ಕೊರೋನಾ ತಡೆಗೆ ಹೆಚ್ಚುವರಿ ಲ್ಯಾಬ್ ತೆರೆಯಲು ಮುಂದಾದ ಸರ್ಕಾರ

ಬೆಂಗಳೂರು

  ವಿಶ್ವವನ್ನೇ ತಲ್ಲಣಗೊಳಿಸಿರುವ ಮಾರಕ ಕೊರೋನಾ ರೋಗದ ತಡೆಗಾಗಿ ಹೆಚ್ಚು ಜನ ಸಭೆ ಸೇರುವ ಜಾಗದ ಮೇಲೆ ಕಣ್ಣಿಡಲು ಸರ್ಕಾರ ಮುಂದಾಗಿದ್ದು ಅದೇ ಕಾಲಕ್ಕೆ ಕೊರೋನಾ ಪತ್ತೆಗಾಗಿ ಮೈಸೂರು ಸೇರಿದಂತೆ ರಾಜ್ಯದ ಐದು ಭಾಗಗಳಲ್ಲಿ ಹೆಚ್ಚುವರಿ ಲ್ಯಾಬ್‍ಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ.

   ಹಾಗೆಯೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಡಿಎಚ್‍ಓಗಳು ಸೇರಿದಂತೆ ಹಲ ಇಲಾಖೆಗಳ ಪ್ರಮುಖರನ್ನೊಳಗೊಂಡ ಸಮಿತಿಯನ್ನು ಈಗಾಗಲೇ ರಚಿಸಿರುವ ಸರ್ಕಾರ ಶತಾಯ ಗತಾಯ ಕೊರೋನಾ ವೈರಸ್ ಅನ್ನು ತಡೆಗಟ್ಟುವುದಾಗಿ ವಿಧಾನಸಭೆಗಿಂದು ಭರವಸೆ ನೀಡಿದೆ.

  ಶೂನ್ಯ ವೇಳೆಯಲ್ಲಿಂದು ಕೊರೋನಾ ರೋಗದ ಬಗ್ಗೆ ಸದನದ ಹಲವು ಸದಸ್ಯರು ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಉತ್ತರ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಈ ಕುರಿತು ವಿವರ ನೀಡಿದರು.ಕೊರೋನಾ ರೋಗ ಹರಡದಂತೆ ತಡೆಗಟ್ಟಲು ಎಲ್ಲರೂ ಮಾಸ್ಕ್‍ಗಳನ್ನು ಧರಿಸಬೇಕಿಲ್ಲ.ಯಾರಿಗೆ ರೋಗದ ಲಕ್ಷಣಗಳಿವೆಯೋ?ಅವರು ಮಾತ್ರ ಮಾಸ್ಕ್ ಧರಿಸಬೇಕು ಎಂದು ಅವರು ವಿವರಿಸಿದರು.

   ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ ಈಗ ಜಗತ್ತಿನ ಎಂಬತ್ತೇಳು ದೇಶಗಳಲ್ಲಿ ಕಾಣಿಸಿಕೊಂಡಿದೆ.ಭಾರತದ ವಿವಿಧ ಭಾಗಗಳಲ್ಲೂ ಕಾಣಿಸಿಕೊಂಡಿದೆ.ಆದರೆ ಕರ್ನಾಟಕದಲ್ಲಿ ಕೊರೋನಾಗೆ ತುತ್ತಾದ ಒಬ್ಬ ವ್ಯಕ್ತಿಯೂ ಪತ್ತೆಯಾಗಿಲ್ಲ ಎಂದರು.ಹೀಗೆ ಕೊರೋನಾ ವೈರಸ್ ಕಾಲಿಡದಂತೆ ಮಾಡಿದ ದೇಶದ ನಂಬರ್ ಒನ್ ರಾಜ್ಯ ಅಂತಿದ್ದರೆ ಅದು ಕರ್ನಾಟಕ ಎಂದು ಸಮರ್ಥಿಸಿಕೊಂಡ ಅವರು,ಕೊರೋನಾ ತಡೆಗಟ್ಟಲು ಅಗತ್ಯದ ಕ್ರಮಗಳನ್ನು ಕೈಗೊಂಡಿದ್ದೇವೆ.ರಾಜ್ಯಮಟ್ಟದಿಂದ ಹಿಡಿದು ಹಳ್ಳಿಗಳವರೆಗೆ ತಜ್ಞರ ತಂಡ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ ಎಂದು ನುಡಿದರು.

    ಇದುವರೆಗೆ ಕೊರೋನಾ ಪತ್ತೆಗಾಗಿ ಬೆಂಗಳೂರಿನಲ್ಲಿ ಮೂರು ಲ್ಯಾಬ್‍ಗಳನ್ನು ರಚಿಸಲಾಗಿದ್ದು ಮುಂದಿನ ಹತ್ತರಿಂದ ಹದಿನೈದು ದಿನಗಳಲ್ಲಿ ಮೈಸೂರು ಸೇರಿದಂತೆ ರಾಜ್ಯದ ನಾಲ್ಕೈದು ಭಾಗಗಳಲ್ಲಿ ಲ್ಯಾಬ್‍ಗಳನ್ನು ಸ್ಥಾಪಿಸಲಾಗುವುದು ಎಂದರು.ರಾಜ್ಯದ ಜನ ಯಾವ ಕಾರಣಕ್ಕೂ ಆತಂಕಪಡುವುದು ಬೇಡ ಎಂದ ಅವರು,ಇದುವರೆಗೆ ಹೊರದೇಶಗಳಿಂದ ಬಂದ ಎಂಭತ್ತೆಳು ಸಾವಿರಕ್ಕೂ ಅಧಿಕ ಮಂದಿಯನ್ನು ಪರೀಕ್ಷಿಸಲಾಗಿದ್ದು ಬಂದರು,ವಿಮಾನ ನಿಲ್ದಾಣ ಸೇರಿದಂತೆ ಎಲ್ಲ ಕಡೆ ತಪಾಸಣೆ ಕಾರ್ಯ ನಡೆಯುತ್ತಿದೆ ಎಂದರು.

  ಹೆಚ್ಚು ಜನಸಂದಣಿ ಇರುವ ಕಡೆ ಕೊರೋನಾ ಹರಡಬಹುದು.ಹಾಗೆಯೇ ಬೆವರಿನ ಮೂಲಕ ಹರಡಬಹುದು ಎಂದ ಅವರು,ವಿಪರೀತ ಜ್ವರ,ಕೆಮ್ಮು,ನೆಗಡಿ ಕೊರೋನಾ ವೈರಾಣು ತಗಲುವ ಪ್ರಾಥಮಿಕ ಲಕ್ಷಣಗಳು ಎಂದರು.ಜ್ವರ,ಕೆಮ್ಮು,ನೆಗಡಿ ಇದ್ದವರಿಗೆಲ್ಲ ಕೊರೋನಾ ವೈರಸ್ ತಗಲಿದೆ ಎಂದಲ್ಲ.ಬೇರೆ ವೈರಸ್ಸುಗಳಿಂದಲೂ ಬರಬಹುದು.ಏನೇ ಆದರೂ ಒಟ್ಟಿನಲ್ಲಿ ರಾಜ್ಯಾದ್ಯಂತ ಅಗತ್ಯದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.ಅದಕ್ಕೆ ಪೂರಕವಾಗಿ ಪ್ರತಿ ದಿನ ರಾಜ್ಯ ಮಟ್ಟದಲ್ಲಿ ಸಭೆ ನಡೆಸಿ ಪ್ರತಿದಿನ ವಿವರ ಪಡೆಯಲಾಗುತ್ತಿದೆ ಎಂದರು.

    ಇದಕ್ಕೂ ಮುನ್ನ ಸದನದಲ್ಲಿ ಮಾತನಾಡಿದ ಹೆಚ್.ಕೆ.ಪಾಟೀಲ್,ಭರತ್ ರೆಡ್ಡಿ,ಎನ್.ಎ.ಹ್ಯಾರೀಸ್,ಯು.ಟಿ.ಖಾದರ್,ರಿಜ್ವಾನ್ ಆರ್ಷದ್,ಶ್ರೀನಿವಾಸಗೌಡ ಸೇರಿದಂತೆ ಹಲವರು ಮಾರಕ ಕೊರೋನಾ ಬಗ್ಗೆ ಆತಂಕ ವ್ಯಕ್ತಪಡಿಸಿದರು.ಹೆಚ್.ಕೆ.ಪಾಟೀಲ್ ಮಾತನಾಡಿ,ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಗಲ್ಪ್ ದೇಶಗಳು ಬೇರೆ ದೇಶಗಳಿಂದ ಪ್ರಯಾಣಿಕರು ಬರುವುದನ್ನೇ ನಿಷೇಧಿಸಿವೆ.ಅದೇ ರೀತಿ ಇಲ್ಲಿ ಮಾಸ್ಕ್‍ಗಳನ್ನು ದುಬಾರಿ ಬೆಲೆಗೆ ಮಾರುವ ಕೆಲಸ ಶುರುವಾಗಿದೆ.

   ಹೀಗಾಗಿ ರೋಗದ ಲಕ್ಷಣಗಳಿಂದ ಹಿಡಿದು,ರೋಗವನ್ನು ತಡೆಗಟ್ಟುವವರೆಗೆ ಸರ್ಕಾರ ಕೈಗೊಂಡ ಕ್ರಮಗಳವರೆಗೆ ಎಲ್ಲ ವಿವರ ಒದಗಿಸಬೇಕು ಎಂದರು.ಉಳಿದ ಸದಸ್ಯರು ಮಾತನಾಡಿ,ಕೊರೋನಾ ರೋಗದ ಹಿನ್ನೆಲೆಯಲ್ಲಿ ಕೈಗೊಂಡ ಕ್ರಮಗಳ ಕುರಿತು ಸರ್ಕಾರ ವಿವರ ನೀಡಬೇಕು.ಹಾಗೆಯೇ ಎಲ್ಲ ಹಂತಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿಕೊಂಡರು.

    ಒಂದು ಹಂತದಲ್ಲಿ ಎಚ್1,ಎನ್1 ಹಾಗೂ ಹಂದಿ ಜ್ವರದ ಬಗ್ಗೆಯೂ ಸದನದಲ್ಲಿ ಆತಂಕ ವ್ಯಕ್ತವಾಯಿತಲ್ಲದೆ ಈ ಕುರಿತೂ ಸರ್ಕಾರ ಕ್ರಮ ಕೈಗೊಳ್ಳಬೇಕು.ಇಲ್ಲದಿದ್ದರೆ ಜನ ಆತಂಕಕ್ಕೊಳಗಾಗುತ್ತಾರೆ ಎಂಬ ಒತ್ತಾಯ ಕೇಳಿ ಬಂತು.ಇದಕ್ಕುತ್ತರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್,ಕೊರೋನಾ ತಡೆಗಟ್ಟಲು ಸರ್ಕಾರ ಕೈಗೊಂಡ ಕ್ರಮಗಳಿಂದ ಹಿಡಿದು,ಇದು ಎಲ್ಲೆಡೆ ಹರಡದಿರಲು ಜನರೂ ಸಹಕಾರ ನೀಡಬೇಕು ಎಂದರು.

   ಇದುವರೆಗೆ ಕೊರೋನಾ ರೋಗ ರಾಜ್ಯದಲ್ಲಿ ಕಾಲಿಡದಂತೆ ನೋಡಿಕೊಳ್ಳುವಲ್ಲಿ ನಾವು ಯಶಸ್ವಿಯಾಗಿದ್ದೇವೆ.ಮುಂದಿನ ದಿನಗಳಲ್ಲೂ ಈ ಕುರಿತು ಪರಿಣಾಮಕಾರಿ ಹೆಜ್ಜೆ ಇಡುತ್ತೇವೆ ಎಂದು ಭರವಸೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link