ದಾವಣಗೆರೆ:
ದೇಶದಲ್ಲಿ ಇಂದು ಗುಜರಾತ್ ಮಾದರಿ ಮಾಯವಾಗಿದ್ದು, ಎಲ್ಲಾ ಕಡೆಯೂ ಕರ್ನಾಟಕದ ಆಪರೇಷನ್ ಕಮಲ ಮಾದರಿ ಪ್ರಸಿದ್ಧಿ ಪಡೆಯುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್ ಟೀಕಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ ಎಂಬುದಾಗಿ ಹೇಳಿ, ಗುಜರಾತ್ ಮಾದರಿಯನ್ನು ತೋರಿಸಿ ದೇಶದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನಂತರದಲ್ಲಿ ದಲಿತರು, ಅಲ್ಪಸಂಖ್ಯಾತರ ಮೇಲೆ ಹಲ್ಲೆ, ದಾಳಿ ನಡೆಸುವ ಮೂಲಕ ಗೋದ್ರಾ ಮಾದರಿಯ ಅನುಷ್ಠಾನಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ದೇಶ ಆರ್ಥಿಕ ಹಿಂಜರಿತಕ್ಕೆ ತುತ್ತಾಗಿ, ಅಲ್ಲೋಲ ಕಲ್ಲೋಲವಾಯಿತು. ದೇಶದಾದ್ಯಂತ ಶಾಂತಿಗೆ ಭಂಗ ಉಂಟಾಯಿತು. ಹೀಗಾಗಿ ಗುಜರಾತ್ ಮಾದರಿಯು ಬಿಜೆಪಿಗೆ ಫಲ ನೀಡಲಿಲ್ಲ. ಆದ್ದರಿಂದ ಇತ್ತೀಚೆಗೆ ದೇಶದ ಬೇರೆ, ಬೇರೆ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಆ ರಾಜ್ಯಗಳ ಮತದಾರರು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾರನ್ನು ತಿರಸ್ಕರಿಸಿದರು. ಆದ್ದರಿಂದ ಸೋತ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಬೇಕೆಂಬ ಕಾರಣಕ್ಕೆ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳ ಶಾಸಕರನ್ನು ನೂರಾರು ಕೋಟಿ ರೂ. ಹಣ ಚೆಲ್ಲಿ ಖರೀದಿ ಮಾಡುವ ಮೂಲಕ ಎಲ್ಲೆಡೆಯೂ ಕರ್ನಾಟಕದ ಆಪರೇಷನ್ ಕಮಲ ಮಾದರಿಯನ್ನು ಬಿಜೆಪಿ ನಾಯಕರು ಪ್ರಸಿದ್ಧಿ ಪಡೆಸುತ್ತಿದ್ದಾರೆ ಎಂದು ಅವರು ದೂರಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಕುರಿ, ಕೋಳಿಯಂತೆ ಖರೀದಿಸಿ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿಯುವಲ್ಲಿ ಆರಂಭದಲ್ಲಿ ಕರ್ನಾಟಕದಲ್ಲಿ ಯಶಕಂಡ ಬಿಜೆಪಿಯು ಈಗ ಮಧ್ಯಪ್ರದೇಶದಲ್ಲಿ ಅಧಿಕಾರ ಹಿಡಿಯಲು ಅಲ್ಲಿಯ ಕಾಂಗ್ರೆಸ್ ಶಾಸಕರಿಗೆ ಆಮೀಷವೊಡ್ಡಿ ಬೆಂಗಳೂರಿಗೆ ಕರೆ ತಂದು ಹೋಟೆಲ್ ಒಂದರಲ್ಲಿ ಕೂಡಿ ಹಾಕಿದೆ. ಹೀಗೆ ಯಾವ, ಯಾವ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿಲ್ಲವೋ ಆ ಎಲ್ಲಾ ರಾಜ್ಯಗಳಲ್ಲಿ ಆಪರೇಷನ್ ಕಮಲ ನಡೆಸಿ ಅಧಿಕಾರ ಹಿಡಿಯಲು ಹವಣಿಸುತ್ತಿದೆ ಎಂದು ಆಪಾದಿಸಿದರು.
ಇಂದು ಸಿಹಿ ವಿತರಣೆ:
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಮತ್ತು ವಿರೋಧ ಪಕ್ಷದ ನಾಯಕರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿದ್ದರಾಮಯ್ಯನವರ ರಾಜೀನಾಮೆ ಅಂಗೀಕರಿಸಿದೆ ಅವರನ್ನೇ ಆ ಎರಡು ಹುದ್ದೆಯಲ್ಲಿ ಮುಂದು ವರೆಸಿದಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿಯವರು ಕೆಪಿಸಿಸಿ ಅಧ್ಯಕ್ಷರನ್ನಾಗಿ ಟ್ರಬಲ್ ಶೂಟರ್ ಎಂದೇ ಹೆಸರು ಪಡೆದಿರುವ ಡಿ.ಕೆ.ಶಿವಕುಮಾರ್ ಅವರನ್ನು, ಕಾರ್ಯಾಧ್ಯಕ್ಷರನ್ನಾಗಿ ಸಲೀಂ ಅಹ್ಮದ್, ಸತೀಶ್ ಜಾರಕಿಹೊಳಿ ಹಾಗೂ ಈಶ್ವರ್ ಖಂಡ್ರೆ ಅವರನ್ನು ಹಾಗೂ ವಿಧಾನ ಪರಿಷತ್‍ನ ಮುಖ್ಯ ಸಚೇತಕರನ್ನಾಗಿ ಎಂ.ನಾರಾಯಣಸ್ವಾಮಿ ಹಾಗೂ ವಿಧಾನಸಭೆ ಮುಖ್ಯಸಚೇತಕರನ್ನಾಗಿ ಅಜಯ್‍ಸಿಂಗ್ ಅವರನ್ನು ನೇಮಿಸಿರುವುದನ್ನು ಸ್ವಾಗತಿಸಿ ಇಂದು ಬೆಳಿಗ್ಗೆ 11 ಗಂಟೆಗೆ ಪಾಲಿಕೆಯ ಆವರಣದಲ್ಲಿ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಸಂಭ್ರಮಿಸಲಾಗುವುದು ಎಂದು ಅವರು ವಿವರಿಸಿದರು.
ಕೆಪಿಸಿಸಿಯ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ರಾಜ್ಯದ ಎಲ್ಲಾ ಭಾಗದವರಿಗೆ ಮತ್ತು ಎಲ್ಲಾ ವರ್ಗದವರಿಗೆ ಆದ್ಯತೆ ನೀಡುವ ಮೂಲಕ ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿದ್ದು, ಈಗ ನೇಮಕಗೊಂಡಿರುವ ನೂತನ ಪದಾಧಿಕಾರಿಗಳು ಪಕ್ಷದ ಬಲವರ್ಧನೆಗೆ ಒತ್ತು ನೀಡಿ, ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಾಲಿಕೆ ಸದಸ್ಯ ಎ.ನಾಗರಾಜ್ ಮಾತನಾಡಿ, ಬೇಸಿಗೆಯ ಸಂದರ್ಭದಲ್ಲಿ ಹೊಳೆಯಲ್ಲಿ ನೀರು ಕಡಿಮೆಯಾಗಿ ದಾವಣಗೆರೆಯಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿದ್ದ ಸಂದರ್ಭದಲ್ಲಿ ಹಿಂದೆ ತುಂಗಾಭದ್ರಾ ನದಿಯಲ್ಲಿ ಮರಳಿನ ಚೀಲ ಹಾಕಿ ಪಾಲಿಕೆ ಪಂಪಸೆಟ್ ವರೆಗೂ ನೀರು ಬರುವಂತೆ ಮಾಡಿ, ಆ ನೀರನ್ನು ಪಂಪ್ ಮಾಡಿ ನಗರಕ್ಕೆ ಸರಬರಾಜು ಮಾಡಲಾಗುತಿತ್ತು. ಆದರೆ, ಈಗಾಗಲೇ ನಗರದಲ್ಲಿ ಒಂಭತ್ತು, ಹತ್ತು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೂ, ಪಾಲಿಕೆಯ ಮೇಯರ್, ಆಯುಕ್ತರು ನೀರಿನ ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ದೇವರಮನಿ ಶಿವಕುಮಾರ್, ಕೆ.ಚಮನ್‍ಸಾಬ್, ಗಡಿಗುಡಾಳ್ ಮಂಜುನಾಥ್, ಪಾಮೇನಹಳ್ಳಿ ನಾಗರಾಜ, ಸಯ್ಯದ್ ಚಾರ್ಲಿ, ಕಾಂಗ್ರೆಸ್ ಮುಖಂಡರಾದ ಗಣೇಶ್ ಹುಲ್ಮನಿ, ಅಲ್ಲಾವಲಿ ಗಾಜಿಖಾನ್, ಲಿಯಾಕತ್ ಅಲಿ, ಹದಡಿ ವೆಂಕಟೇಶ್, ಬಿ.ಎಚ್.ಉದಯಕುಮಾರ್, ಖಾಜಿ ಖಲೀಲ್, ಹರೀಶ್, ಡಿ.ಶಿವಕುಮಾರ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
