ಇತಿಹಾಸದ ತಪ್ಪು ಗ್ರಹಿಕೆಯಿಂದ ಅನಾಹುತ

0
32

ಹರಪ್ಪನಹಳ್ಳಿ:

         ಇತಿಹಾಸ ತಪ್ಪು ಗ್ರಹಿಕೆಯಿಂದ ಅನುಮಾನ, ಅನಾಹುತ ಸಂಭವಿಸುತ್ತವೆ. ಏಕೀಕರಣ ಕರ್ನಾಟಕದಲ್ಲಿ ಮೈಸೂರು, ಉತ್ತರ, ದಕ್ಷಿಣ ಹಾಗೂ ಹೈದ್ರಾಬಾದ್ ಎಂದು ಪ್ರಾಂತವಾರು ಗುರುತಿಸಲಾಗುತ್ತಿದೆ. ಇದು ಜಾತಿ ಮತ್ತು ಧರ್ಮದ ಕಾರಣಕ್ಕೆ ಮಾತ್ರ ರಾಜ್ಯ ಇಬ್ಬಾಗದ ಕೂಗು ಕೇಳಿಬರುತ್ತಿದೆ. ಉತ್ತರ ಕರ್ನಾಟಕ ಪ್ರತ್ಯೇಕವಾದರೆ ಸಂಬಳ ಪಾವತಿಗೂ ಕಷ್ಟವಾಗಬಹುದು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಬಿ.ಮಹಾಬಲೇಶ್ವರಪ್ಪ ಕಳವಳ ವ್ಯಕ್ತಪಡಿಸಿದರು.

        ಪಟ್ಟಣದ ಬಂಕಾಪುರ ಸುಶೀಲಮ್ಮ ಚನ್ನಬಸಪ್ಪ ಪದವಿ ಮಹಾವಿದ್ಯಾಲಯದಲ್ಲಿ ರಾಜ್ಯ ಪತ್ರಗಾರ ನಿರ್ದೇಶನಾಲಯ ಹಾಗೂ ನವಜ್ಯೋತಿ ಸಾಂಸ್ಕೃತಿಕ ಸೇವಾಸಂಸ್ಥೆ ವತಿಯಿಂದ ಶನಿವಾರ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದ ಎರಡನೇ ಗೋಷ್ಠಿಯಲ್ಲಿ ಹೈದರಾಬಾದ್ ಕರ್ನಾಟಕದ ನಿರ್ಮಾಣ ಮತ್ತು 371ಜೆ ಬಗ್ಗೆ ಉಪನ್ಯಾಸ ನೀಡಿದರು.

      ಹೈದ್ರಾಬಾದ್ ಸಂಸ್ಥಾನ ರಾಜ್ಯದಲ್ಲಿ ವಿಲೀನವಾದ ಬಳಿಕವೂ ಅಖಂಡ ಕರ್ನಾಟಕದಲ್ಲಿ ಭಾಷಾವಾರು ಪ್ರಾದೇಶಿಕ ತಾರಾತಮ್ಯ ಉಲ್ಬಣಿಸಿದೆ, ಮೈಸೂರು, ಉತ್ತರ, ದಕ್ಷಿಣ ಹಾಗೂ ಹೈದ್ರಾಬಾದ್ ಪ್ರದೇಶದ ಪ್ರತ್ಯೇಕತೆ ಕೇಳಿಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

       ದಾವಣಗೆರೆ ಎಆರ್‍ಜಿ ಕಾಲೇಜ್ ಉಪನ್ಯಾಸಕ ಮಲ್ಲಿಕಾರ್ಜುನ ಜವಳಿ ಅವರು, ಹರಪನಹಳ್ಳಿ ತಾಲೂಕಿನ ಸ್ಮಾರಕ ಪರಂಪರೆ ಕುರಿತು ಮಾತನಾಡಿ, ಪಾಳೆಗಾರರ ಕಾಲ ಸೇರಿ ವಿವಿಧ ರಾಜಮನೆತನಗಳ ಅವಧಿಯಲ್ಲಿ ನಿರ್ಮಿಸಿರುವ ಕೋಟೆ, ಬಸದಿ, ಅರಮನೆ, ದೇವಾಲಯ ಗಮನಿಸಿದರೆ, ಕ್ರಿ.ಶ.1500 ರಿಂದ 1800ರ ಅವಧಿಯಲ್ಲಿ ಹರಪನಹಳ್ಳಿ, ಬಾಗಳಿ, ಚಿಕ್ಕಳ್ಳಿ, ನರಸಪ್ಪನ ಗುಡ್ಡ, ಉಚ್ಚಂಗಿದುರ್ಗ, ಮೈದೂರು, ಮಾಡ್ಲಗೇರೆ ಪ್ರಮುಖ ರಾಜಮನೆತನದ ಪ್ರಮುಖ ಸ್ಥಳ ಮತ್ತು ವಾಸ್ತುಶಿಲ್ಪ, ಕಲೆಯ ಕೇಂಧ್ರಗಳಾಗಿದ್ದವು ಎಂದು ತಿಳಿಸಿದರು.

       ಅಸ್ತಿತ್ವ ಉಳಿಸಿಕೊಳ್ಳಲು ಹರಪನಹಳ್ಳಿ-ಚಿತ್ರದುರ್ಗ ಪಾಳೆಗಾರರ ನಡುವೆ ತೀವ್ರ ತರ ಸಂಘರ್ಷ ನಡೆದಿವೆ. ಅಂದಿನ ಆಚರಣೆಗಳು ರೂಪಾಂತರಗೊಳ್ಳುತ್ತಿವೆ ಎಂದು ಸ್ಮರಿಸಿದರು.

       ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಾ.ಎ.ನಾಗವೇಣಿ ಅವರು ಹರಪನಹಳ್ಳಿ ಬುಡಕಟ್ಟು ಮತ್ತು ಜನಪದ ಇತಿಹಾಸ ಕುರಿತು ಉಪನ್ಯಾಸ ನೀಡುತ್ತಾ, ಸಾಕ್ಷರತೆ, ಸವಲತ್ತುಗಳ ಪರಿಣಾಮ ತಾಲೂಕಿನ ಬುಡಕಟ್ಟು ಸಮುದಾಯದ ಆಚರಣೆಗಳು ಆಧುನಿಕತೆಗೆ ಒಗ್ಗಿಕೊಳ್ಳುತ್ತಿವೆ ಎಂದು ಅಭಿಪ್ರಾಯಪಟ್ಟರು.

       ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿದ್ದ ಹಂಪಿ ಕನ್ನಡ ವಿವಿ ದೂರಶಿಕ್ಷಣ ಕೇಂಧ್ರದ ನಿರ್ದೇಶಕ ಡಾ.ವಾಸುದೇವ ಬಡಿಗೇರ ಮಾತನಾಡಿ, ದೇಶ, ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮದ ಇತಿಹಾಸಗಳು ಒಂದಕ್ಕೊಂದು ಎಣೆದುಕೊಂಡಿವೆ. ಒಂದನ್ನು ಬಿಟ್ಟು, ಇನ್ನೊಂದರ ಇತಿಹಾಸ ರಚನೆ ಕಷ್ಟಸಾಧ್ಯ ಎಂದರು.

       ಹಿಂದೆ ಹಂಪಿಯೊಂದಿಗೆ ಹರಪನಹಳ್ಳಿ ಸಾಂಸ್ಕøತಿಕ ಅವಿನಾಭಾವ ಸಂಬಂಧ ಹೊಂದಿತ್ತು. ಅಂದು ಅರಸರು ಯಾವುದೇ ಜಾತಿಯಲ್ಲಿ ಗುರುತಿಸಿಕೊಳ್ಳದೇ ಸೂರ್ಯ, ಚಂದ್ರ ವಂಶದವರೆಂದು ಹೇಳಿಕೊಳ್ಳುತ್ತಿದ್ದರು. ಶಿವಕೋಟ್ಯಚಾರನ ವಡ್ಡಾರಾಧನೆಯಲ್ಲಿ ಹರಪನಹಳ್ಳಿ, ಕುಂಚೂರಿನ ಹೆಸರು ಪ್ರಸ್ತಾಪವಾಗಿದೆ ಎಂದರು.

       ಶೈವ, ಜೈನ ಸಾಹಿತ್ಯ ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ ಧಾರ್ಮಿಕ ಸಂಘರ್ಷ ಹೇಗಿತ್ತು ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ. ಹಡಗಲಿ, ಸೋಗಿ, ಹರಪನಹಳ್ಳಿ, ಹೊಳಲು, ಬಾಗಳಿ, ಹಿರೇಹಡಗಲಿ ಸುತ್ತಮುತ್ತ 25 ಕಿ.ಮೀ.ವ್ಯಾಪ್ತಿಯಲ್ಲಿ ತ್ರೈಕೂಟೇಶ್ವರ ದೇಗುಲಗಳು ನಿರ್ಮಾಣದಲ್ಲಿ ವಿಶಿಷ್ಟ ಶೈಲಿ ಬಳಸಲಾಗಿದೆ ಎಂದು ಹೇಳಿದರು.

      ತುಮಕೂರು ವಿವಿ ಪ್ರಾಧ್ಯಾಪಕ ಡಾ.ಎಂ.ಕೊಟ್ರೇಶ್ ನೀಡಿದ ಸಲಹೆಯಂತೆ ವಾಸ್ತುಶಿಲ್ಪಕ್ಕೆ ಹೆಸರಾದ ಹಳ್ಳಿಯಲ್ಲಿ ಬಾಗಳಿ ಉತ್ಸವ ಏರ್ಪಡಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ನಿರ್ಣಯ ಕೈಗೊಳ್ಳಬೇಕು ಎನ್ನುವ ನಿರ್ಣಯ ಕೈಗೊಂಡರು. ಬಳಿಕ ನಡೆದ ಸಂವಾದದಲ್ಲಿ ಉಪನ್ಯಾಸಕ ಡಾ.ರಮೇಶ್, ಪ್ರಾಧ್ಯಾಪಕ ಎಂ.ವಿಜಯಕುಮಾರ, ಸರ್ಖಾವಸ್ ಹಾಗೂ ಎಂ.ಪಿ.ಎಂ.ಸಿದ್ದೇಶ ಕೆಲ ಸಂದೇಹ ವ್ಯಕ್ತಪಡಿಸಿ, ಸಂಪನ್ಮೂಲ ವ್ಯಕ್ತಪಡಿಗಳಿಂದ ಉತ್ತರ ಪಡೆದುಕೊಂಡರು.

       ಗುರುಬಸವವನಗೌಡ, ಬಿ.ಭರತ್‍ಭೂಷಣ್, ತಟ್ಟಿ ವೆಂಕೋಬರಾವ್, ಡಾ.ಎಂ.ಕೊಟ್ರೇಶ್, ಡಾ.ರಮೇಶ್, ಎಂ.ವಿಜಯಕುಮಾರ್, ಎಚ್.ಮಲ್ಲಿಕಾರ್ಜುನ, ಸಪ್ನ, ಸಿದ್ದೇಶ, ರಾಧ, ಎಚ್.ಕೊಟ್ರೇಶ್, ಹನುಮಂತನಾಯ್ಕ, ಕಬ್ಬಳ್ಳಿ ಗೀತಾ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here