಗಳು ಯಾರೂ ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ.

-ನೊಂದ ವ್ಯಾಪಾರಿ, ಅಂತರಸನಹಳ್ಳಿ ಮಾರುಕಟ್ಟೆ 

 ಬೆಳೆದ ಮಾಲನ್ನು ಹಳ್ಳಿಯಿಂದ ಬಾಡಿಗೆ ಗಾಡಿ ಮಾಡಿಕೊಂಡು ಮಾರುಕಟ್ಟೆಗೆ ತರುತ್ತೇವೆ. ಇಲ್ಲಿ ರಾತ್ರಿ ವೇಳೆಯೆ ವಹಿವಾಟು ಆರಂಭವಾಗುವುದರಿಂದ ಮಾಲು ಬೆಳಗಾಗುವುದರೊಳಗೆ ಮಾರಾಟವಾಗುತ್ತದೆ. ಇಲ್ಲಿ ಸೂಕ್ತ ವಿದ್ಯುತ್ ಇಲ್ಲದೆ ಕತ್ತಲೆ ಇದ್ದು ಕಳ್ಳರ ಭಯವಿದೆ. ಬೆಳೆ ಮಾರಿದ ಹಣದ ಜೊತೆ ಊರಿಗೆ ಹೋಗುವ ತನಕ ಸಮಾಧಾನ ಇರುವುದಿಲ್ಲ. ದೂರದಿಂದ ಬಂದ ರೈತರಿಗೆ ಕಾಫಿ-ತಿಂಡಿಗೆ ಇಲ್ಲಿ ಒಂದು ಕ್ಯಾಂಟೀನ್ ಕೂಡ ಇಲ್ಲ. ಶೌಚಾಲಯ-ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ತಿಳಿದಿಲ್ಲ.

-ಶಂಕರಪ್ಪ, ಸ್ಥಳೀಯ ರೈತ

      ಸದ್ಯ ಎಪಿಎಂಸಿಯಲ್ಲಿ ಆದಾಯದ ಕೊರತೆಯ ನಡುವೆಯೂ ರೈತರು-ವ್ಯಾಪಾರಿಗಳ ಅನುಕೂಲಕ್ಕಾಗಿ ಮಾರುಕಟ್ಟೆ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ. ಆಗಾಗ್ಗೆ ವಿಪರೀತ ಮಳೆ ಬಂದಿದ್ದರಿಂದ ಕಾಮಗಾರಿ ನಿಧಾನವಾಗಿ ಅಡಚಣೆಯಾಗಿದೆ. ವಿದ್ಯುತ್, ಕುಡಿಯುವ ನೀರಿನ ಸೌಲಭ್ಯ ಮಾಡಿಕೊಡಲಾಗಿದೆ. ಕಳೆದ ವಾರ ನಾನೇ ಮಾರುಕಟ್ಟೆಗೆ ಹೋಗಿ ಕಾಮಗಾರಿ ಕುರಿತು ಪರಶೀಲಿಸಿದ್ದೆ, ಆಗ ಯಾರೂ ಸಹ ಯಾವುದೇ ಸಮಸ್ಯೆಯನ್ನು ನನ್ನ ಗಮನಕ್ಕೆ ತಂದಿಲ್ಲ. ಕಾಮಗಾರಿ ನಡೆಯುತ್ತಿರುವುದರಿಂದ ಚರಂಡಿ ಸೇರಿದಂತೆ ಕೆಲ ಸಣ್ಣಪುಟ್ಟ ಅಡಚಣೆಗಳಾಗಿವೆ. ಅವುಗಳನ್ನು ಶೀಘ್ರ ಸರಿ ಪಡಿಸುತ್ತೇವೆ.

-ಪುಷ್ಪಾ, ಎಪಿಎಂಸಿ, ಕಾರ್ಯದರ್ಶಿ, ತುಮಕೂರು

 

-ಚಿದಾನಂದ್ ಹುಳಿಯಾರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap