ತಿಂಗಳು ಪೂರ್ತಿ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಆಗ್ರಹ

ದಾವಣಗೆರೆ:

       ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಗರದ ಎಲ್ಲಾ ಚಿತ್ರ ಮಂದಿರಗಳಲ್ಲಿ ನವೆಂಬರ್ ತಿಂಗಳು ಪೂರ್ತಿ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಬೇಕೆಂದು ಕನ್ನಡಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

        ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಕೆ.ಜಿ.ಯಲ್ಲಪ್ಪ, ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನವೆಂಬರ್ 1ರಿಂದ 30ರ ವರೆಗೆ ನಗರದ ಎಲ್ಲಾ ಚಿತ್ರ ಮಂದಿಗಳಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸಬೇಕು ಹಾಗೂ ಇದನ್ನು ಕಡ್ಡಾಯಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

       ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಕೆ.ಜಿ.ಶಿವಕುಮಾರ್ ಮಾತನಾಡಿ, ಹಿಂದೆ ಚಿತ್ರ ಮಂದಿಗಳ ಮಾಲೀಕರೇ ಸ್ವಯಂಪ್ರೇರಿತರಾಗಿ ಮುಂದೆ ಬಂದು, ರಾಜ್ಯೋತ್ಸದ ಹಿನ್ನೆಲೆಯಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸಲು ಮುಂದಾಗಿದ್ದರು. ಆದರೆ, ಈಗಿನ ಕೆಲ ಚಿತ್ರ ಮಂದಿರಗಳ ಮಾಲೀಕರಲ್ಲಿ ಈ ಕನ್ನಡ ಅಭಿಮಾನ ಇಲ್ಲವಾಗಿದೆ. ಆದ್ದರಿಂದ ರಾಜ್ಯೋತ್ಸವದ ಸಂದರ್ಭದಲ್ಲೂ ದುಡ್ಡು ಮಾಡುವ ದುರಾಸೆಯಿಂದ ಪರಭಾಷೆ ಚಿತ್ರಗಳನ್ನು ಪ್ರದರ್ಶನ ಮಾಡುವ ಮೂಲಕ ಕನ್ನಡಕ್ಕೆ ದ್ರೋಹ ಬಗೆಯುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

       ಇನ್ನೂ ಮುಂದಾದರೂ ಚಿತ್ರ ಮಂದಿರಗಳ ಮಾಲೀಕರು ಕನ್ನಡ ಅಭಿಮಾನ ಬೆಳೆಸಿಕೊಳ್ಳುವ ಮೂಲಕ ಕನ್ನಡ ಚಿತ್ರ ಪ್ರದರ್ಶಿಸುವ ಬದ್ಧತೆ ತೋರಿಸಬೇಕು. ಈ ಬಾರಿ ಅರುಣ ಚಿತ್ರ ಮಂದಿರದ ಮಾಲೀಕರು ಮಯೂರ ಚಿತ್ರ ಪ್ರದರ್ಶನಕ್ಕೆ ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಆದರೆ, ತ್ರಿಭುವನ್ ಚಿತ್ರ ಮಂದಿರದಲ್ಲಿ ಹಿಂದಿ ಹಾಗೂ ವಸಂತದಲ್ಲಿ ತೆಲುಗು ಚಿತ್ರ ಪ್ರದರ್ಶಿಸಲು ಮುಂದಾಗಿರುವುದು ಅತ್ಯಂತ ಖಂಡನೀಯವಾಗಿದೆ.

          ಈ ಚಿತ್ರ ಮಂದಿರಗಳಲ್ಲೂ ಕನ್ನಡ ಚಿತ್ರ ಪ್ರದರ್ಶಿಸಲು ಮಾಲೀಕರು ಮುಂದಾಗಬೇಕೆಂದು ಆಗ್ರಹಿಸಿದರು.ಕರ್ನಾಟಕ ಜನಮನ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ನಾಗೇಂದ್ರ ಬಂಡೀಕರ್ ಮಾತನಾಡಿ, 1970-80ರ ದಶಕದಲ್ಲಿ ಚನ್ನಗಿರಿ ವಿರೂಪಾಕ್ಷಪ್ಪನವರು ಚಿತ್ರ ಮಂದಿರಗಳ ಮಾಲೀಕರು ಆಗಿದ್ದ ಸಂದರ್ಭದಲ್ಲಿ ಚಿತ್ರ ಮಂದಿರದ ಮಾಲೀಕರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಕನ್ನಡ ಚಿತ್ರ ಪ್ರದರ್ಶನ ಮಾಡುತ್ತಿದ್ದರು. ಆದರೆ, ಹಂತ-ಹಂತವಾಗಿ ಒಂದು ವಾರದ ವರೆಗೆ ಮಾತ್ರ ಕನ್ನಡ ಚಿತ್ರ ಪ್ರದರ್ಶನ ನಡೆಯುತಿತ್ತು. ಆದರೆ, ಇತ್ತೀಚೆಗೆ ನ.1ರಂದು ಸಹ ಪರಭಾಷ ಚಿತ್ರಗಳನ್ನು ಪ್ರದರ್ಶಿಸುವ ಮನೋಭಾವವನ್ನು ಚಿತ್ರ ಮಂದಿರಗಳ ಮಾಲೀಕರು ಬೆಳೆಸಿಕೊಂಡಿರುವುದು ಅತ್ಯಂತ ವಿಪರ್ಯಾಸವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

          ಒಕ್ಕೂಟದ ಸಂಚಾಲಕ ಅವಿನಾಶ್.ವಿ ಮಾತನಾಡಿ, ಜಿಲ್ಲಾಡಳಿತವು ನವೆಂಬರ್ ತಿಂಗಳು ಪೂರ್ತಿಯಾಗಿ ಕನ್ನಡ ಚಿತ್ರ ಪ್ರದರ್ಶನಗೊಳಿಸುವುದನ್ನು ಕಡ್ಡಾಯಗೊಳಿಸಿ, ತಕ್ಷಣವೇ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ, ಯಾವ ಚಿತ್ರ ಮಂದಿರಗಳಲ್ಲಿ ಪರಭಾಷ ಚಿತ್ರ ಪ್ರದರ್ಶಿಸುತ್ತಾರೋ, ಆ ಚಿತ್ರಮಂದಿರಗಳ ಎದುರು ಒಕ್ಕೂಟದ ಪದಾಧಿಕಾರಿಗಳು, ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟಿಸುತ್ತೇವೆ. ನಮ್ಮನ್ನು ದಾಟಿ ಪ್ರೇಕ್ಷಕರು ಪರಭಾಷಾ ಚಿತ್ರಗಳನ್ನು ವೀಕ್ಷಿಸಲಿ ಎಂದು ಎಚ್ಚರಿಸಿದರು.

          ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡರ ಬಣ)ಯ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಮಾತನಾಡಿ, ಸುದ್ದಿಗೋಷ್ಠಿಯಲ್ಲಿ ವಿಶ್ವ ಕರವೇಯ ಅಮ್ಜದ್ ಅಲಿ, ಶ್ರೇಯಸ್, ಕನ್ನಡ ಸಮರ ಸೇನೆಯ ಐಗೂರು ಸುರೇಶ್, ಗಣೇಶ್ ಕುಂದುವಾಡ, ಕರವೇಯ ಕೆ.ಜಿ.ಬಸವರಾಜ್, ಕರವೇ ಶಿವರಾಮೇಗೌಡ ಬಣದ ಎಸ್.ಜಿ.ಸೋಮಶೇಖರ್, ರಾಜು, ಕರ್ನಾಟಕ ಏಕತಾ ವೇದಿಕೆಯ ರಾಜ್ಯಾಧ್ಯಕ್ಷ ಎನ್.ಹೆಚ್.ಹಾಲೇಶ್, ರಾಘು ದೊಡ್ಡಮನಿ, ಮಂಜು ನಾಯ್ಕ, ಕರ್ನಾಟಕ ಕದಂಬ ಸೇನೆಯ ಮಾಗಡಿ ದ್ವಾರಕೇಶ್, ಸುವರ್ಣ ಕರ್ನಾಟಕ ವೇದಿಕೆಯ ಸಂತೋಷ್‍ಕುಮಾರ್.ಆರ್, ಕರ್ನಾಟಕ ನವ ನಿರ್ಮಾಣ ಸೇನೆಯ ಶೇರ್ ಅಲಿ, ಜೈ ಕರ್ನಾಟಕದ ಮಂಜುನಾಥ್‍ಗೌಡ, ಶಾಂತಕುಮಾರ್, ಕರವೇ ಸ್ವಾಭಿಮಾನಿ ಬಣದ ಕೆ.ಬಿ.ರುದ್ರೇಶ್, ವಿವಿಧ ಕನ್ನಡಪರ ಸಂಘಟನೆಗಳ ಹರೀಶ್‍ರಾವ್, ಮಂಜುನಾಥ್ ಆವರಗೆರೆ, ರಾಮಚಂದ್ರ, ಶಿವಯೋಗಿ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link