ದೆಹಲಿ :
ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳು ಸಲ್ಲಿಸಿದ್ದ ಎಲ್ಲಾ ಅರ್ಜಿಗಳು ಗುರುವಾರ ತಿರಸ್ಕಾರಗೊಂಡಿದ್ದು, ನಾಳೆ ಬೆಳಿಗ್ಗೆ 5.30ಕ್ಕೆ ಗಲ್ಲು ಖಾಯಂ ಆಗಿದೆ.
ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿಗಳು ಕೊನೆಯ ಹಂತದಲ್ಲೂ ಸಾಕಷ್ಟು ಪ್ರಯತ್ನ ನಡೆಸಿದರು. ಶುಕ್ರವಾರ ನಿಗದಿಯಾಗಿರುವ ಗಲ್ಲು ಶಿಕ್ಷೆಗೆ ತಡೆ ನೀಡಬೇಕೆಂದು ದಿಲ್ಲಿಯ ಪಟಿಯಾಲಾ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಪಟಿಯಾಲಾ ಹೈಕೋರ್ಟ್, ಪ್ರಕರಣದ ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್ (32), ಪವನ್ ಗುಪ್ತ (25), ವಿನಯ್ ಕುಮಾರ್ ಶರ್ಮಾ (26), ಅಕ್ಷಯ್ ಕುಮಾರ್ (31) ಗಲ್ಲು ಶಿಕ್ಷೆಗೆ ತಡೆ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಪಟಿಯಾಲಾ ಹೌಸ್ ನ್ಯಾಯಾಲಯ ವಜಾಗೊಳಿಸಿತು.
ಪಟಿಯಾಲಾ ಹೈಕೋರ್ಟ್ ತೀರ್ಪಿನ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅಪರಾಧಿಗಳ ಪರ ವಕೀಲ ಎಪಿ ಸಿಂಗ್, ಅಪರಾಧಿಗಳನ್ನು ಭಾರತ-ಪಾಕ್ ಗಡಿಗೆ ಕಳುಹಿಸಿ, ಚೀನಾ ಗಡಿ ಡೋಕ್ಲಾಂಗೆ ಕಳುಹಿಸಿ. ಆದ್ರೆ, ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಡಿ ಎಂದು ಒತ್ತಾಸಿದರು. ಅಪರಾಧಿಗಳು ದೇಶಕ್ಕಾಗಿ ಸೇವೆ ಮಾಡಲು ಸಿದ್ದರಿದ್ದಾರೆ ಎಂದರು. ಈ ಸಂಬಂಧ ತಾವು ಪ್ರಮಾಣ ಪತ್ರ ಸಲ್ಲಿಸಲು ಸಿದ್ದ ಎಂದು ಎಪಿ ಸಿಂಗ್ ಹೇಳಿದ್ದಾರೆ.
ಆದರೆ, ಅಪರಾಧಿಗಳ ಮುಂದೆ ಈಗ ಯಾವುದೇ ಕಾನೂನಿನ ಆಯ್ಕೆ ಉಳಿದಿಲ್ಲ. ಎಲ್ಲಾ ಅಪರಾಧಿಗಳು ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಅಲ್ಲಿಯೇ ಗಲ್ಲು ಶಿಕ್ಷೆ ಜಾರಿಗೆ ಸಕಲ ಸಿದ್ಧತೆ ನಡೆದಿದೆ.
2012ರಲ್ಲಿ ದೆಹಲಿಯಲ್ಲಿ ಚಲಿಸುವ ಬಸ್‌ನಲ್ಲಿ ಯುವತಿ ನಿರ್ಭಯಾ ಮೇಲೆ ಭೀಕರವಾಗಿ ಅತ್ಯಾಚಾರ ಎಸಗಿ ಆಕೆಯ ಸಾವಿಗೆ ಕಾರಣವಾಗಿದ್ದ ಹಂತಕರಿಗೆ ಕೊನೆಗೂ ಗಲ್ಲು ಶಿಕ್ಷೆ ಜಾರಿಯಾಗಲಿದೆ. ಗಲ್ಲು ಶಿಕ್ಷೆ ಜಾರಿಗೆ ಇದ್ದ ಎಲ್ಲ ಅಡ್ಡಿ ಆತಂಕಗಳೂ ನಿವಾರಣೆಯಾಗಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ