ಬೆಂಗಳೂರು
ಕೊರೊನಾ ಸೋಂಕು ತಡೆಗಟ್ಟಲು ಲಾಕ್ ಡೌನ್ ಮಾಡಿದ ಹಿನ್ನೆಲೆಯಲ್ಲಿ ಇನ್ನು ಮುಂದೆ ವಾಹನದಲ್ಲಿ ಅಂಗಡಿಗೆ ಹೋಗುವಂತಿಲ್ಲ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಕೊರೊನಾ ಮುಂಜಾಗ್ರತಾ ಕ್ರಮ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸ್ ಅಧಿಕಾರಿಗಳ ಜೊತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಭೆ ನಡೆಸಿ ಮೂರು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ.ಸಾರ್ವಜನಿಕರು ದಿನಸಿ ವಸ್ತುಗಳನ್ನು ಖರೀದಿಸಲು ನಡೆದುಕೊಂಡೇ ಓಡಾಡಬೇಕೆ ಹೊರತು ಯಾವುದೇ ವಾಹನ ಬಳಸುವಂತಿಲ್ಲ. ಅಲ್ಲದೇ, ತಮ್ಮ ಏರಿಯಾದ ರಸ್ತೆಯಲ್ಲಿ ದಿನಸಿ ವಸ್ತುಗಳನ್ನು ಖರೀದಿ ಮಾಡಬೇಕು ಎಂದು ಅವರು ತಿಳಿದ್ದಾರೆ.
ವಲಸೆ ಕಾರ್ಮಿಕರಿಗೆ ಹೊರ ಹೋಗದಂತೆ ಕ್ರಮ ಜರುಗಿಸಬೇಕು ಎಂದ ಅವರು ಬೆಂಗಳೂರಿನ ಕಲ್ಯಾಣ ಮಂಟಪದಲ್ಲಿ ಅವರಿಗೆ ಊಟದ ವ್ಯವಸ್ಥೆ, ದಿನಸಿ ವ್ಯವಸ್ಥೆ ಮಾಡಲಾಗುತ್ತಿದ್ದು ಇದರ ಸಂಪೂರ್ಣ ನಿರ್ವಹಣೆ ಬಿಬಿಎಂಪಿ ಮಾಡುತ್ತದೆ. ಹೀಗಾಗಿ ಯಾರು ಕೂಡ ಸದ್ಯ ಇರುವ ಸ್ಥಳಬಿಟ್ಟು ಬೇರೆ ಪ್ರದೇಶಕ್ಕೆ ಹೋಗದಂತೆ ತಡೆಹಿಡಿಯಬೇಕು. ಆಯಾ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಇದರ ನಿರ್ವಹಣೆ ಮಾಡುವ ಮೂಲಕ ಎಲ್ಲರಿಗೂ ಕಲ್ಯಾಣ ಮಂಟಪದಲ್ಲಿ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಕೊರೊನಾ ವೈರಸ್ ಸೋಂಕು ತಡೆಗಟ್ಟಲು ದೇಶವ್ಯಾಪಿ ಲಾಕ್ ಡೌನ್ ಮಾಡಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಸದ್ಯಕ್ಕೆ ಬಾಡಿಗೆದಾರರ ಬಳಿ ಬಾಡಿಗೆ ಕೇಳುವಂತಿಲ್ಲ. ಅಲ್ಲದೇ, ಖಾಸಗಿಯವರೂ ಕೂಡ ಬಾಡಿಗೆ ಕೇಳಬಾರದು ಎಂದು ವಿನಂತಿ ಮಾಡಿಕೊಳ್ಳುವುದಾಗಿ ತಿಳಿಸಿದ ಅವರು,ಬಾಡಿಗೆದಾರರು ಮತ್ತು ಪಿಜಿಯಲ್ಲಿ ಇರುವವರನ್ನು ಖಾಲಿ ಮಾಡಿಸಬಾರದು. ಯಾರಾದರೂ ಬಾಡಿಗೆದಾರರಿಗೆ ತೊಂದರೆ ನೀಡದರೆ ಪೊಲೀಸ್ ಇಲಾಖೆ ಕಠಿಣ ಕ್ರಮ ಜರುಗಿಸಲಿದೆ ಎಂದು ಎಚ್ಚರಿಕೆ ನೀಡಿದರು.ಅಲ್ಲದೇ, ಡಾಕ್ಟರ್, ನರ್ಸ್ ಗಳಿಗೂ ತೊಂದರೆ ನೀಡದರೂ ದೂರು ದಾಖಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಡಿಸಿಎಂ ಅಶ್ವಥ್ ನಾರಾಯಣ, ಸಿಎಸ್ ವಿಜಯ ಭಾಸ್ಕರ್, ಡಿಜಿ-ಐಜಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ನಗರದ ಎಲ್ಲಾ ಡಿಸಿಪಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸಭೆ ನಡೆಸಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ