ಬೆಂಗಳೂರು :
ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಾಗುತ್ತಿರುವ ಕಾರಣದಿಂದ ಸಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಾರುಕಟ್ಟೆಗಳನ್ನು ಶಿಫ್ಟ್ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೊಸ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ತರಕಾರಿ, ಹಣ್ಣುಗಳನ್ನು ಕೊಳ್ಳಲು ಕೆ.ಆರ್. ಮಾರುಕಟ್ಟೆಗೆ ಜನರು ಮುಗಿಬೀಳುತ್ತಿದ್ದಾರೆ. ಹೀಗಾಗಿ, ಮಾರ್ಕೆಟ್, ಕಲಾಸಿಪಾಳ್ಯದಲ್ಲಿ ಜನಸಂದಣಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕಲಾಸಿಪಾಳ್ಯ ಮತ್ತು ಕೆ.ಆರ್. ಮಾರ್ಕೆಟ್ನಲ್ಲಿ ಪರಿಶೀಲನೆ ಮಾಡುತ್ತಿದ್ದೇವೆ. ಇಲ್ಲಿ ಬಂದು ಪರಿಶೀಲನೆ ನಡೆಸಿದಾಗ ಬೆಳಗ್ಗೆಯಿಂದ ಹೆಚ್ಚು ಜನ ಬರುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ತರಕಾರಿಗೆ ಚಂದ್ರಾ ಲೇಔಟ್, ವಿಜಯನಗರ, ಬಸವನಗುಡಿ ಕಡೆಯಿಂದ ಜನರು ಬರುತ್ತಿದ್ದಾರೆ. ಪ್ರಧಾನಿ ಮೋದಿ ಲಾಕ್ಡೌನ್ಗೆ ಆದೇಶಿಸಿದ್ದರೂ ಜನರು ಕೇಳುತ್ತಿಲ್ಲ. ಈಗ ಪರಿಶೀಲಿಸಿದಾಗ ಪರಿಸ್ಥಿತಿ ಗೊತ್ತಾಗಿದೆ. ಸಚಿವ ಆರ್. ಅಶೋಕ್ ಮತ್ತು ಬಿಬಿಎಂಪಿ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇವೆ. ಮಾರ್ಕೆಟ್ ವ್ಯಾಪಾರವನ್ನು ನಾಳೆಯೇ ಶಿಫ್ಟ್ ಮಾಡುವ ಬಗ್ಗೆ ಚರ್ಚಿಸುತ್ತೇನೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಕೆ.ಆರ್. ಮಾರ್ಕೆಟ್ನಲ್ಲಿರುವ ಅಂಗಡಿಗಳನ್ನು ಬಸವನಗುಡಿಯ ನ್ಯಾಷನಲ್ ಮೈದಾನ ಮತ್ತು ವಿಜಯನಗರದ ಮೈದಾನಕ್ಕೆ ಶಿಫ್ಟ್ ಮಾಡುವ ಬಗ್ಗೆ ಮಾತುಕತೆ ನಡೆಸಲಾಗುವುದು. ಅಲ್ಲಿ ತರಕಾರಿ ಮಾರಾಟಕ್ಕೆ ಅನುವು ಮಾಡಿ, ಅಂತರ ಕಾಯ್ದುಕೊಳ್ಳಲು ಸೂಚನೆ ಕೊಡಲಾಗುತ್ತದೆ. ಇದಕ್ಕೆ ಎರಡು ದಿನ ಸಮಯ ಬೇಕಾಗುತ್ತದೆ. ನಾಳೆಯೇ ಶಿಪ್ಟ್ ಮಾಡುವ ಬಗ್ಗೆ ಮೇಯರ್ ಜೊತೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/03/file75b0kv24owz3mo9ck78-1562909354.gif)