ಬುಗುಡನಹಳ್ಳಿ ಜಲಸಂಗ್ರಹಾಗಾರದಿಂದ ರೈತರಿಗೆ ನೀರು ಅಸಾಧ್ಯ- ಪಾಲಿಕೆ ಸ್ಪಷ್ಟನೆ

ತುಮಕೂರು

      ತುಮಕೂರು ತಾಲ್ಲೂಕು ಬುಗುಡನಹಳ್ಳಿಯಲ್ಲಿರುವ ಹೇಮಾವತಿ ಜಲಸಂಗ್ರಹಾಗಾರದ ತೂಬುಗಳ ಮೂಲಕ ಅಲ್ಲಿನ ಅಚ್ಚುಕಟ್ಟುದಾರರಾದ ರೈತರ ಜಮೀನುಗಳಿಗೆ ತಾಂತ್ರಿಕ ಕಾರಣಗಳಿಂದ ನೀರನ್ನು ಹರಿಸಲು ಸಾಧ್ಯವಾಗುವುದಿಲ್ಲ ಎಂದು ತುಮಕೂರು ಮಹಾನಗರ ಪಾಲಿಕೆಯು ಸ್ಪಷ್ಟಪಡಿಸಿದೆ.

       ತುಮಕೂರು ಉಪವಿಭಾಗಾಧಿಕಾರಿಗಳ ಪತ್ರಕ್ಕೆ ಪ್ರತಿಕ್ರಿಯಿಸುತ್ತ ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರು ದಿನಾಂಕ 27-09-2018 ರಂದು ಬರೆದಿರುವ ಮೂರು ಪುಟಗಳ ಸುದೀರ್ಘ ಪತ್ರ (ಸಂಖ್ಯೆ: ತುಮಪಾ/ತಾಂಶಾ/ಸಿಆರ್/(ವಿ ಅಂಡ್ ನಿ)/92/2018-19, ದಿನಾಂಕ: 27-09-2018) ದಲ್ಲಿ ಸಕಾರಣಗಳೊಂದಿಗೆ ಈ ಸ್ಪಷ್ಟನೆಯನ್ನು ನೀಡಿದ್ದಾರೆ.

         ‘‘ತುಮಕೂರು ನಗರದ ಜನಸಂಖ್ಯೆ ಈಗಾಗಲೇ 4 ಲಕ್ಷ ಮೀರಿದೆ. ಈ ಜನಸಂಖ್ಯೆಗೆ ಅನುಗುಣವಾಗಿ ಪ್ರತಿನಿತ್ಯ 57 ಎಂ.ಎಲ್.ಡಿ.ಯಷ್ಟು ನೀರಿನ ಅಗತ್ಯವಿದೆ. 36 ಎಂ.ಎಲ್.ಡಿ. ಪ್ರಮಾಣದ ನೀರನ್ನು ಹೇಮಾವತಿ ನಾಲಾ ಮೂಲದಿಂದ ಹಾಗೂ ಮಿಕ್ಕ 9 ರಿಂದ 10 ಎಂ.ಎಲ್.ಡಿ.ಯಷ್ಟು ನೀರನ್ನು ಕೊಳವೆ ಬಾವಿಗಳ ಮೂಲಕ ಪೂರೈಸಲಾಗುತ್ತಿದೆ. ಆದರೂ ಸಹ 11 ಎಂ.ಎಲ್.ಡಿ.ಯಷ್ಟು ನೀರನ ಕೊರತೆ ಇದೆ. ನಗರದಲ್ಲಿ ಇರುವ ಕೊಳವೆ ಬಾವಿಗಳಲ್ಲೂ ವರ್ಷಪೂರ್ತಿ ಏಕಪ್ರಮಾಣದ ನೀರು ಲಭಿಸುವುದಿಲ್ಲ. ಬೇಸಿಗೆಯಲ್ಲಿ ಅಂತರ್ಜಲ ಕುಸಿತದಿಂದ ಏರುಪೇರಾಗುತ್ತದೆ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಬೇಸಿಗೆಯ ಏಪ್ರಿಲ್‌ನಿಂದ ಜೂನ್‌ವರೆಗೆ ಟ್ಯಾಂಕರ್‌ಗಳಿಂದ ನೀರು ಪೂರೈಸುವ ಅವಿವಾರ್ಯ ಪರಿಸ್ಥಿತಿ ಉದ್ಭವಿಸಿದೆ’’ ಎಂದು ಪತ್ರದಲ್ಲಿ ಪಾಲಿಕೆಯು ತುಮಕೂರು ನಗರದ ಕುಡಿಯುವ ನೀರಿನ ಪರಿಸ್ಥಿತಿಯನ್ನು ವಿವರಿಸಿದೆ.

         ‘‘ತುಮಕೂರು ನಗರಕ್ಕೆ ಬುಗುಡನಹಳ್ಳಿ ಜಲಸಂಗ್ರಹಾಗಾರದಿಂದ 1998-99 ನೇ ಸಾಲಿನಿಂದ ನೀರನ್ನು ಪಡೆಯಲಾಗುತ್ತಿದೆ. ತುಮಕೂರು ನಗರದ ‘ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ’ ಎಂದು 1.135 ಟಿ.ಎಂ.ಸಿ. ನೀರಿನ ಪ್ರಮಾಣವನ್ನು ನಿಗದಿಪಡಿಸಿ ಸರ್ಕಾರ ಆದೇಶ ನೀಡಿದೆ. ಆ ಆದೇಶದಲ್ಲಿ ಅಚ್ಚುಕಟ್ಟು ಪ್ರದೇಶಕ್ಕೆಂದು ಎಲ್ಲೂ ಉಲ್ಲೇಖಿಸಿಲ್ಲ. ನಗರೀಕರಣ, ಜನಸಂಖ್ಯೆ ಏರಿಕೆ, ಬಂದುಹೋಗುವವರ ಸಂಖ್ಯೆ ಇತ್ಯಾದಿ ಗಮನಿಸಿ ತುಮಕೂರು ನಗರಕ್ಕೆ ಮೀಸಲಾದ ನೀರಿನ ಪ್ರಮಾಣವನ್ನು 1200 ರಿಂದ 1300 ಎಂಸಿಎ್ಟಿವರೆಗೆ ಏರಿಸುವ ಅಗತ್ಯತೆ ಇರುತ್ತದೆ. ಅಲ್ಲದೆ 1998-99 ರಿಂದ ಈವರೆಗೂ ಯಾವುದೇ ವರ್ಷದಲ್ಲೂ ಹೇಮಾವತಿ ನಾಲೆಯಿಂದ 1.135 ಟಿ.ಎಂ.ಸಿ. ನೀರು ಬುಗುಡನಹಳ್ಳಿ ಜಲಸಂಗ್ರಹಾಗಾರಕ್ಕೆ ಹರಿದುಬಂದಿಲ್ಲ’’ ಎಂಬ ಅಂಶಗಳತ್ತ ಪಾಲಿಕೆಯು ಉಪವಿಭಾಗಾಧಿಕಾರಿಗಳ ಗಮನ ಸೆಳೆದಿದೆ.

           ‘‘ನಗರಕ್ಕೆ 1135 ಎಂ.ಸಿ.ಎ್.ಟಿ.ಯಷ್ಟು ನೀರಿನ ಪ್ರಮಾಣ ನಿಗದಿಯಾಗಿದೆ. ಇದರಲ್ಲಿ ನೀರಿನ ಭಾಷ್ಪೀಕರಣ (ಆವಿಯಾಗುವಿಕೆ) , ನೀರಿನ ಇಂಗುವಿಕೆ ಮತ್ತು ವಿತರಣಾ ವ್ಯವಸ್ಥೆಯಲ್ಲಿನ ಸೋರಿಕೆಯ ಬಳಿಕ ಉಳಿಯುವ ನೀರಿನ ಪ್ರಮಾಣ 738 ಎಂ.ಸಿ.ಎ್.ಟಿ.ಯಷ್ಟು ಆಗುತ್ತದೆ. ಆದರೆ ಈಗ ಪ್ರತಿ ವರ್ಷ ತುಮಕೂರು ನಗರಕ್ಕೆ 737 ಎಂ.ಸಿ.ಎ್.ಟಿ.ಯಷ್ಟು ಮಾತ್ರ ನೀರು ಬರುತ್ತಿದೆ’’ ಎಂದು ಪಾಲಿಕೆ ಅಂಕಿ ಅಂಶವನ್ನು ಮುಂದಿಟ್ಟಿದೆ.

       ‘‘ಹೇಮಾವತಿ ನೀರಿನ ಅಭಾವ ಇರುವುದರಿಂದ ತುಮಕೂರು ನಗರದ ಭೀಮಸಂದ್ರದ ಹಂದಿಜೋಗರ ಸ್ಥಳ, ಕುರಿಪಾಳ್ಯ, ಸದಾಶಿವನಗರ, ಗಂಗಸಂದ್ರ, ಮೆಳೆಕೋಟೆ, ರಾಜೀವ್‌ಗಾಂಧಿ ನಗರ, ಅಮರಜ್ಯೋತಿನಗರ, ಗೆದ್ದಲಹಳ್ಳಿ, ಶೆಟ್ಟಿಹಳ್ಳಿ, ಗೋಕುಲ ಬಡಾವಣೆ, ಬಸವೇಶ್ವರ ಬಡಾವಣೆ, ದೇವರಾಯಪಟ್ಟಣ, ಸತ್ಯಮಂಗಲ, ಬಂಡೆಪಾಳ್ಯ, ನವಲಹಳ್ಳಿ ಕ್ರಾಸ್, ಜಗನ್ನಾಥಪುರ, ಮರಳೂರು ರಿಂಗ್ ರಸ್ತೆ – ಈ ಸ್ಥಳಗಳಿಗೆ ಹೇಮಾವತಿ ನೀರಿನ ಸಂಪರ್ಕ ಸಾಧ್ಯವಾಗಿಲ್ಲ’’ ಎಂದು ಪಾಲಿಕೆಯು ಗಮನ ಸೆಳೆದಿದೆ.

        ‘‘ಈಗಾಗಲೆ ಕೇಂದ್ರ ಸರ್ಕಾರವು ಯು.ಐ.ಡಿ.ಎಸ್.ಎಸ್.ಎಂ.ಟಿ. ಯೋಜನೆಯಡಿ ತುಮಕೂರು ನಗರಕ್ಕೆ 198.98 ಕೋಟಿ ವೆಚ್ಚದ ನಿರಂತರ ಒತ್ತಡಯುಕ್ತ ನೀರು ಸರಬರಾಜು ಯೋಜನೆ’ (ಕಂಟಿನಿಯಸ್ ಪ್ರೆಶರೈಸ್ಡ್ ವಾಟರ್ ಸಪ್ಲೆ‘) ಗೆ ಅನುಮೋದನೆ ನೀಡಿದೆ. ಈ ಯೋಜನೆಯಡಿ ನಗರಕ್ಕೆ ನಿರಂತರ ನೀರು ಪೂರೈಕೆಗೆ 70 ಎಂ.ಎಲ್.ಡಿ. ನೀರಿನ ಅಗತ್ಯತೆ ಇರುತ್ತದೆ. ಒಮ್ಮೆ ಈ ನಿರಂತರ ಕುಡಿಯುವ ನೀರಿನ ಯೋಜನೆ ಅನುಷ್ಥಾನಗೊಂಡಲ್ಲಿ ವಾರ್ಷಿಕ 903 ಎಂ.ಸಿ.ಎ್.ಟಿ.ಯಷ್ಟು ನೀರು ಬೇಕಾಗುತ್ತದೆ’’ ಎಂದೂ ಪಾಲಿಕೆಯು ತಿಳಿಸಿದೆ.

         ‘‘ಬುಗುಡನಹಳ್ಳಿ ಜಲಸಂಗ್ರಹಾಗಾರದ ನೀರಿನ ಸಂಗ್ರಹಣಾ ಸಾಮರ್ಥ್ಯ ಕಡಿಮೆ ಇರುವುದರಿಂದ ಹಾಗೂ ಹೇಮಾವತಿ ನಾಲೆಯಿಂದ ನೀರು ಹರಿದುಬರುವ ಅವಧಿ ಅಲ್ಪಕಾಲೀನವಾದುದರಿಂದ 1998-99 ನೇ ಸಾಲಿನಿಂದ ಈವರೆಗೆ ಒಮ್ಮೆಯೂ ಬುಗುಡನಹಳ್ಳಿ ಜಲಸಂಗ್ರಹಾಗಾರದಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರನ್ನು ಹರಿಸಿಲ್ಲ. ಇವೆಲ್ಲ ತಾಂತ್ರಿಕ ಕಾರಣಗಳಿಂದ ಹಾಗೂ ತುಮಕೂರು ನಗರಕ್ಕೇ ಕುಡಿಯುವ ನೀರಿನ ಕೊರತೆ ಇರುವುದರಿಂದ ಬುಗುಡನಹಳ್ಳಿ ಜಲಸಂಗ್ರಹಾಗಾರದಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರನ್ನು ಹರಿಸಲು ಸಾಧ್ಯವಿಲ್ಲ’’ ಎಂದು ಪಾಲಿಕೆಯು ತನ್ನ ವಾದವನ್ನು ಮಂಡಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap