ಹುಳಿಯಾರು:
ಬೀದರ್ ನಿಂದ ಶ್ರೀರಂಗಪಟ್ಟಣ 150 ಎ ರಾಷ್ಟ್ರೀಯ ಹೆದ್ದಾರಿಗೆ ಹುಳಿಯಾರು ಭಾಗದಲ್ಲಿ ಬೈಪಾಸ್ ರಸ್ತೆ ನಿರ್ಮಿಸುವ ಸಲುವಾಗಿ ಪೊಲೀಸರ ಸರ್ಪಗಾವಲಿನಲ್ಲಿ ಮಂಗಳವಾರ ನ್ಯಾಷನಲ್ ಹೈವೆ ಪ್ರಾಧಿಕಾರದಿಂದ ಸರ್ವೆ ಕಾರ್ಯ ಆರಂಭಿಸಲಾಯಿತು.
ಚಿಕ್ಕನಾಯಕನಹಳ್ಳಿಯಿಂದ ಬರುವ ಈ ರಸ್ತೆಗೆ ಹುಳಿಯಾರು ಹೋಬಳಿಯ ಪೋಚಕಟ್ಟೆ ಬಳಿ ಬೈಪಾಸ್ ರಸ್ತೆ ಆರಂಭಿಸಿ ಅಪ್ಪಾಸಾಬಿ ಅಣೆಯ ಬಳಿ ಸೇತುವೆ ನಿರ್ಮಿಸಿ ಅಲ್ಲಿಂದ ಎಸ್‍ಎಲ್‍ಆರ್ ಬಂಕ್ ಸರ್ಕಲ್, ಹುಳಿಯಾರು ಅಮಾನಿಕೆರೆ, ಸೋಮಜ್ಜನಪಾಳ್ಯ, ಕೆ.ಸಿ.ಪಾಳ್ಯ, ಲಿಂಗಪ್ಪನಪಾಳ್ಯದ ಮೂಲಕ ಕೆಂಕೆರೆ ಇಂಡಿಯನ್ ಗ್ಯಾಸ್ ಏಜೆನ್ಸಿ ಬಳಿ ಸೇರುವುದು ಬೈಪಾಸ್ ರಸ್ತೆಯ ನೀಲ ನಕ್ಷೆಯಾಗಿದೆ.
ಆದರೆ ಬೈಪಾಸ್ ರಸ್ತೆ ನಿರ್ಮಾಣವಾದರೆ ಈ ಭಾಗದ ಅತೀ ಸಣ್ಣ ರೈತರು ಬೀದಿಗೆ ಬೀಳುತ್ತಾರೆ. ಇದನ್ನೇ ನಂಬಿರುವ ರೈತರ ಜೀವನ ನಿರ್ವಹಣೆ ಕಷ್ಟವಾಗುತ್ತದೆ. ಬಹುಮುಖ್ಯವಾಗಿ ಶವಸಂಸ್ಕರಕ್ಕೂ ಸಹ ಭೂಮಿಯಿಲ್ಲದೆ ಪರದಾಡುವಂತ್ತಾಗುತ್ತದೆ. ಹಾಗಾಗಿ ಬೈಪಾಸ್ ನಿರ್ಮಾಣ ಮಾಡುವ ಬದಲು ಪಟ್ಟಣದಲ್ಲಿ ಹಾದು ಹೋಗಿರುವ ರಸ್ತೆಯನ್ನು ಅಗಲೀಕರಣ ಮಾಡಿ ಎಂದು ರೈತರು ಬೈಪಾಸ್ ರಸ್ತೆಗೆ ವಿರೋಧ ವ್ಯಕ್ತಪಡಿಸಿದ್ದರು.
ಪರಿಣಾಮ ಕಳೆದ ಆಗಷ್ಟ್ ಮಾಹೆಯಲ್ಲಿ ಬೈಪಾಸ್ ರಸ್ತೆಯ ಸರ್ವೆಗೆ ಬಂದಿದ್ದ ಸಿಬ್ಬಂಧಿಯೊಂದಿಗೆ ರೈತರು ಜಗಳವಾಡಿ ಹಿಂದಿರುಗುವಂತೆ ಮಾಡಿದ್ದರು. ಕಳೆದ ತಿಂಗಳಿಂದಷ್ಟೆ ರಾಜ್ಯ ರೈತ ಸಂಘದ (ಹೊಸಹಳ್ಳಿ ಜಯಣ್ಣ ಬಣ) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಸರ್ಪಗಾವಲಿನಲ್ಲಿ ಮಂಗಳವಾರ ಸರ್ವೆ ಕಾರ್ಯ ಪುನಃ ಆರಂಭಿಸಲಾಯಿತು. ಪೋಚಕಟ್ಟೆ ಬಳಿಯಿಂದ ಸರ್ವೆ ಆರಂಭಿಸಿದ್ದು ಮೊದಲನೆ ದಿನ ಎಸ್‍ಎಲ್‍ಆರ್ ಬಂಕ್ ಸರ್ಕಲ್ ಬಳಿಯವರೆವಿಗೆ ಸರ್ವೆ ಮಾಡಲಾಯಿತು.
ಈ ಹಿಂದೆ ಸರ್ವೆ ಮಾಡಿ ನೆಟ್ಟಿದ್ದ ಕಲ್ಲನ್ನು ಕಿತ್ತಿದ್ದರಿಂದ ಈಗಿನ ಸರ್ವೆ ಕಾರ್ಯಕ್ಕೆ ಹೆಚ್ಚಿನ ಸಮಯ ಹಿಡಿಯುತ್ತಿದ್ದು ಹೊಸದಾಗಿ ಸರ್ವೆ ಮಾಡಿದಂತ್ತಾಗುತ್ತಿದೆ. ವಿರೋಧ ವ್ಯಕ್ತವಾಗಿರುವ ಅಮಾನಿಕೆರೆ, ಸೋಮಜ್ಜನಪಾಳ್ಯ, ಲಿಂಗಪ್ಪನಪಾಳ್ಯ ಗ್ರಾಮದ ಬಳಿ ಬುಧವಾರ ಸರ್ವೆ ಮಾಡುವ ಸಾಧ್ಯತೆಯಿದೆ. ಆಗ ಅಲ್ಲಿನ ರೈತರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ