ಹುಳಿಯಾರು
ಹಂದನಕೆರೆ ಹೋಬಳಿಯ ಮತಿಘಟ್ಟ ಕ್ಲಸ್ಟರ್ ವ್ಯಾಪ್ತಿಯ ಬಿಳಿಗಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸೋರುತ್ತಿದ್ದು ಮಳೆ ಬಂದರೆ ವಿದ್ಯಾರ್ಥಿಗಳು ವರಾಂಡದಲ್ಲಿ ಕುಳಿತು ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದ್ದು ತಕ್ಷಣ ಶಾಲೆ ದುರಸ್ಥಿ ಮಾಡಿಸುವಂತೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜು ಒತ್ತಾಯಿಸಿದ್ದಾರೆ.
ಸುಮಾರು 50 ಮನೆಗಳಿರುವ ಬಿಳಿಗೀಹಳ್ಳಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. 1 ರಿಂದ 5ನೇ ತರಗತಿವರೆಗೆ 19 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಬ್ಬರು ಶಿಕ್ಷಕರಿದ್ದು ಕೊಠಡಿ ಮಾತ್ರ ಒಂದೇ ಇದೆ. ಇರುವ ಒಂದು ಕೊಠಡಿ ಮಳೆ ಬಂದರೆ ಸೋರುತ್ತದೆ. ಬೇಸಿಗೆಯಲ್ಲಿ ಬಿಸಿಲ ಝಳದಲ್ಲೇ ಪಾಠ ಕೇಳಬೇಕಿದೆ. ಗ್ರಾಮದಲ್ಲಿ ಮತ್ತೊಂದು ಕೊಠಡಿ ಇದ್ದು ಅದು ಸಂಪೂರ್ಣ ಶಿಥಿಲಗೊಂಡಿದೆ.
ಕಳೆದ ವಾರದಿಂದ ಪ್ರತಿದಿನ ಮಳೆ ಬರುತ್ತಿರುವುದರಿಂದ ಕೊಠಡಿಯಲ್ಲಿಯೇ ನೀರು ಹೊರಗೆ ಹಾಕುವುದೇ ಕೆಲಸವಾಗಿದೆ. ಇದರಿಂದ ಬೇಸತ್ತ ಶಿಕ್ಷಕರು ಮಕ್ಕಳನ್ನು ವರಾಂಡದಲ್ಲಿ ಚಾಪೆ ಹಾಸಿ ಕುಳ್ಳಿರಿಸಿ ಪಾಠ ಹೇಳುತ್ತಾರೆ. ಈಗಾಗಲೇ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದಿದ್ದಾರೆ.
ಈ ಕೊಠಡಿಯನ್ನು ಚುನಾವಣಾ ಮತಗಟ್ಟೆಯಾಗಿ ಉಪಯೋಗಿಸುವುದರಿಂದ ಚುನಾವಣಾ ಸಮಯದಲ್ಲಿ ನವೀಕರಣಗೊಳಿಸುವ ಭರವಸೆ ನೀಡುತ್ತಾರೆ. ಕಳೆದ ಲೋಕಸಭಾ ಚುನಾವಣಾ ವೇಳೆ ಕಂದಾಯ ಇಲಾಖೆ ಅಧಿಕಾರಿಗಳು ಮಳೆ ಬಂದರೆ ಸೋರದಂತೆ ತುರ್ತು ಅಗತ್ಯ ಕ್ರಮಗಳನ್ನು ಅನುಸರಿಸಿ ಕೆಲಸವಾದ ಮೇಲೆ ಇತ್ತ ತಿರುಗಿಯೂ ನೋಡಿಲ್ಲ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನ ಹರಿಸಿ ಶಾಲಾ ಕಟ್ಟಡ ದುರಸ್ಥಿಗೆ ಮುಂದಾಗಲಿ ಎಂದು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
