ಕಣ್ಮುಚ್ಚಿ ಕುಳಿತಿದೆಯೇ ಪೊಲೀಸ್ ಇಲಾಖೆ : ಸಾರ್ವಜನಿಕರ ಆಕ್ರೋಶ
ತುಮಕೂರು
ನಗರದ ಪ್ರಮುಖ ರಸ್ತೆಗಳು ಸೇರಿದಂತೆ ರಿಂಗ್ ರಸ್ತೆಯಲ್ಲಿ ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಸುಗಮವಾಗಿ ಸಂಚಾರ ಮಾಡಲಾಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.ಫೆ.7ರ ಶುಕ್ರವಾರದಂದು ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಗುಬ್ಬಿ ಗೇಟ್ ಕಡೆಯಿಂದ ಕುಣಿಗಲ್ ವೃತ್ತದ ಕಡೆಗೆ ಮಾಡಲಾಗುತ್ತಿರುವ ರಿಂಗ್ ರಸ್ತೆ ಕಾಮಗಾರಿಯ ನಡುವೆ ಧಾನಃ ಪ್ಯಾಲೆಸ್ ಬಳಿ ನಾಲ್ವರು ಅಪ್ರಾಪ್ತರು ಒಂದೇ ದಿಚಕ್ರ ವಾಹನದಲ್ಲಿ ಅತಿ ವೇಗವಾಗಿ ಸವಾರಿ ಮಾಡಿದ್ದಾರೆ. ಇದರಿಂದ ಅಕ್ಕ ಪಕ್ಕದಲ್ಲಿ ಚಲಿಸುತ್ತಿದ್ದ ವಾಹನ ಸವಾರರು ಒಂದು ಕ್ಷಣ ಗಾಬರಿಗೊಂಡರು.
ನಾಲ್ವರು ಅಪ್ರಾಪ್ತರಾಗಿದ್ದು ಅತಿ ವೇಗದ ಚಾಲನೆ ಮಾಡುತ್ತಿದ್ದರು. ಅವರನ್ನು ನಿಲ್ಲಿಸಲು ಪ್ರಯತ್ನಿಸಿದರೆ ಪಕ್ಕದ ಚಿಕ್ಕದಾರಿಯ ಮೂಲಕ ತಪ್ಪಿಸಿಕೊಂಡರು. ಹೆಲ್ಮೆಟ್ ಧರಿಸದೆ ಚಾಲನೆ ಮಾಡುತ್ತಿರುವುದು ಒಂದು ತಪ್ಪಾದರೆ, ನಾಲ್ವರು ಒಂದೇ ವಾಹನದಲ್ಲಿ ಹೋಗುವುದು ಮತ್ತೊಂದು ತಪ್ಪು. ಕಾಮಗಾರಿ ನಡೆಯುವ ಜಾಗದಲ್ಲಿ ನಿಧಾನವಾಗಿ ಹೋಗಬೇಕು ಎಂಬ ಪರಿಜ್ಞಾನವೂ ಕೂಡ ಇಲ್ಲದೆ ವಾಹನ ಸವಾರ ಮಾಡಿದ್ದಾರೆ.
ಇತ್ತೀಚೆಗೆ 100 ಸಿಸಿ ಇಂಜಿನ್ನಿನ ವಾಹನಗಳಲ್ಲಿ ಕೇವಲ ಒಬ್ಬರು ಮಾತ್ರ ಹೋಗಬೇಕು ಎಂಬ ಆದೇಶ ನೀಡಲಾಗಿತ್ತು. ಅದು ಸರಿಯಾದ ರೀತಿಯಲ್ಲಿ ಪಾಲನೆಗೆ ಬರಲಿಲ್ಲವಾದರೂ ಹೆಲ್ಮೆಟ್ ಧರಿಸುವುದು ಕಡ್ಡಾಯ ಮಾಡಿ ಆದೇಶ ಜಾರಿ ಮಾಡಿದ್ದಾರೆ. ಈ ಹಿಂದೆಯೂ ಅಪ್ರಾಪ್ತ ಬಾಲಕರು ವಾಹನ ಚಲಾಯಿಸಿದರೆ ಅವರ ಬದಲಾಗಿ ಅವರ ಪೋಷಕರ ಮೇಲೆ ದೂರು ದಾಖಲಿಸಿ ದಂಢ ವಿಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿ ಕೃಷ್ಣ ಎಚ್ಚರಿಕೆ ನೀಡಿದ್ದರು. ಇದನ್ನು ಲೆಕ್ಕಿಸದೆ ಅಪ್ರಾಪ್ತರು ಬೈಕ್ ವೀಲ್ಹಿಂಗ್, ಅತಿವೇಗದ ಚಾಲನೆ, ಹೆಲ್ಮೆಟ್ ಧರಿಸದೆ ಇರುವುದು ಇನ್ನಿತರ ಕಿರಿಕಿರಿ ಮಾಡುತ್ತಿದ್ದಾರೆ.
ನಗರದ ಸದಾಶಿವ ನಗರದಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಬೈಕ್ ವೀಲ್ಹಿಂಗ್ ಮಾಡುತ್ತಾ ಅಕ್ಕ ಪಕ್ಕ ಚಲಿಸುವ ಇತರೆ ವಾಹನ ಸವಾರರಿಗೆ ಭಯ ಬೀಳಿಸುತ್ತಿದ್ದಾರೆ. ವಯಸ್ಸಾದವರು ದ್ವಿಚಕ್ರ ವಾಹನ ಚಲಾಯಿಸಲು ಭಯಬೀತರಾಗುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆಯ ಗಮನಕ್ಕೆ ತಂದಾಗ ಕೇವಲ ಎರಡು ದಿನಗಳು ಮಾತ್ರ ಅಲ್ಲಿ ಗಸ್ತು ಪೊಲೀಸರು ಓಡಾಡುತ್ತಾರೆ. ನಂತರ ಯಾರೂ ಇತ್ತ ಸುಳಿಯುವುದೇ ಇಲ್ಲ. ಇದರಿಂದ ಪುಂಡರ ಹಾವಳಿ ಹೆಚ್ಚಾಗುತ್ತಿದೆ.
ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವ ಸಂಚಾರಿ ಪೊಲೀಸರು ಕೇವಲ ಟೌನ್‍ಹಾಲ್ ವೃತ್ತ, ಭದ್ರಮ್ಮ ವೃತ್ತ, ಮಂಡಿ ಪೇಟೆ ವೃತ್ತ, ಚರ್ಚ್ ವೃತ್ತ, ಬಿಎಸ್‍ಎನ್‍ಎಲ್ ಕಚೇರಿ ಮುಂಭಾಗ, ಕಾಲ್ ಟೆಕ್ಸ್ ವೃತ್ತ, ಜನರಲ್ ಕಾರಿಯಪ್ಪ ರಸ್ತೆ ಸೇರಿದಂತೆ ಶಿವಕುಮಾರ ಸ್ವಾಮಿ ವೃತ್ತ, ಬಟವಾಡಿ ವೃತ್ತದಲ್ಲಿ ಮಾತ್ರ ನಿಂತು ವಾಹನ ಸವಾರರ ಬಳಿ ದಂಢ ವಸೂಲಿ ಮಾಡುತ್ತಾರೆ ಹೊರತು, ಉಳಿದ ಹಲವಾರು ಕಡೆ ಒಬ್ಬರೂ ಕಾಣಿಸಿಕೊಳ್ಳುವುದಿಲ್ಲ.
ಪ್ರಮುಖ ರಸ್ತೆಗಳಲ್ಲಿ ಹೆಚ್ಚಿನ ಟ್ರಾಫಿಕ್ ಸಮಸ್ಯೆ ಉಂಟಾದರೂ ಯಾರೂ ಅದರ ಬಗ್ಗೆ ಗಮನ ಹರಿಸುವುದಿಲ್ಲ. ಆದರೆ ಅಲ್ಲಲ್ಲಿ ಒಂದೇ ರಸ್ತೆಯಲ್ಲಿ ಎರಡ್ಮೂರು ಕಡೆಗಳಲ್ಲಿ ನಿಂತು ಹೆಲ್ಮೆಟ್ ಸೇರಿದಂತೆ ಇನ್ನಿತರ ದಾಖಲೆಗಳ ವಿಚಾರದಲ್ಲಿ ದಂಢ ವಸೂಲಿ ಮಾಡುತ್ತಿರುವುದು ವಿಪರ್ಯಾಸವೇ ಸರಿ.