ಬೆಂಗಳೂರು:
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಬ್ರಾಂಡ್ ಬೆಂಗಳೂರು’ ಪರಿಕಲ್ಪನೆಗೆ ತೀವ್ರ ಹಿನ್ನಡೆಯುಂಟಾಗಿದೆ. ಯೋಜನೆಯ ಅಡಿಯಲ್ಲಿ ಸರ್ಕಾರ ನಿರ್ಮಿಸಿದ್ದ ಹೈಟೆಕ್ ಪಾರ್ಕಿಂಗ್ ಸಂಕೀರ್ಣ ಬಂದ್ ಮಾಡಲು ಗುತ್ತಿಗೆ ಸಂಸ್ಥೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಫ್ರೀಡಂ ಪಾರ್ಕ್, ಗಾಂಧಿನಗರ ಸುತ್ತಮುತ್ತ ಪಾರ್ಕಿಂಗ್ ಸಮಸ್ಯೆಗೆ ಬ್ರೇಕ್ ಹಾಕಲು ಸರ್ಕಾರ ಹೈಟೆಕ್ ಪಾರ್ಕಿಂಗ್ ಸಂಕೀರ್ಣ ನಿರ್ಮಿಸಿತ್ತು. ಕಟ್ಟಡಕ್ಕೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಚಾಲನೆ ನೀಡಿದ್ದರು. ಆದರೆ, ಆದಾಯದ ನಿರೀಕ್ಷೆಯಲ್ಲಿದ್ದ ಗುತ್ತಿಗೆ ಸಂಸ್ಥೆಗೆ ಭಾರೀ ನಿರಾಸೆ ಎದುರಾಗಿದೆ. ಕೋಟಿಗಟ್ಟಲೆ ಹಣ ವ್ಯಯಿಸಿದ್ದ ಗುತ್ತಿಗೆ ಸಂಸ್ಥೆಗೆ 64 ಲಕ್ಷ ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಹೈಟೆಕ್ ಪಾರ್ಕಿಂಗ್ ಸಂಕೀರ್ಣದ ನಿರ್ವಹಣೆ ಗುತ್ತಿಗೆ ಪಡೆದಿದ್ದ ಪ್ರಿನ್ಸ್ ರಾಯಲ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಸಾಕಷ್ಟು ಸವಾಲು ಎದುರಿಸುತ್ತಿದೆ. ಜೂನ್.21ರಿಂದ ಪಾರ್ಕಿಂಗ್ ಸಂಕೀರ್ಣ ನಿರ್ವಹಣೆಯ ಗುತ್ತಿಗೆ ಪಡೆಯಲಾಗಿದೆ. ಆದರೆ, ನಷ್ಟವನ್ನೇ ಎದುರಿಸುತ್ತಿದ್ದೇವೆ. ಹೀಗಾಗಿ ಹೈಟೆಕ್ ಪಾರ್ಕಿಂಗ್ ಸಂಕೀರ್ಣ ಬಂದ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಏಜೆನ್ಸಿ ನಡೆಸುತ್ತಿರುವ ಕುಮಾರ್ ಎಚ್‌ಎನ್ ಅವರು ಹೇಳಿದ್ದಾರೆ.
ಆಕ್ಯುಪೆನ್ಸಿ ದರ ಕಡಿಮೆ ಇರುವ ಕಾರಣ ಬಾಡಿಗೆಯನ್ನು ಕಡಿಮೆ ಮಾಡಲು ಮತ್ತು ವಿದ್ಯುತ್ ಬಿಲ್‌ಗಳನ್ನು ಕೈಬಿಡುವಂತೆ ಮನವಿ ಮಾಡಿ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಎಂಟು ಬಾರಿ ಪತ್ರ ಬರೆದಿದ್ದೇನೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
5 ವರ್ಷಗಳ ಒಪ್ಪಂದದ ನಂತರ ನಾವು ರೂ 1 ಕೋಟಿ ಭದ್ರತಾ ಠೇವಣಿ ಪಾವತಿಸಿದ್ದೇವೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೂ 48 ಲಕ್ಷ ಬಾಡಿಗೆ ಪಾವತಿಸಬೇಕಾಗಿತ್ತು. ಆದರೆ, ಇದುವರೆಗೆ ನಮಗೆ ರೂ 64 ಲಕ್ಷ ನಷ್ಟವಾಗಿದೆ.
600 ನಾಲ್ಕು ಚಕ್ರದ ವಾಹನಗಳು ಮತ್ತು 750 ದ್ವಿಚಕ್ರ ವಾಹನಗಳಿಗೆ ಸ್ಥಳಾವಕಾಶ ಕಲ್ಪಿಸಬಹುದಾದ ಮಲ್ಟಿ-ಲೆವೆಲ್ ಪಾರ್ಕಿಂಗ್ ಸೌಲಭ್ಯದಲ್ಲಿ ಆರಂಭದಲ್ಲಿ ಸುಮಾರು 80 ಪ್ರತಿಶತದಷ್ಟು ಆಕ್ಯುಪೆನ್ಸೀ ಅಂದಾಜಿಸಲಾಗಿತ್ತು. ಹೆಚ್ಚುವರಿಯಾಗಿ, ಪಾರ್ಕಿಂಗ್ ಸೌಲಭ್ಯದ 500 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ಪಾರ್ಕಿಂಗ್ ಅನ್ನು ಅನುಮತಿಸಲಾಗುವುದಿಲ್ಲ ಎಂದು ಭರವಸೆ ನೀಡಿತ್ತು, ಆದರೆ, ಕೊಟ್ಟ ಭರವಸೆಗಳಂತೆ ನಡೆದಿಲ್ಲ. ಶೇ.10ರಷ್ಟು ಆಕ್ಯುಪೆನ್ಸಿ ಕೂಡ ಇಲ್ಲದಂತಾಗಿದೆ.
ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಲುಗಡೆ ಮಾಡಿರುವ ಅನಧಿಕೃತ ವಾಹನಗಳನ್ನು ತೆಗೆಯಲು ಟೋಯಿಂಗ್ ಶುಲ್ಕ ಹಾಗೂ ಸಿಬ್ಬಂದಿಗೆ ನಿತ್ಯ 7,500 ರೂ. ಪಾವತಿಸಲಾಗುತ್ತಿದೆ. ಇದರಿಂದ ಹೆಚ್ಚುವರಿಯಾಗಿ 4.5 ಲಕ್ಷ ರೂ. ನಷ್ಟವಾಗಿದೆ. ಆಗಸ್ಟ್‌ನಲ್ಲಿಯೇ 3.38 ಲಕ್ಷ ರೂ ನಷ್ಟವಾಗಿದೆ. ಒಟ್ಟಾರೆಯಾಗಿ ಇದುವರೆಗೆ ನಾವು 64 ಲಕ್ಷ ರೂಪಾಯಿಗಳ ನಷ್ಟವನ್ನು ಅನುಭವಿಸಿದ್ದೇವೆ, ಇದರಿಂದಾಗಿ 46 ಉದ್ಯೋಗಿಗಳಿಗೆ ವೇತನವನ್ನು ಪಾವತಿಸಲು ನಮಗೆ ಸಾಧ್ಯವಾಗುತ್ತಿಲ್ಲ.
ಪಾಲಿಕೆಯು ಬಾಡಿಗೆಯನ್ನು ಕಡಿಮೆ ಮಾಡಿ ವಿದ್ಯುತ್ ಬಿಲ್‌ಗಳನ್ನು ಮನ್ನಾ ಮಾಡಿದರೆ (ಬೆಸ್ಕಾಂ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿದೆ) ಪಾರ್ಕಿಂಗ್ ನಿರ್ವಹಣೆಯನ್ನು ಮುಂದುವರೆಸಬಹುದು. ಇಲ್ಲದಿದ್ದರೆ ನಮಗೆ ಬೇರೆ ದಾರಿಯಿಲ್ಲ. ನ್ಯಾಯಾಲಯ ಮೊರೆ ಹೋಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ.