ಬಿಕಾನೇರ್ :
ದುಷ್ಕರ್ಮಿಗಳ ಗುಂಪು ಜೀಪಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಇದರಲ್ಲಿ ಇಬ್ಬರು ಸಾವನ್ನಪ್ಪಿರುವ ದುರ್ಘಟನೆ ರಾಜಸ್ಥಾನದ ಬಿಕಾನೇರ್‌ನ ನೋಖಾ ಪ್ರದೇಶದಲ್ಲಿ ನಡೆದಿದೆ.
ನೋಖಾ ಪೊಲೀಸ್ ಠಾಣೆಯ ಹಿಂದಿರುವ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಸಂತ್ರಸ್ತರನ್ನು ಏಳು ಜನರ ಗುಂಪು ತಡೆಹಿಡಿದು, ವಾಹನದ ಮೇಲೆ ಮತ್ತು ನಿವಾಸಿಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಬಿಕಾನೆರ್ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಮೋಹನ್ ಶರ್ಮಾ ಹೇಳಿದ್ದಾರೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಇನ್ನಿಬ್ಬರು ತೀವ್ರ ಸುಟ್ಟ ಗಾಯಕ್ಕೊಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಟ್ಟಗಾಯದಿಂದ ರಸ್ತೆಯಲ್ಲಿ ಬಿದ್ದವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಹಕರಿಸಿದ್ದಾರೆ. ಆದರೆ, ನಾಲ್ವರಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಇನ್ನಿಬ್ಬರಾದ ಶಾಂತಿಲಾಲ್ ಮತ್ತು ಅಜಿತ್ ಸಿಂಗ್ ಅವರಿಗೆ ಗಂಭೀರ ಸುಟ್ಟ ಗಾಯಗಳಾಗಿದೆ ಎಂದು ಶರ್ಮಾ ಹೇಳಿದ್ದಾರೆ.
ಸಂತ್ರಸ್ತರನ್ನು ಪಿಬಿಎಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆಸಲಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
