ಪದವೀಧರ ಪ್ರಾಥಮಿಕ ಶಿಕ್ಷಕ ಸಮಸ್ಯೆ ಪರಿಹರಿಸಿ

ದಾವಣಗೆರೆ:

    8ನೇ ತರಗತಿ ಮಕ್ಕಳಿಗೆ ಪಾಠ ಮಾಡುತ್ತಿದ್ದರೂ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿರುವ ಪದವೀಧರ ಪ್ರಾಥಮಿಕ ಶಿಕ್ಷಕ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿರಿಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದರು.

    ಇಲ್ಲಿನ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ 6ರಿಂದ 8ನೇ ತರಗತಿಗಳ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

     ಹಿಂದೆ 1ರಿಂದ 7ನೇ ತರಗತಿಗಳನ್ನು ಪ್ರಾಥಮಿಕ ಹಾಗೂ 8ರಿಂದ 10ನೇ ತರಗತಿಗಳನ್ನು ಪ್ರೌಢ ಶಿಕ್ಷಣ ಎಂಬುದಾಗಿ ವರ್ಗೀಕರಿಸಲಾಗಿತ್ತು. ಆದರೆ, ಈಗ 1ರಿಂದ 8ರ ವರೆಗೆ ಪ್ರಾಥಮಿಕ ಹಾಗೂ 9ರಿಂದ 10ರ ವರೆಗೆ ಪ್ರೌಢ ಶಿಕ್ಷಣ ಎಂಬುದಾಗಿ ವಿಭಿಜಿಸಲಾಗಿದೆ. ಆದರೆ, ಈ ವಿಭಜನೆ ಸಂಪೂರ್ಣ ಮಾಡದೇ, 8ನೇ ತರಗತಿಯನ್ನು ಕೆಲವೆಡೆ ಪ್ರಾಥಮಿಕ ಶಿಕ್ಷಣದಲ್ಲಿ ಹಾಗೂ ಇನ್ನೂ ಕೆಲವೆಡೆ ಪ್ರೌಢ ಶಿಕ್ಷಣದಲ್ಲಿ ಉಳಿಸಲಾಗಿದೆ.

      ರಾಜ್ಯ ಸರ್ಕಾರ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರುವಾಗ 8ನೇ ತರಗತಿಯನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಎರಡರಲ್ಲೂ ಬಿಟ್ಟಿರುವುದೇ ಗೊಂದಲಕ್ಕೆ ಕಾರಣವಾಗಿದೆ ಎಂದು ಶ್ರೀಗಳು ವಿಶ್ಲೇಷಿಸಿದರು.6ರಿಂದ 8ನೇ ತರಗತಿಗೆ ಪ್ರಾಥಮಿಕ ಶಿಕ್ಷಕರಾಗಿ ಪದವೀಧರರು ನೇಮಕಗೊಂಡಿದ್ದಾರೆ. ಇವರು 8ನೇ ತರಗತಿಯ ಮಕ್ಕಳಿಗೂ ಪಾಠ ಮಾಡುತ್ತಿದ್ದರೂ, ಪ್ರಾಥಮಿಕ ಶಿಕ್ಷಕರ ವೇತನ ಪಡೆಯಬೇಕಾಗಿದೆ. ಇದು ವೇತನ ತಾರತಮ್ಯ ಆಗಲಿದೆ. ಇಂತಹ ಪರಿಸ್ಥಿತಿ ತಪ್ಪಿಸಲು ಸರ್ಕಾರ ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ತಂದರೂ ಸಮಗ್ರ ಚಿಂತನೆ ನಡೆಸಬೇಕು. ಆದರೆ, ಈ ಬಾರಿ ಅಂತಹ ಚಿಂತನೆ ನಡೆದಿಲ್ಲ. ಈ ಸಮಸ್ಯೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶೀಘ್ರವೇ ಪರಿಹಾರ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

     ವಿಧಾನ ಪರಿಷತ್ ಸದಸ್ಯ ಚೌಡಾರೆಡ್ಡಿ ತೂಪಲ್ಲಿ ಮಾತನಾಡಿ, ಪ್ರಸ್ತುತ ದೇಶವು ಶೇ.74ರಷ್ಟು ಸಾಕ್ಷರತೆ ಸಾಧಿಸಿದೆ ಎಂದರೆ, ಅದರಲ್ಲಿ ಶಿಕ್ಷಕರ ಪಾತ್ರ ಬಹಳಷ್ಟು ದೊಡ್ಡದಿದೆ. ಯಾವುದೇ ವ್ಯಕ್ತಿಯ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಗುಣಮಟ್ಟದ ಶಿಕ್ಷಣ ಅತ್ಯವಶ್ಯವಾಗಿದ್ದು, ಶಿಕ್ಷಣ ಕ್ಷೇತ್ರಕ್ಕೆ ಮೂಲಭೂತ ಸೌಲಭ್ಯ ಒದಗಿಸಿದಾಗ ಮಾತ್ರ ದೇಶ ಅಭಿವೃದ್ಧಿಯತ್ತ ದಾಪುಗಾಲು ಹಾಕಲು ಸಾಧ್ಯವಾಗಲಿದೆ ಎಂದು ಹೇಳಿದರು.

    ಪ್ರಾಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ರಾಜ್ಯ 6ರಿಂದ 8ನೇ ತರಗತಿಗಳ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಪಿ.ಮುರಳೀಧರ, ಪದವೀಧರ ಪ್ರಾಥಮಿಕ ಶಿಕ್ಷಕರಿಗೆ ವಿಷಯವಾರು ತರಬೇತಿ, ಗುಣಮಟ್ಟದ ಕಾರ್ಯಾಗಾರಗಳ ಬಗ್ಗೆ ಕ್ರಿಯಾಯೋಜನೆ ರಚಿಸಿ ಕಾರ್ಯಗತಗೊಳಿಸಬೇಕು. ಬಡ್ತಿಗಾಗಿ 6-8ನೇ ತರಗತಿಗಳಿಗೆ ನೇರ ನೇಮಕಾತಿ ಹೊಂದಿರುವ ನಮ್ಮ ವೃಂದದ ಶಿಕ್ಷಕರನ್ನು ಪರಿಗಣಿಸಬೇಕು. ಪ್ರಾಥಮಿಕ ಶಾಲೆಯ ವಿವಿಧ ವೃಂದದ ಶಿಕ್ಷಕರಿಗೆ ಇರುವಂತೆ ಪ್ರತ್ಯೇಕ ಜೇಷ್ಠತಾ ಪಟ್ಟಿಯಡಿ ವರ್ಗಾವಣೆ ಸೌಲಭ್ಯ ಒದಗಿಸಬೇಕು.

    ಸ್ವತಂತ್ರ ವಿಷಯ ಬೋಧನೆಗೆ ಅವಕಾಶ ಮಾಡಿಕೊಡಬೇಕು. ಬೋಧನೆಗೆ ಪ್ರತಿ ವಿಷಯಕ್ಕೂ ಒಬ್ಬ ಶಿಕ್ಷಕರನ್ನು ಕಡ್ಡಾಯವಾಗಿ ನೇಮಿಸಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ರಾಜ್ಯಾಧ್ಯಕ್ಷ ಅಮರನಾಥ ಗೌಡ ವಹಿಸಿದ್ದರು. ವೇದಿಕೆಯಲ್ಲಿ ಮರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಾಲಾಕ್ಷಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪರಮೇಶ್ವರಪ್ಪ, ಡಯಟ್ ಪ್ರಾಂಶುಪಾಲ ಹೆಚ್.ಕೆ.ಲಿಂಗರಾಜು, ದಾವಣಗೆರೆ ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಉಷಾಕುಮಾರಿ, ಬಡ್ತಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಯಲ್ಲಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು. ಹೆಚ್.ವಿ.ವಾಮದೇವಪ್ಪ ಉಪನ್ಯಾಸ ನೀಡಿದರು. ಮಂಜುನಾಥ ಸ್ವಾಗತಿಸಿದರು.

 

Recent Articles

spot_img

Related Stories

Share via
Copy link