ಪರಿಶಿಷ್ಟ ಜಾತಿಗೆ ಬರಬೇಕಾಗಿದ್ದ ಅನುದಾನಕ್ಕೆ ಕೊಕ್ಕೆ: ತಾಪಂ ಅಧ್ಯಕ್ಷರ ವಿಷಾದ

ಮಧುಗಿರಿ

     ಪ್ರಸಕ್ತ ಸಾಲಿನಲ್ಲಿ ಎಸ್‍ಇಪಿ ಹಾಗೂ ಟಿಎಸ್‍ಪಿ ಅನುದಾನದ ಅಡಿಯಲ್ಲಿ ಪರಿಶಿಷ್ಟ ಜಾತಿಗೆ ಬರಬೇಕಾಗಿದ್ದ ಅನುದಾನವು ಬಂದಿಲ್ಲದಿರುವುದು ವಿಷಾದನೀಯ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ಬೇಸರ ವ್ಯಕ್ತಪಡಿಸಿದರು.

     ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಕಳೆದ ಸಾಲಿನಲಿ ಎಸ್‍ಇಪಿ ಹಾಗೂ ಟಿಎಸ್‍ಪಿ ಯೋಜನೆಯಡಿ 10.5 ಲಕ್ಷ ರೂ ಅನುದಾನ ಬಂದಿತ್ತು, ಆದರೆ ಈ ಬಾರಿ ಪರಿಶಿಷ್ಟ ಪಂಗಡಕ್ಕೆ ಕೇವಲ 3.5 ಲಕ್ಷ ಅನುದಾನ ಬಂದಿದ್ದು, ಪರಿಶಿಷ್ಟ ಜಾತಿಗೆ ಬರಬೇಕಾಗಿದ್ದ ಅನುದಾನವನ್ನು ಸರ್ಕಾರ ಯಾವುದೇ ಕಾರಣ ನೀಡದೆ ವಿಳಂಭ ಮಾಡುತ್ತಿರುವುದು ಪರಿಶಿಷ್ಠ ಜಾತಿಗಳ ಅಭಿವೃದ್ದಿಗೆ ಹಿನ್ನಡೆಯಾಗಿದೆ ಎಂದ ಅವರು, ಈ ಸಂಬಂಧ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ, ಸಚಿವರಿಗೆ ಹಾಗೂ ಸರ್ಕಾರಕ್ಕೆ ಕಾರಣ ಕೇಳಿ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

    ಗಿರಿಜನ ವಿಶೇಷ ಯೋಜನೆಯಡಿಯಲ್ಲಿ ಬಂದಿರುವ ಅನುದಾನದಲ್ಲಿ ಪರಿಶಿಷ್ಠ ಪಂಗಡಗಳ ಕಾಲೋನಿಯಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಹಾಗೂ ಕೃಷಿ, ಪಶು ಸಂಗೋಪನ ಮತ್ತು ರೇಷ್ಮೆ ಇಲಾಖೆಗಳಿಗೆ ಮೀಸಲಿರಿಸಲು ತೀರ್ಮಾನಿಸಲಾಗಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ನೀಡಿದ್ದು, ಆಯ್ಕೆಯಾಗಿರುವ ಗೊಂಚಲು ಗ್ರಾಮಗಳಿಗೆ ಟಿಎಸ್‍ಪಿ ಯೋಜನೆಯಿಂದ ಸಿಗುವ ಸೌಲಭ್ಯಗಳನ್ನು ನಡೆಸಿಕೊಂಡು ಹೋಗುವಂತೆ ಸಭೆಯಲ್ಲಿ ತಿಳಿಸಿದರು.

     ತಾಲ್ಲೂಕು ಪಂಚಾಯಿತಿ ಅಡಿಯಲ್ಲಿ ಬರುವ 40 ಅಂಗಡಿ ಮಳಿಗೆಗಳ ಬಾಡಿಗೆ ಸರಿಯಾಗಿ ವಸೂಲಿಯಾಗದೆ ನಷ್ಟ ಉಂಟಾಗಿರುವುದರಿಂದ ಎಲ್ಲಾ ಸದಸ್ಯರ ತೀರ್ಮಾನದಂತೆ ನೋಟಿಸ್ ನೀಡಿ ಬಾಡಿಗೆ ಕಟ್ಟದೆ ವಿಳಂಬ ಮಾಡಿದಲ್ಲಿ ಅಂಗಡಿ ಮಳಿಗೆಗಳಿಗೆ ಮರು ಹರಾಜು ಕರೆಯಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

     ದೊಡ್ಡಮಾಲೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಬಾಬು ಜಗಜೀವನ ರಾಮ್ ಭವನದ ಕಟ್ಟಡವು ಕಳಪೆ ಕಾಮಗಾರಿಯಿಂದ ಕೂಡಿದ್ದು, ಗುತ್ತಿಗೇದಾರರನ್ನು ಕರೆಸಿ ಉತ್ತಮ ಗುಣಮಟ್ಟದ ಕಾಮಗಾರಿ ಮಾಡುವಂತೆ ತಾ.ಪಂ ಸದಸ್ಯ ಜೆ.ಡಿ.ವೆಂಕಟೇಶ್ ಆರೋಪಿಸಿದಾಗ ಸಂಬಂಧಪಟ್ಟ ಗುತ್ತಿಗೇದಾರರನ್ನು ಕರೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

    ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸಭೆಯಲ್ಲಿ ಪುಲ್ವಾಮ ದಾಳಿಯಲ್ಲಿ ಮಡಿದ ವೀರ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

    ತಾಲೂಕು ಪಂಚಾಯಿತಿ ಇಒ ದೊಡ್ಡಸಿದ್ದಯ್ಯ, ಸ್ಥಾಯಿಸಮಿತಿ ಅಧ್ಯಕ್ಷ ಕೆ.ರಾಜು, ಉಪಾಧ್ಯಕ್ಷ ಲಕ್ಷ್ಮೀನರಸಪ್ಪ, ಸದಸ್ಯರುಗಳಾದ ಸೊಸೈಟಿ ರಾಮಣ್ಣ, ದೊಡ್ಡಯ್ಯ, ಕೃಷಿ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ಪಶು ಇಲಾಖೆಯ ಸಹಾಯಕ ನಿರ್ದೇಶಕ ರೆ.ಮಾ.ನಾಗಭೂಷಣ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಸಿ.ನಾಗರಾಜು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ರೇಣುಕಾ ದೇವಿ, ನೌಕರರ ಸಂಘದ ಖಜಾಂಚಿ ಚಿಕ್ಕರಂಗಯ್ಯ(ಚಕ್ರಿ) ಹಾಗೂ ಅಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap