ತುಮಕೂರು :
ಮಹಾಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ವ್ಯಾಪಿಸುತ್ತಿದ್ದು, ಇಂದು ಜಿಲ್ಲೆಯಲ್ಲಿ ಮೊದಲ ಬಲಿ ಪಡೆದಿದೆ.
ಹೌದು, ಈ ಕುರಿತು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಸ್ಪಷ್ಟಪಡಿಸಿದ್ದು, ಇಂದು ಬೆಳಗ್ಗೆ 10.45 ಕ್ಕೆ ಜಿಲ್ಲೆಯ ಶಿರಾ ಮೂಲದ 60 ವರ್ಷದ ವೃದ್ಧ ಕೊರೊನಾ ಸೋಂಕಿತ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
ಮೃತ ವೃದ್ಧ 3 ದಿನಗಳ ಹಿಂದೆ ಅಂದರೆ ಮಾ.24 ರಂದು ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದ ಎನ್ನಲಾಗಿದ್ದು, 3 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದು ಇಂದು ಕೊನೆಯುಸಿರೆಳೆದಿದ್ದಾನೆ.
ಮೃತ ವೃದ್ಧ ದೆಹಲಿಯ ಜಾಮಿಯಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾರ್ಚ್ 5 ರಂದು ತುಮಕೂರಿನಿಂದ ದೆಹಲಿಗೆ ‘ಸಂಪರ್ಕ್ ಕ್ರಾಂತಿ’ ಎಂಬ ರೈಲಿನ ಮೂಲಕ 13 ಮಂದಿಯೊಂದಿಗೆ ತೆರಳಿದ್ದರು. ಸದ್ಯ ಆತನೊಂದಿಗೆ ಪ್ರಯಾಣ ಮಾಡಿದ್ದ 13 ಮಂದಿಯನ್ನು ಪತ್ತೆ ಹಚ್ಚಲಾಗಿದ್ದು ಅವರ ಆರೋಗ್ಯವನ್ನು ತೀವ್ರ ನಿಗದಲ್ಲಿ ಇಡಲಾಗಿದ್ದು, ಒಟ್ಟು 33 ಮಂದಿಯೊಂದಿಗೆ ಮೃತ ವೃದ್ದ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.
ಈ ಹಿಂದೆ ಕೊರೊನಾ ವೈರಸ್ ರಾಜ್ಯದಲ್ಲಿ ಕಲ್ಬುರ್ಗಿಯಲ್ಲಿ ಮೊದಲ ಬಲಿ ಪಡೆದಿತ್ತು. ನಂತರ ಚಿಕ್ಕಬಳ್ಳಾಪುರದಲ್ಲಿ ಎರಡನೇ ಬಲಿ ಪಡೆದಿದ್ದು, ಇದೀಗ ತುಮಕೂರಿನಲ್ಲಿ ಮೂರನೇ ಬಲಿ ಪಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ