ಜಾತ್ರೆ ಸಿದ್ಧತಾ ಕಾಮಗಾರಿ ತ್ವರಿತವಾಗಿ ಕೈಗೊಳ್ಳಿ : ಡಿಸಿ

ಚಿತ್ರದುರ್ಗ

    ಜಿಲ್ಲೆಯ ಐತಿಹಾಸಿಕ ನಾಯಕನಹಟ್ಟಿ ಶ್ರೀಗುರುತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಮಾರ್ಚ್ 5 ರಿಂದ 16 ರವರೆಗೆ ನಡೆಯಲಿದ್ದು, ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಸೂಚನೆ ನೀಡಿದರು.

    ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನದ ಜಾತ್ರೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ವರ್ಷದಂತೆ ಈ ಬಾರಿಯು ಜಿಲ್ಲಾಡಳಿತದಿಂದ ಜಾತ್ರೆಗೆ ಸಂಬಂಧಪಟ್ಟ ಕೆಲವು ಸಮಿತಿಗಳನ್ನು ರಚಿಸಿದ್ದು, ಅಧಿಕಾರಿಗಳು ಸಿದ್ಧತಾ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಜಾತ್ರೆಯ ಯಶಸ್ವಿಯಾಗುವತ್ತ ಗಮನಹರಿಸಬೇಕು ಎಂದರು.

    ಕುಡಿಯುವ ನೀರಿನ ವ್ಯವಸ್ಥೆ: ಜಾತ್ರೆಯ ಸಂದರ್ಭದಲ್ಲಿ ಜನನಿಬಿಡ ಪ್ರದೇಶಗಳಲ್ಲಿ ನೀರಿನ ಟ್ಯಾಂಕರ್‍ಗಳ ವ್ಯವಸ್ಥೆ ಮಾಡಬೇಕು. ಟ್ಯಾಂಕರ್ ಮೇಲೆ ದೂರವಾಣಿ ಸಂಖ್ಯೆ ಹಾಗೂ ಕುಡಿಯು ನೀರು ಸರಬರಾಜು ಸೌಲಭ್ಯಕ್ಕಾಗಿ ಸಹಾಯವಾಣಿ ಸಂಖ್ಯೆಯನ್ನು ನಮೂದಿಸಿರಬೇಕು. ಗುಣಮಟ್ಟದ ಹಾಗೂ ಶುದ್ಧ ಕುಡಿಯುವ ನೀರನ್ನು ಕಾಲಕಾಲಕ್ಕೆ ಭಕ್ತಾಧಿಗಳ ಅಗತ್ಯಕ್ಕೆ ಅನುಗುಣವಾಗಿ ಪೂರೈಸಬೇಕು. ಕುಡಿಯುವ ನೀರು ಸರಬರಾಜು ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಪಟ್ಟಣ ಪಂಚಾಯಿತಿ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಮುಖ್ಯಾಧಿಕಾರಿ ಡಿ.ಭೂತಪ್ಪ ಅವರಿಗೆ ಸೂಚಿಸಿದರು.

    ದೇವಸ್ಥಾನ ಸಮಿತಿ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಗ್ರಾಮದಲ್ಲಿ ಬೀದಿ ದೀಪಗಳ ವ್ಯವಸ್ಥೆ ಸಮರ್ಪಕವಾಗಿರಬೇಕು. ದೇವಸ್ಥಾನ ಸಮಿತಿಯಿಂದ ಹೈಮಾಸ್ಟ್ ದೀಪದ ವ್ಯವಸ್ಥೆಯ ನಿರ್ವಹಣೆ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಬೀದಿ ದೀಪಗಳ ವ್ಯವಸ್ಥೆ ಮಾಡಬೇಕು. ವಾಹನ ನಿಲುಗಡೆ ಸ್ಥಳಗಳಲ್ಲಿಯೂ ದೀಪದ ವ್ಯವಸ್ಥೆ ಕಲ್ಪಿಸಬೇಕು. ಜಾತ್ರೆ ನಡೆಯುವ ಪ್ರಮುಖ ಬೀದಿಗಳಲ್ಲಿನ ರಸ್ತೆ ದುರಸ್ತಿ ಕಾರ್ಯ ಶೀಘ್ರ ಮುಗಿಯಬೇಕು. ದೇವಸ್ಥಾನದಲ್ಲಿ ಪ್ರಸಾದ ನೀಡುವ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಆಹಾರವನ್ನು ಪರೀಕ್ಷಿಸದೆ ಭಕ್ತಾಧಿಗಳಿಗೆ ವಿತರಿಸುವಂತಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

     ಜಾತ್ರೆಯ ಸಂದರ್ಭದಲ್ಲಿ ಹಾಕುವ ಅಂಗಡಿ, ಹೋಟೆಲ್ ಮಳಿಗೆಗಳಿಗೆ ಜಾಗಕ್ಕೆ ಅನುಗುಣವಾಗಿ ಕರ ವಸೂಲಿ ಕಾರ್ಯವಾಗಬೇಕು. ಅಥವಾ ಈ ಕಾರ್ಯವನ್ನು ಟೆಂಡರ್‍ದಾರರಿಗೆ ವಹಿಸಿದ್ದರೆ ಇದರ ಸಂಪೂರ್ಣ ಹೊಣೆಗಾರರು ಟೆಂಡರ್‍ದಾರರಾಗಿರುತ್ತಾರೆ. ಹೋಟೆಲ್, ಅಂಗಡಿಗಳಲ್ಲಿ ಮಾರಾಟ ಮಾಡುವ ಆಹಾರ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಿರಬೇಕು ಹಾಗೂ ಇಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆ ಮಾಡಬಾರದು. ಆಹಾರ ಸುರಕ್ಷತೆ ಇಲ್ಲದಿದ್ದಲ್ಲಿ ಮತ್ತು ಪ್ಲಾಸ್ಟಿಕ್ ಬಳಕೆ ಮಾಡಿದಲ್ಲಿ ಟೆಂಡರ್‍ದಾರರೆ ಜವಾಬ್ದಾರರಾಗಲಿದ್ದು ಈ ಷರತ್ತನ್ನು ವಿಧಿಸಿ ಟೆಂಡರ್ ಪ್ರಕ್ರಿಯೆ ನಡೆಸಲು ಸೂಚನೆ ನೀಡಿದರು.

    ಇದಲ್ಲದೆ ವಿದ್ಯುತ್ ಸರಬರಾಜು ವ್ಯವಸ್ಥೆ, ಹಸಿ ಹಾಗೂ ಒಣಭ ಕಸ ಸಂಗ್ರಹಣೆ ಬುಟ್ಟಿಯನ್ನು ಟೆಂಡರ್‍ದಾರರು ಪ್ರತಿ ಮಳಿಗೆಗೆ ವಿತರಿಸಬೇಕು. ತಪ್ಪಿದದಲ್ಲಿ ಟೆಂಡರ್‍ದಾರರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದರು. ಮಳಿಗೆಯ ಮಾಲೀಕರು ಅಥವಾ ಟೆಂಡರ್‍ದಾರರು ವಿದ್ಯುತ್ ಸಂಪರ್ಕ ಪಡೆಯಲು ತಾತ್ಕಾಲಿಕವಾಗಿ ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ ಕಾನೂನು ಪ್ರಕಾರ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು ಎಂದು ಬೆಸ್ಕಾಂ ಇಲಾಖೆ ಅಧಿಕಾರಿ ತಿಳಿಸಿದರು.

   ಆರೋಗ್ಯ ಮತ್ತು ನೈರ್ಮಲ್ಯೀಕರಣ: ದಿನಕ್ಕೆ ಮೂರು ಬಾರಿ ಸ್ವಚ್ಛತಾ ಕಾರ್ಯ ನಡೆಯಬೇಕು. ನೀರಿನ ಟ್ಯಾಂಕರ್‍ಗಳ ಬಳಿ ಕಡ್ಡಾಯವಾಗಿ ಕಸದ ಸಂಗ್ರಹಣ ಬುಟ್ಟಿಯ ವ್ಯವಸ್ಥೆ ಮಾಡಬೇಕು. ಹಾಗೂ ಪಟ್ಟಣದ ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚು ಕಸದ ಬುಟ್ಟಿಯ ವ್ಯವಸ್ಥೆ ಆಗಬೇಕು ಎಂದು ಉಪವಿಭಾಗಾಧಿಕಾರಿ ವಿ.ಪ್ರಸನ್ನ ಸೂಚಿಸಿದರು.

ಪ್ರಾಣಿಬಲಿ ನಿಷೇಧ:

    ಕಾನೂನು ಸುವ್ಯವಸ್ಥೆ ದೃಷ್ಠಿಯಿಂದ ದೇವಸ್ಥಾನದ ಆವರಣ ಸೇರಿದಂತೆ ಸುತ್ತಲೂ 1 ಕಿ.ಮೀ ದೂರದಲ್ಲಿ ಮಾಂಸಹಾರವನ್ನು ನಿಷೇದಿಸಲಾಗುವುದು. ಪ್ರಾಣಿ ಬಲಿ ನಿಷೇಧ ಪ್ರಚಾರಕ್ಕಾಗಿ ಅಗತ್ಯವಾಗಿ ಬೇಕಾದ ಕರಪತ್ರ, ಬ್ಯಾನರ್‍ಗಳನ್ನು ವ್ಯವಸ್ಥೆಗೊಳಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ರಕ್ಷಣೆ ಮತ್ತು ಬಂದೋಬಸ್ತ್:

     1500ಕ್ಕಿಂತ ಹೆಚ್ಚು ರಕ್ಷಣೆ ಸಿಬ್ಬಂದಿ, 100 ಜನ ಮಪ್ತಿ ಪೊಲೀಸರನ್ನು ನಿಯೋಜಿಸಿದೆ. ಕಳ್ಳತನ ಮತ್ತು ತಪ್ಪಿಸಿಕೊಂಡ ಮಕ್ಕಳ ಬಗ್ಗೆ ತುರ್ತು ಕ್ರಮಕೈಗೊಳ್ಳಲು ಪ್ರಮುಖ ಸ್ಥಳಗಳಲ್ಲಿ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಗೆ ವಿವಿಧ ಮಾರ್ಗಗಳಿಂದ ಬರುವ ಮಾರ್ಗಗಳಲ್ಲಿ 7 ಕಡೆ ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸಿ ಪ್ರಾಣಿ ಬಲಿ ನಿಷೇಧಿಸಲು ಕ್ರಮಕೈಗೊಳ್ಳಲಾಗುವುದು ಎಂದು ಚಳ್ಳಕೆರೆ ಡಿವೈಎಸ್‍ಪಿ ರೋಷನ್ ಜಮೀರ್ ತಿಳಿಸಿದರು.

ವಸ್ತುಪ್ರದರ್ಶನ:

     ಜಾತ್ರೆ ನಡೆಯುವ ಸಮಯದಲ್ಲಿ ಸರ್ಕಾರಿ ಇಲಾಖೆಯ ಕಾರ್ಯಕ್ರಮಗಳು, ಸೌಲಭ್ಯಗಳ ಕುರಿತು ನಾಗರಿಕರಿಗಾಗಿ ವಸ್ತುಪ್ರದರ್ಶನ ಏರ್ಪಡಿಸಬೇಕು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನಾ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳು ವಸ್ತು ಪ್ರದರ್ಶನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ವಸ್ತುಪ್ರದರ್ಶನದಲ್ಲಿ ಭಾಗಿಯಾಗುವ ಇಲಾಖೆಯವರಿಗೆ ಪಟ್ಟಣ ಪಂಚಾಯಿತಿ ವತಿಯಿಂದ ವಿದ್ಯುತ್ ಸೌಲಭ್ಯ ನೀಡಲಾಗುವುದು ಎಂದರು.

     ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಅಧ್ಯಕ್ಷ ರವಿಶಂಕರ್, ಉಪವಿಭಾಗಾಧಿಕಾರಿ ವಿ.ಪ್ರಸನ್ನ, ಚಳ್ಳಕೆರೆ ತಹಶೀಲ್ದಾರ್ ಮಲ್ಲಿಕಾರ್ಜುನ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link