ಇರಾನ್ ಮೇಲೆ ಇಸ್ರೇಲ್ ಹಠಾತ್ ದಾಳಿ….!

ಜೆರುಸಲೇಂ

     ಇರಾನ್‌ನ  ಪರಮಾಣು ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸೇನೆಯು ಶುಕ್ರವಾರ ಬೆಳಗಿನ ಜಾವ ಹಠಾತ್ ದಾಳಿ ನಡೆಸಿದೆ. ಇರಾನ್ ರಾಜಧಾನಿ ಟೆಹ್ರಾನ್ ಸೇರಿದಂತೆ ಹಲವು ಕಡೆಗಳಲ್ಲಿ ಸ್ಫೋಟದ ಸದ್ದುಗಳು ಕೇಳಿವೆ. ಈ ದಾಳಿಯಲ್ಲಿ ಇರಾನ್ ಸೇನೆಯ ಪ್ರಮುಖ ಅಧಿಕಾರಿಗಳು, ಪರಮಾಣು ವಿಜ್ಞಾನಿಗಳು ಸೇರಿದಂತೆ ಅನೇಕ ಪ್ರಮುಖರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈ ದಾಳಿಯಲ್ಲಿ ಇರಾನ್‌ಗೆ ಭಾರೀ ಹಾನಿಯಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ.

   ಇರಾನ್ ಪರಮಾಣು ನೆಲೆಗಳನ್ನು ಗುರಿಯಾಗಿಸಿ ನಮ್ಮ ಸೇನೆ ಹಠಾತ್ ದಾಳಿ ನಡೆಸಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇರಾನ್ ಮೇಲಿನ ದಾಳಿ ಮುಂದುವರಿಯಲಿದೆ ಎಂದೂ ಅವರು ಘೋಷಿಸಿದ್ದಾರೆ. ಆದಾಗ್ಯೂ, ಇರಾನ್ ಮೇಲೆ ದಾಳಿ ಮಾಡಿದ ನಂತರ, ಇಸ್ರೇಲ್ ತನ್ನ ವಾಯುಪ್ರದೇಶವನ್ನು ಮುಚ್ಚಿದೆ.

   ಪರಮಾಣು ಚಟುವಟಿಕೆಗಳನ್ನು ಇರಾನ್ ಹೆಚ್ಚಿಸಿರುವುದು ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಈ ದಾಳಿ ನಡೆದಿದೆ. ಇರಾನ್ ಶೀಘ್ರದಲ್ಲೇ ಅತ್ಯಂತ ಬಲಿಷ್ಠ ಪರಮಾಣು ಶಕ್ತಿಯಾಗಲಿದೆ ಎಂಬ ವರದಿಗಳು ಇತ್ತೀಚೆಗೆ ನಿರಂತರವಾಗಿ ಬಿತ್ತರವಾಗುತ್ತಿದ್ದವು. ಇರಾನ್ ಈ ದಿಕ್ಕಿನಲ್ಲಿ ವೇಗವಾಗಿ ಕೆಲಸ ಮಾಡುತ್ತಿತ್ತು. ಇದರ ಬೆನ್ನಲ್ಲೇ ಇಸ್ರೇಲ್ ಈಗ ಆ ಪರಮಾಣು ನೆಲೆಗಳನ್ನು ಗುರಿಯಾಗಿಸಿಕೊಂಡಿದೆ.

    ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬಿಡುವುದಿಲ್ಲ ಎಂದು ಇಸ್ರೇಲ್ ಕೆಲವು ವರ್ಷಗಳಿಂದಲೂ ಎಚ್ಚರಿಕೆ ನೀಡುತ್ತಾ ಬಂದಿತ್ತು. ಇದೀಗ ಇಸ್ರೇಲ್ ಅದರಂತೆಯೇ ಕಾರ್ಯಪ್ರವೃತ್ತವಾಗಿದೆ. ಇರಾನ್ ಪರಮಾಣು ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. 

    ತಮ್ಮ ಮೇಲೆ ದಾಳಿ ನಡೆದದರೆ ಸೂಕ್ತ ತಿರುಗೇಟು ನೀಡಲಾಗವುದು ಎಂದು ಇರಾನ್ ಕೂಡ ಈಗಾಗಲೇ ಎಚ್ಚರಿಕೆ ನೀಡಿದೆ. ಇದೀಗ ಇಸ್ರೇಲ್ ದಾಳಿಯ ನಂತರ, ಇರಾನ್ ಪ್ರತೀಕಾರದ ಕ್ರಮಕ್ಕೆ ಮುಂದಾಗಬಹುದು ಎನ್ನಲಾಗಿದೆ. ಇದನ್ನು ಖುದ್ದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಕೂಡ ಹೇಳಿಕೊಂಡಿದ್ದಾರೆ. 

   ಇರಾನ್​​ನ ಸಂಭಾವ್ಯ ದಾಳಿ ಎದುರಿಸಲು ಇಸ್ರೇಲ್ ಸನ್ನದ್ಧವಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ತಿಳಿಸಿದ್ದಾರೆ. ಅಲ್ಲದೆ, ಇಸ್ರೇಲ್‌ನಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸುವ ವಿಶೇಷ ಆದೇಶಕ್ಕೆ ಕಾಟ್ಜ್ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.

Recent Articles

spot_img

Related Stories

Share via
Copy link