ಚಿತ್ರದುರ್ಗ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿನಿಲಯಗಳಲ್ಲಿ ಸರ್ಕಾರದ ಮಂಜೂರಾತಿ ಹುದ್ದೆಗಳ ಸಂಖ್ಯೆಗಿಂತಲೂ ಹೆಚ್ಚುವರಿಯಾಗಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಲ್ಲಿ, ಅಂತಹ ಸಿಬ್ಬಂದಿಯನ್ನು ವಜಾಗೊಳಿಸಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಅವರು ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು ಬಿಸಿಎಂ ಜಿಲ್ಲಾ ಅಧಿಕಾರಿ ಅವಿನ್ ಅವರು ಮಾಹಿತಿ ನೀಡಿ, 2018-19 ರಲ್ಲಿ ಬಿಸಿಎಂ ಹಾಸ್ಟೆಲ್‍ಗಳಿಗೆ ಹೊಸದಾಗಿ ಅಡುಗೆ/ಅಡುಗೆ ಸಹಾಯಕರ ಹುದ್ದೆಗೆ ನೇಮಕಗೊಂಡ ಕಾರಣ, ಈ ಹುದ್ದೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರರನ್ನು ಜೂನ್-2019 ರವರೆಗೆ ಮುಂದುವರೆಸಿದ್ದು, ನಂತರ ಹೆಚ್ಚುವರಿ ನೌಕರರನ್ನು ವಜಾಗೊಳಿಸಲಾಗಿದೆ. ಆದರೂ ಈ ನೌಕರರು ಹಾಸ್ಟೆಲ್‍ಗಳಲ್ಲಿ ಕೆಲಸ ಮುಂದುವರೆಸಿದ್ದಾರೆ ಎಂದರು.
ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿಇಒ ಅವರು, ವಿದ್ಯಾರ್ಥಿ ನಿಲಯಗಳಲ್ಲಿ ಖಾಯಂ ಸಿಬ್ಬಂದಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬದಲಿಗೆ ಹೆಚ್ಚುವರಿ ಸಿಬ್ಬಂದಿಗಳಿಂದ ಹಾಸ್ಟೆಲ್‍ಗಳಲ್ಲಿ ಹಾಗೂ ತಮ್ಮ ಮನೆಗಳಲ್ಲೂ ದುಡಿಸಿಕೊಳ್ಳುತ್ತಿದ್ದಾರೆ. ಕೂಡಲೆ ಈ ಎಲ್ಲಾ ಹೆಚ್ಚುವರಿ ಸಿಬ್ಬಂದಿಗೆ ಹಾಸ್ಟೆಲ್‍ಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡಬಾರದು. ಒಂದು ವೇಳೆ ಕರ್ತವ್ಯ ನಿರ್ವಹಿಸುತ್ತಿರುವುದು ಕಂಡುಬಂದಲ್ಲಿ, ನಿಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಾಸ್ಟೆಲ್‍ಗಳಿಗೆ ಭೇಟಿ ನೀಡಿ :
ಸರ್ಕಾರದ ಆದೇಶದ ಅನುಗುಣವಾಗಿ ನಿಲಯಪಾಲಕರು ಕಾರ್ಯನಿರ್ವಹಿಸಬೇಕು. ವಿದ್ಯಾರ್ಥಿ ನಿಲಯಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ದಿನಕ್ಕೆ ಕನಿಷ್ಟ ಎರಡು ಹಾಸ್ಟೆಲ್‍ಗಳಿಗೆ ಅನಿರೀಕ್ಷಿತ ಭೇಟಿ ನೀಡಬೇಕು. ಅಲ್ಲಿನ ಶೌಚಾಲಯ, ಊಟದ ಸಭಾಂಗಣ, ಸ್ವಚ್ಛತೆ, ವಿದ್ಯಾರ್ಥಿಗಳಿಗೆ ನೀಡುವ ಊಟ, ಮಲಗುವ ಕೊಠಡಿಗಳು, ಶುದ್ಧ ಕುಡಿಯುವ ನೀರು, ಸೋಲಾರ್, ವಿದ್ಯುತ್ ದೀಪ, ಆಹಾರ ಸಾಮಗ್ರಿಗಳ ದಾಸ್ತಾನು, ಹಾಜರಾತಿ ಎಲ್ಲವನ್ನೂ ಪರಿಶೀಲಿಸಿ ಈ ಕುರಿತು ವರದಿ ಸಲ್ಲಿಸಬೇಕೆಂದು ತಿಳಿಸಿದರು
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಕೆ.ಅನಂತ್ ಮಾತನಾಡಿ, ವಿದ್ಯಾರ್ಥಿ ನಿಲಯಗಳಲ್ಲಿ ಹೆಚ್ಚಿನದಾಗಿ ವಿದ್ಯಾರ್ಥಿಗಳ ಸುರಕ್ಷತೆಗೆ ಒತ್ತು ನೀಡಬೇಕು. ಭದ್ರತಾ ಸಿಬ್ಬಂದಿಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ವಿದ್ಯಾರ್ಥಿಗಳ ಪೋಷಕರು ಮಾತ್ರ ಅವರನ್ನು ಮನೆಗೆ ಕರೆದುಕೊಂಡು ಹೋಗಬೇಕು. ವಿದ್ಯಾರ್ಥಿಗಳ ಭೇಟಿಗೆ ಅನ್ಯ ವ್ಯಕ್ತಿಗಳಿಗೆ ಅವಕಾಶ ಮಾಡಿಕೊಡಬಾರದು. ಪೋಷಕರು ವಿದ್ಯಾರ್ಥಿಗಳನ್ನು ಭೇಟಿಯಾಗಲು ಎರಡು ಗುರುತಿನ ಚೀಟಿಗಳನ್ನು ನೀಡಬೇಕು. ತಿಂಗಳಿಗೊಮ್ಮೆ ಪೋಷಕರ ಸಭೆ ಆಯೋಜಿಸಿ ಮಕ್ಕಳ ಮತ್ತು ಪೋಷಕರಿಗೆ ಮುಕ್ತವಾಗಿ ಸಂವಹನ ಮಾಡಲು ಅವಕಾಶ ನೀಡಬೇಕು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅವಿನ್ ಅವರು ವಿದ್ಯಾರ್ಥಿ ಹಾಗೂ ಪೋಷಕರ ಭೇಟಿಗಾಗಿ ಎರಡು ಪಾಸ್ ನೀಡುವ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನಿಯಮಿತವಾಗಿ ದಿನಕ್ಕೆ ಎರಡು ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಲಾಗುತ್ತಿದೆ. ಸುಮಾರು 100ಕ್ಕೂ ಹೆಚ್ಚು ಹೆಚ್ಚುವರಿ ಸಿಬ್ಬಂದಿಗಳನ್ನು ವಜಾಗೊಳಿಸಲು ಕ್ರಮಕೈಗೊಳ್ಳಲಾಗುವುದು. ಹೊಸದಾಗಿ ನಿರ್ಮಾಣ ಮಾಡಿರುವ ವಿದ್ಯಾರ್ಥಿ ನಿಲಯಕ್ಕೆ ವಿದ್ಯಾರ್ಥಿಗಳನ್ನು ಶೀಘ್ರ ಸ್ಥಳಾಂತರ ಮಾಡಲಾಗುವುದು. ವಿದ್ಯಾರ್ಥಿ ನಿಲಯದ ಸ್ವಚ್ಛತೆ ಬಗ್ಗೆ ಗಮನ ಹರಿಸುವುದಾಗಿ ಸಭೆಗೆ ತಿಳಿಸಿದರು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಕೃಷ್ಣಪ್ಪ ಅವರು ಕುರಿಗಳಲ್ಲಿ ಕಂಡುಬರುವ ನೀಲಿನಾಲಗೆ ರೋಗ ನಿಯಂತ್ರಣ ಕುರಿತು ಎಚ್ಚರ ವಹಿಸಲಾಗಿದೆ. ನೀಲಿ ನಾಲಗೆ ರೋಗದಿಂದ ಮರಣ ಹೊಂದಿದ ಮೇಕೆಗಳ ಮಾಲೀಕರಿಗೆ ಸರ್ಕಾರದ ವತಿಯಿಂದ ಐದು ಸಾವಿರ ಪರಿಹಾರ ಧನ ನೀಡಲಾಗುವುದು. ವಿಮೆ ಮಾಡಿಸಲು ಯೂನೈಟೆಡ್ ಇಂಡಿಯಾ ವಿಮಾ ಕಂಪನಿ ವಿಭಾಗೀಯ ವ್ಯವಸ್ಥಾಪಕರು ಕುರಿ ಮತ್ತು ಮೇಕೆಗಳ ಮಾಲೀಕರಿಗೆ ವಿಮೆ ಮಾಡಿಸಲು ಒಪ್ಪಿಗೆ ನೀಡಿದ್ದಾರೆ. ಇದರಡಿ ಒಂದು ವರ್ಷಕ್ಕೆ ಶೇ 8, ಮೂರು ವರ್ಷಕ್ಕೆ ಶೇ 18 ವಿಮೆ ನೀಡಲಾಗುತ್ತದೆ ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ.ಶಿವಮೂರ್ತಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ