ಮುಂದಿನ ವರ್ಷದಲ್ಲಿ 10 ಲಕ್ಷ ಮನೆಗಳ ನಿರ್ಮಾಣ ಗುರಿ : ಸಚಿವ ಸೋಮಣ್ಣ

ಬಳ್ಳಾರಿ

    ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ರಹಿತರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ರಾಜೀವಗಾಂಧಿ ವಸತಿ ನಿಗಮದಿಂದ ಬರುವ ಮುಂದಿನ ವರ್ಷದಲ್ಲಿ 10 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಹೇಳಿದರು.

     ನಗರದ ಹೊರವಲಯದ ಮುಂಡರಗಿ ಹತ್ತಿರದ ರಾಜೀವಗಾಂಧಿ ವಸತಿ ನಿಗಮ ದಿಂದ ಎನ್‍ಎಂಡಿಸಿ ಮಹಾತ್ಮಾಗಾಂಧಿ ವಸತಿ ಯೋಜನೆಯಡಿ 338 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 5616 ಮನೆಗಳ ಕಾಮಗಾರಿ ಪರಿಶೀಲನೆ ಮಾಡಿದ ನಂತರ ಅವರು ಮಾತನಾಡಿದರು.

      ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 5 ಲಕ್ಷ ಮನೆ, ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 1.20 ಲಕ್ಷ ಮನೆ, ರಾಜೀವಗಾಂಧಿ ವಸತಿ ನಿಗಮ ದಿಂದ ಬೆಂಗಳೂರಿನಲ್ಲಿ 1 ಲಕ್ಷ ಮತ್ತು ಬಳ್ಳಾರಿ, ಬೆಳಗಾವಿ, ಬಾಗಲಕೋಟೆ, ಗದಗ, ಧಾರವಾಡ ಮೊದಲಾದ ನಗರಗಳಲ್ಲಿ 1.5 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದರು.
ಮನೆಗಳನ್ನು ಪಡೆಯುವ ಕೆಲ ಫಲಾನುಭವಿಗಳು ಅರ್ಹರಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಫಲಾನುಭವಿಗಳ ಪಡಿತರ ಚೀಟಿ, ಆಧಾರ್ ಕಾರ್ಡ್ ಲಿಂಕ್ ಮಾಡಿ ನಕಲಿ ಫಲಾನುಭವಿಗಳ ಪತ್ತೆ ಕಾರ್ಯಕ್ಕೆ ತಹಶೀಲ್ದಾರ್ ಮತ್ತು ತಾಲೂಕು ಮತ್ತು ಗ್ರಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

     ಪ್ರಧಾನ ಮಂತ್ರಿ ಅವರ ಆಶಯದಂತೆ ಪ್ರತಿಯೊಬ್ಬ ಬಡವರಿಗೆ ಸೂರು ಕಲ್ಪಿಸಲು ಉದ್ದೇಶಿಸಲಾಗಿದೆ. ಮನೆಗಳ ನಿರ್ಮಾಣ ಗುಣಮಟ್ಟ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.5616 ಮನೆಗಳನ್ನು ಮುಂದಿನ ವರ್ಷದ ಮಾರ್ಚ್ ಅಂತ್ಯದೊಳಗೆ ಜನರಿಗೆ ನೀಡುವ ಭರವಸೆಯನ್ನು ಸಚಿವರು ನೀಡಿದರು.

      ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಮಾತನಾಡಿ, ಬಳ್ಳಾರಿಯಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳು ಕ್ಯೂರಿಂಗ್ ಕಾಂಪೌಂಡ್ ಪ್ರಕ್ರಿಯೆಯಿಂದ ಕೂಡಿದ್ದು, ಇವುಗಳಿಗೆ ನೀರು ಹಾಕಿ ಕ್ಯೂರಿಂಗ್ ಮಾಡಬೇಕಿಲ್ಲ. ಇವು 100 ವರ್ಷ ಬಳಕೆಗೆ ಬರಲಿದೆ ಎಂದರು. ಈ ಪ್ರದೇಶಲ್ಲಿ ಶಾಲೆ, ಆಸ್ಪತ್ರೆ, ಅಂಗನವಾಡಿ ಕೇಂದ್ರ, ವಾಣಿಜ್ಯ ಮಳಿಗೆ, ಕ್ರೀಡಾಂಗಣ, ಕುಡಿಯುವ ನೀರು, ಬೀದಿ ದೀಪ, ಉದ್ಯಾನವನ, ಒಳಚರಂಡಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರೆಡ್ಡಿ, ಸಂಸದ ವೈ.ದೇವೇಂದ್ರಪ್ಪ, ರಾಜೀವಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ರಾಮ್ ಪ್ರಸಾತ್ ಮನೋಹರ್ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link