ದಾವಣಗೆರೆ :
ಸ್ಮಾರ್ಟ್ ಸಿಟಿಯ ಬಗ್ಗೆ ಸಾರ್ವಜನಿಕರಿಂದ ‘ಸುಲಲಿತ ಜೀವನ’ ಹಾಗೂ ‘ಪುರಸಭೆಯ ಕಾರ್ಯಕ್ಷಮತೆಯ ಸೂಚ್ಯಂಕ’ದ ಬಗ್ಗೆ ಮಾಹಿತಿ ಪಡೆಯಲು ಭಾರತ ಸರ್ಕಾರವು ಇಂದಿನಿಂದ (ಫೆ.1ರಿಂದ) ತಿಂಗಳ ಪೂರ್ತಿ ಆನ್ಲೈನ್ ಸಮೀಕ್ಷೆ ಆರಂಭಿಸಲಿದೆ ಎಂದು ದಾವಣಗೆರೆ ಸ್ಮಾರ್ಟ್ಸಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ತಿಳಿಸಿದ್ದಾರೆ.
ಶುಕ್ರವಾರ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಭಾರತ ಸರ್ಕಾರದ ಸ್ಮಾರ್ಟ್ ಸಿಟೀಸ್ ಮಿಷನ್ ವತಿಯಿಂದ ಸ್ಮಾರ್ಟ್ಸಿಟಿಗೆ ಆಯ್ಕೆಯಾಗಿರುವ ನಗರಗಳಲ್ಲಿ ಪ್ರಮುಖ ಮೂಲ ಸೌಕರ್ಯಗಳನ್ನು ಒದಗಿಸುವ ಹಾಗೂ ನಾಗರೀಕರಿಗೆ ಯೋಗ್ಯವಾದ ಜೀವನ ಮಟ್ಟವನ್ನು ನೀಡುವ ಸ್ವಚ್ಛ ಮತ್ತು ಸುಸ್ಥಿರ ಪರಿಸರ ಹಾಗೂ ಉತ್ತಮ ಪರಿಹಾರಗಳಿಗೆ ಅನ್ವಯಿಸುವ ಮಾಹಿತಿ ಪಡೆಯುವುದು ಈ ಸಮೀಕ್ಷೆಯ ಉದ್ದೇಶವಾಗಿದೆ ಎಂದು ಹೇಳಿದರು.
ಪ್ರಸ್ತುತ ಇನ್ಪುಟ್ ಆಧಾರಿತ ವಿಧಾನದಿಂದ ನಗರ ಆಡಳಿತಗಳು ಫಲಿತಾಂಶ ಆಧಾರಿತ ಯೋಜನೆಗಳತ್ತ ಸಾಗಲು ಸಮೀಕ್ಷೆ ಸಹಕಾರಿಯಾಗಿದೆ. ಈ ಫಲಿತಾಂಶಗಳ ಮೌಲ್ಯಮಾಪನದಿಂದ ಸ್ಮಾರ್ಟ್ ನಗರಗಳು ಮತ್ತು ಇತರ ಅಧಿಕ ಜನಸಂಖ್ಯೆ ಹೊಂದಿರುವ ನಗರಗಳಿಗೆ ಅನುಕೂಲ ಆಗುವಂತೆ ಸಚಿವಾಲಯವು ಪ್ರಯತ್ನಿಸಲಿದೆ. ಈ ಹಿನ್ನೆಲೆಯಲ್ಲಿ ಸ್ಮಾರ್ಟ್ಸಿಟಿಗೆ ಆಯ್ಕೆಯಾಗಿರುವ 100 ಸ್ಮಾರ್ಟ್ ನಗರಗಳು ಹಾಗೂ ಅಧಿಕ ಜನಸಂಖ್ಯೆ ಹೊಂದಿರುವ 14 ನಗರಗಳು ಸೇರಿ ಒಟ್ಟು 114 ನಗರಗಳನ್ನು ಈ ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಸುಲಲಿತ ಜೀವನಕ್ಕೆ ಸಂಬಂಧಿಸಿದಂತೆ ನಾಗರಿಕರಿಗೆ ಗುಣಮಟ್ಟದ ಜೀವನ ಒದಗಿಸಲು ಶಿಕ್ಷಣ, ಆರೋಗ್ಯ, ವಸತಿ ಮತ್ತು ಆಶ್ರಯ, ಘನ ತ್ಯಾಜ್ಯ ನಿರ್ವಹಣೆ, ಚಲನ ಶೀಲತೆ, ಸುರಕ್ಷತೆ ಮತ್ತು ಭದ್ರತೆ, ಮನರಂಜನೆ ಕುರಿತು ಹಾಗೂ ಆರ್ಥಿಕ ಸಾಮಥ್ರ್ಯದ ಅಡಿಯಲ್ಲಿ ಜನರ ಆರ್ಥಿಕ ಅಭಿವೃದ್ಧಿಯ ಮಟ್ಟ, ಆರ್ಥಿಕ ಅವಕಾಶ, ಜಿನಿ ಕೋ-ಎಫಿಷಿಯೆಂಟ್ ಕುರಿತು ಮತ್ತು ಸಾಮಥ್ರ್ಯ ಉಳಿಸಿಕೊಳ್ಳುವ ಯೋಜನೆಯಡಿ ಪರಿಸರ, ಹಸಿರು ಕಟ್ಟಡಗಳು, ಶಕ್ತಿ ಬಳಕೆ ನಗರ ಸ್ಥಿತಿಸ್ಥಾಪಕತ್ವದ ಕುರಿತಂತೆ ಒಟ್ಟು 97 ಡೇಟಾಗಳನ್ನು 15 ಇಲಾಖೆಗಳಿಂದ ಮಾಹಿತಿ ಪಡೆದು ಹಾಗೂ ಪುರಸಭೆಗಳ ಕಾರ್ಯಕ್ಷಮತೆಯ ಬಗ್ಗೆ ಅರಿಯಲು ಸೇವೆಗಳ ಅಡಿಯಲ್ಲಿ ಶಿಕ್ಷಣ, ಆರೋಗ್ಯ, ನೀರು ಮತ್ತು ತ್ಯಾಜ್ಯ ನೀರು, ಘನ ತ್ಯಾಜ್ಯ ನಿರ್ವಹಣೆ ಮತ್ತು ನೈರ್ಮಲ್ಯ, ನೊಂದಣಿ ಮತ್ತು ಪರವಾನಿಗೆಗಳು ಮತ್ತು ಮೂಲಸೌಕರ್ಯಗಳ ಕುರಿತು, ಹಣಕಾಸು ಸಂಬಂಧಿಸಿದಂತೆ ಆದಾಯ ನಿರ್ವಹಣೆ, ಖರ್ಚು ನಿರ್ವಹಣೆ, ಹಣಕಾಸಿನ ಜವಾಬ್ದಾರಿ ಮತ್ತು ಹಣಕಾಸಿನ ವಿಕೇಂದ್ರಿಕರಣದ ಕುರಿತು, ತಂತ್ರಜ್ಞಾನದಡಿ ಡಿಜಿಟಲ್ ಆಡಳಿತ, ಡಿಜಿಟಲ್ ಸಂಪರ್ಕ, ಡಿಜಿಟಲ್ ಸಾಕ್ಷರತೆ ಬಗ್ಗೆ, ಯೋಜನೆಗಳಡಿ ಯೋಜನೆ ಸಿದ್ಧತೆ, ಯೋಜನೆ ಅನುಷ್ಠಾನ, ಯೋಜನೆ ಜಾರಿ ಬಗ್ಗೆ ಹಾಗೂ ಆಡಳಿತದಡಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ, ಮಾನವ ಸಂಪನ್ಮೂಲ, ಭಾಗವಹಿಸುವಿಕೆ ಪರಿಣಾಮಕಾರಿ ಕುರಿತು 151 ಡೇಟಾಗಳನ್ನು
ಪೋರ್ಟಲ್ನಲ್ಲಿ ಅಪಲೋಡ್ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಹೀಗೆ ಅಪ್ಲೋಡ್ ಮಾಡಿರುವ ಮಾಹಿತಿಯ ಬಗ್ಗೆ ನಗರದ ಸಾರ್ವಜನಿಕರು ಲಿಂಕ್ ಮೂಲಕ ಟ್ವಿಟ್ಟರ್, ಫೇಸ್ಬುಕ್ ಮೂಲಕ ಅಭಿಪ್ರಾಯವನ್ನು ತಿಳಿಸಬಹುದಾಗಿದೆ. 2017ರ ಸಮೀಕ್ಷೆಯ ವೇಳೆಯದಲ್ಲಿ ದೇಶದಲ್ಲಿ ದಾವಣಗೆರೆಯು 83ನೇ ಸ್ಥಾನ ಪಡೆದಿತ್ತು ಎಂದ ಅವರು, ಈಗ ನಡೆಯುತ್ತಿರುವ ಆನ್ಲೈನ್ ಸಮೀಕ್ಷೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಅಭಿಪ್ರಾಯ ನೀಡುವ ಮೂಲಕ ಹೆಚ್ಚಿನ ರ್ಯಾಂಕಿಂಗ್ನಲ್ಲಿ ಬರಲು ಸಹಕರಿಸಬೇಕೆಂದು ಅವರು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ಸ್ಮಾರ್ಟ್ಸಿಟಿ ಮುಖ್ಯ ಅಭಿಯಂತರ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








