ತುಮಕೂರು
ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿ ತುಮಕೂರು ತಾಲ್ಲೂಕು ಪಂಚಾಯಿತಿಯ ಕಚೇರಿ ಇದ್ದು, ಈ ಕಚೇರಿ ಆವರಣದಲ್ಲಿ ವಾಹನ ನಿಲುಗಡೆಯ ಅವ್ಯವಸ್ಥೆಯಿಂದಾಗಿ ಈ ಕಚೇರಿಗೆ ಬರುವ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆಯೆಂಬ ದೂರು ಕೇಳಿಬಂದಿದೆ.
ತಾಲ್ಲೂಕು ಪಂಚಾಯಿತಿ ಕಚೇರಿಗೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಬರುತ್ತಾರೆ. ಕಾರ್ಯನಿರ್ವಹಣಾಧಿಕಾರಿ ಒಳಗೊಂಡು ಅಧಿಕಾರಿ-ಸಿಬ್ಬಂದಿ ಬರುತ್ತಾರೆ. ಇಡೀ ತಾಲ್ಲೂಕಿನ ವಿವಿಧೆಡೆಗಳಿಂದ ಸಾರ್ವಜನಿಕರು ಕಚೇರಿ ಕೆಲಸಗಳಿಗೆ ಬರುತ್ತಾರೆ. ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿಗಳಿಗೆ ಸರ್ಕಾರಿ ವಾಹನ (ಜೀಪು) ಇದ್ದು, ಅದರಲ್ಲಿ ಬಂದು ಹೋಗುತ್ತಾರೆ. ಕೆಲ ಅಧಿಕಾರಿಗಳು ಸರ್ಕಾರಿ ವಾಹನದಲ್ಲಿ ಬರುತ್ತಾರೆ. ಇನ್ನು ಸದಸ್ಯರುಗಳು ತಮ್ಮ ಖಾಸಗಿ ವಾಹನಗಳಲ್ಲಿ ಬರುತ್ತಾರೆ. ಇವರೆಲ್ಲರ ವಾಹನಗಳ ನಿಲುಗಡೆಗೆ ಇಲ್ಲೊಂದು ವ್ಯವಸ್ಥೆ ಆಗಬೇಕೆಂಬ ಮಾತುಗಳು ಈಗ ಕೇಳುತ್ತಿದೆ.
ಪಕ್ಕದಲ್ಲೇ ತುಮಕೂರು ಗ್ರಾಮಾಂತರ ಶಾಸಕರ ಕಚೇರಿ ಇದ್ದು, ಇಲ್ಲಿಗೂ ಆ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕರು ಬಂದು ಹೋಗುತ್ತಿದ್ದು, ಅವರಿಗೂ ವಾಹನ ನಿಲುಗಡೆಗೆ ಕಷ್ಟವಾಗುತ್ತಿದೆ.
ತಾ.ಪಂ. ಕಚೇರಿಯ ಇನ್ನೊಂದು ಬದಿಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಕಚೇರಿ ಇದ್ದು ಈ ಕಚೇರಿಯ ಅಧಿಕಾರಿ-ನೌಕರರು ಮತ್ತು ಇಲ್ಲಿಗೆ ಬರುವ ಸಾರ್ವಜನಿಕರ ವಾಹನ ನಿಲುಗಡೆಗೂ ಸಮಸ್ಯೆ ಉಂಟಾಗುತ್ತಿದೆ.
ತಾ.ಪಂ. ಕಚೇರಿಯ ಸುತ್ತ ಕಾಂಪೌಂಡ್ ನಿರ್ಮಿಸಲಾಗಿದೆಯಾದರೂ, ಕಾಂಪೌಂಡ್ ಒಳಭಾಗದಲ್ಲಿ ದ್ವಿಚಕ್ರ ವಾಹನಗಳ ಯದ್ವಾತದ್ವಾ ನಿಲುಗಡೆಯೇ ಇಲ್ಲಿ ಸಮಸ್ಯೆ ತಲೆಯೆತ್ತಲು ಕಾರಣವಾಗಿದೆ. ವಾಹನಗಳನ್ನು ಶಿಸ್ತುಬದ್ಧವಾಗಿ ನಿಲುಗಡೆ ಮಾಡುವಂತೆ ಇಲ್ಲೊಂದು ವ್ಯವಸ್ಥೆ ಆಗಬೇಕು” ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.