ಬೆಂಗಳೂರು
ರೈಲ್ವೆ ಯೋಜನೆಗಳಿಗೆ ಅಗತ್ಯ ಭೂಮಿ, ಹಣಕಾಸಿನ ನೆರವು ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ರಾಜ್ಯಕ್ಕೆ ಮತ್ತಷ್ಟು ಹೊಸ ರೈಲುಗಳು ಸಿಗಲಿವೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಕರಾವಳಿ ಭಾಗದ ಜನರ ಬಹು ದಿನಗಳ ಬೇಡಿಕೆಯಾಗಿದ್ದ ಯಶವಂತಪುರ-ಕಾರವಾರ-ವಾಸ್ಕೊ ಮಾರ್ಗದ ನಡುವೆ ಸಂಚರಿಸುವ ನೂತನ ಎಕ್ಸ್‌ಪ್ರೆಸ್ ರೈಲಿಗೆ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ ಅವರು ಮಾತನಾಡಿ ಕೇಂದ್ರ ಸರ್ಕಾರದಿಂದ ಮಂಜೂರಾಗುವ ಎಲ್ಲ ಯೋಜನೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸುತ್ತಿದ್ದೇವೆ ಎಂದು ಹೇಳಿದರು.
ರಾಜ್ಯದ ಹಲವು ಜಿಲ್ಲೆಗಳಿಗೆ ಇದುವರೆಗೂ ರೈಲ್ವೆ ಸೇವೆ ದೊರೆತಿಲ್ಲ. ಕರಾವಳಿ ಭಾಗದ ಸಾಕಷ್ಟು ಜನ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಹಬ್ಬ ಮುಂತಾದ ಶುಭಕಾರ್ಯಗಳಿಗೆ ಟ್ಯಾಕ್ಸಿ ಮೂಲಕ ಊರಿಗೆ ಹೋಗುತ್ತಿದ್ದಾರೆ. ಹೊಸ ರೈಲು ಆರಂಭದಿಂದ ಬಹುದಿನದ ಈ ಜನರ ಬೇಡಿಕೆ ಈಡೇರಿದಂತಾಗಿದೆ. ಉಡುಪಿ, ಭಟ್ಕಳ, ಕಾರವಾರ ಮಾರ್ಗದಲ್ಲಿ ಈ ಹೊಸ ರೈಲು ಸಂಚರಿಸಲಿದೆ. ಹೊಸ ರೈಲು ದೊರೆತಿರುವುದರಿಂದ ಈ ಮಾರ್ಗದಲ್ಲಿ ಈಗಾಗಲೇ ಸಂಚರಿಸುತ್ತಿರುವ ಹಳೆಯ ರೈಲುಗಳನ್ನು ನಿಲ್ಲಿಸಬಾರದು. ಹಳೆಯ ರೈಲುಗಳ ಸಂಚಾರ ಎಂದಿನಂತೆ ಮುಂದುವರಿಯಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಈ ವೇಳೆ ಮನವಿ ಮಾಡಿದರು.
ಈ ಹಿಂದೆ ಇದೇ ರೈಲು ಮಂಗಳೂರು ನಗರದ ಮೂಲಕ ವಾಸ್ಕೊ ತಲುಪಬೇಕಾಗಿತ್ತು. ಇದರಿಂದ ಹೆಚ್ಚಿನ ಸಮಯ ತೆಗೆದುಕೊಳ್ಳಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ನೂತನ ರೈಲು ನೀಡಬೇಕೆಂಬುದು ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಂಸದರು, ಶಾಸಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ರೈಲು ಆರಂಭಿಸಲು ಮನವಿ ಮಾಡಿದ್ದರು.
ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ರೈಲ್ವೆ ಯೋಜನೆಗಳಿಗೆ 50 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು. ಇಂದು ಯಶವಂತಪುರ, ಕಾರವಾರ, ವಾಸ್ಕೋ ಆರಂಭವಾದ ಹೊಸ ರೈಲನ್ನು ಇಬ್ಬರು ಮಹಿಳಾ ಪೈಲಟ್‌ಗಳು ಚಾಲನೆ ಮಾಡಲಿದ್ದಾರೆ. ಮಹಿಳಾ ಚಾಲಕರಾಗಿ ಅಭಿರಾಮಿ ಹಾಗೂ ಬಾಲಾ ಶಿವಪಾರ್ವತಿ ಕಾರ್ಯನಿರ್ವಹಿಸಲಿದ್ದಾರೆ.ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ಸುರೇಶ್ ಅಂಗಡಿ, ಸಂಸದೆ ಶೋಭಾಕರಂದ್ಲಾಜೆ ಹಸಿರು ನಿಶಾನೆ ತೋರಿದರು
ನೂತನ ರೈಲು ಪ್ರತಿದಿನ ಸಂಜೆ 6 ಗಂಟೆಗೆ ಯಶವಂತಪುರದಿಂದ ಹೊರಡಲಿರುವ ರೈಲು ಕುಣಿಗಲ್ ಮೂಲಕ ರಾತ್ರಿ 9.15ಕ್ಕೆ ಹಾಸನ ತಲುಪಿ, ಬೆಳಗಿನ ಜಾವ 3 ಗಂಟೆಗೆ ಪಡೀಲ್ ತಲುಪಲಿದೆ. 5 ಗಂಟೆಗೆ ಉಡುಪಿ, 5.30ಕ್ಕೆ ಕುಂದಾಪುರ, 8.30ಕ್ಕೆ ಕಾರವಾರ ತಲುಪಿದ ಬಳಿಕ 10.30ಕ್ಕೆ ವಾಸ್ಕೊ ತಲುಪಲಿದೆ.ಅದೇ ರೀತಿ ವಾಸ್ಕೊದಿಂದ 5.30ಕ್ಕೆ ಹೊರಟು, 7.25ಕ್ಕೆ ಕಾರವಾರ, 9.30ಕ್ಕೆ ಕುಂದಾಪುರ, ರಾತ್ರಿ 10 ಗಂಟೆಗೆ ಉಡುಪಿ ತಲುಪಿ, ಬೆಳಿಗ್ಗೆ 8 ಗಂಟೆಗೆ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ತಲುಪಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








