ಬಳ್ಳಾರಿ
ಕೋವಿಡ್-19ಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಎಂ.ಎಸ್.ಶ್ರೀಕರ್ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಸಭೆ ನಡೆಸಿದರು.ಬಳ್ಳಾರಿ ಜಿಲ್ಲಾಡಳಿತವು ಇದುವರೆಗೆ ಕೈಗೊಳ್ಳಲಾದ ಕ್ರಮಗಳ ಕುರಿತು ವಿವರವಾದ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀಕರ್ ಅವರು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಸಿದ್ಧತಾ ಕ್ರಮಗಳು ಕುರಿತು ಅನೇಕ ಸಲಹೆ ಸೂಚನೆಗಳನ್ನು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ನೀಡಿದರು.
ಜಿಲ್ಲೆಯಲ್ಲಿ ಗೃಹಬಂಧನದಲ್ಲಿರುವ 1204 ಜನರ ಮೇಲೆ ತೀವ್ರ ನಿಗಾ ಇಡಬೇಕು. ಈಗಾಗಲೇ 14 ದಿನಗಳ ಗೃಹಬಂಧನ ಪೂರೈಸಿರುವ 232 ಜನರ ಆರೋಗ್ಯವನ್ನು ಸಹ ಆಗಾಗ ವಿಚಾರಿಸುತ್ತಿರಬೇಕು. ಏನಾದರೂ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ದಾಖಲಾಗುವಂತೆ ಕಂಟ್ರೋಲ್ ರೂಂ ಮೂಲಕ ತಿಳಿಸಬೇಕು. ರ್ಯಾಪಿಡ್ ರಿಸ್ಪಾನ್ಸ್ ಟೀಂ ಮೂಲಕ ಅವರನ್ನು ಭೇಟಿಯಾಗಿ ಅವರ ಮೇಲೆ ನಿಗಾವಹಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಎಂ.ಎಸ್.ಶ್ರೀಕರ್ ಅವರು ಸೂಚನೆ ನೀಡಿದರು.
4 ಪಾಸಿಟಿವ್ ಪ್ರಕರಣಗಳು ಪತ್ತೆ: ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ 3 ಮತ್ತು ಸಿರಗುಪ್ಪದಲ್ಲಿ 1 ಕೊರೊನಾ ಸೊಂಕಿತ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಸೊಂಕಿತರ ಪ್ರಥಮ ಮತ್ತು ದ್ವೀತಿಯ ಹಂತದ ಸಂಪರ್ಕಿತರನ್ನು ಗುರುತಿಸಿ ಅವರಿಗೆ ಕೋವಿಡ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೊಸಪೇಟೆಯಲ್ಲಿ 5ಕಿ.ಮೀ ರೆಡ್‍ಝೋನ್ ಮತ್ತು ಬಫರ್‍ಝೋನ್ ಅಂತ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಪ್ರತಿನಿತ್ಯ ಎಲ್ಲ ರಸ್ತೆಗಳಿಗೆ ರಾಸಾಯನಿಕ ಸಿಂಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ವಿವರಿಸಿದರು.
ಬಳ್ಳಾರಿ ಜಿಲ್ಲಾಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿ ಬದಲಾಯಿಸಲಾಗಿದ್ದು, ಇಲ್ಲಿ ಕೊರೊನಾ ಹೊರತುಪಡಿಸಿ ಉಳಿದ ಚಿಕಿತ್ಸೆಗೆ ಬರುವ ರೋಗಿಗಳನ್ನು ವಿಮ್ಸ್‍ಗೆ ದಾಖಲಾಗುವಂತೆ ತಿಳಿಸಲಾಗುತ್ತಿದೆ ಎಂದು ವಿವರಿಸಿದ ಅವರು ಈ ಆಸ್ಪತ್ರೆಯಲ್ಲಿ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಸೊಂಕಿತರಿಗೆ ಹಾಗೂ ಐಸೋಲೇಶನ್ ವಾರ್ಡ್‍ನಲ್ಲಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 91 ಅಂಬ್ಯುಲೆನ್ಸ್‍ಗಳಿದ್ದು,ಅದರಲ್ಲಿ 79 ಅಂಬ್ಯುಲೆನ್ಸ್‍ಗಳು ಸೇವೆಯಲ್ಲಿವೆ. ಖಾಸಗಿ 24 ಅಂಬ್ಯುಲೆನ್ಸ್‍ಗಳಿವೆ ಮತ್ತು ಒಂದು ಸಂಶಯಾಸ್ಪದ ಕೊರೊನಾ ಸೊಂಕಿತರನ್ನು ಕರೆದುಕೊಂಡು ಬರುವುದಕ್ಕಾಗಿಯೇ ಎಲ್ಲ ಅಗತ್ಯ ಸೌಲಭ್ಯಗಳಿರುವ ಕೊರೊನಾ ಅಂಬ್ಯುಲೆನ್ಸ್ ಸಿದ್ದಪಡಿಸಲಾಗಿದೆ ಎಂದು ಡಿಎಚ್‍ಒ ಡಾ.ಜನಾರ್ಧನ್ ಅವರು ಸಭೆಗೆ ವಿವರಿಸಿದರು.
42800 ಆಹಾರ ಪೊಟ್ಟಣಗಳ ವಿತರಣೆ:
ಲಾಕ್‍ಡೌನ್ ಆದ ದಿನದಿಂದ ಇದುವರೆಗೆ 42800 ಆಹಾರ ಪೊಟ್ಟಗಳನ್ನು ನಿರ್ಗತಿಕರಿಗೆ ಮತ್ತು ನಿರಾಶ್ರೀತರಿಗೆ ವಿತರಿಸಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸಭೆಗೆ ವಿವರಿಸಿದರು.ಇದರ ಜೊತೆಗೆ ನಿರಾಶ್ರೀತರು ಮತ್ತು ನಿರ್ಗತಿಕರಿಗಾಗಿ 9 ಶೆಲ್ಟರ್‍ಗಳನ್ನು ಆರಂಭಿಸಲಾಗಿದ್ದು,ಅವುಗಳಲ್ಲಿ 707 ಜನರು ಪ್ರತಿನಿತ್ಯ ಆಹಾರ ಒದಗಿಸಲಾಗುತ್ತಿದೆ.
ಅಗತ್ಯ ವಸ್ತುಗಳು ಒಳಗೊಂಡ 6580 ಪಡಿತರ ಕಿಟ್‍ಗಳನ್ನು ದಾನಿಗಳ ನೆರವಿನಿಂದ ಪಡೆದುಕೊಂಡು ನಿರ್ಗತಿಕರಿಗೆ ಒದಗಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಬಹುತೇಕ ದಾನಿಗಳ ನೆರವಿನಿಂದಲೇ ಇದೆಲ್ಲವನ್ನು ಕೈಗೊಳ್ಳಲಾಗಿದೆ ಎಂಬುದನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಗಮನಕ್ಕೆ ತಂದ ಡಿಸಿ ನಕುಲ್ ಅವರು ಈಗಾಗಲೇ ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿ ಮೂಲಕ ಎರಡು ತಿಂಗಳ ಪಡಿತರ ವಿತರಿಸಲಾಗುತ್ತಿರುವುದರಿಂದ ಇನ್ಮುಂದೆ ದಾನಿಗಳು ನೆರವು ನೀಡುವ ಸಂದರ್ಭದಲ್ಲಿ ಜಮಖಾನಾ ಹಾಗೂ ಇನ್ನೀತರ ಅಗತ್ಯ ವಸ್ತುಗಳು ನೀಡುವಂತೆ ಕೋರಿ ಎಂದು ನೋಡಲ್ ಅಧಿಕಾರಿಯಾಗಿರುವ ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಪ್ಪ ಅವರಿಗೆ ಸೂಚಿಸಿದರು.
ಪ್ರತಿನಿತ್ಯ 30 ಸಾವಿರ ಲೀಟರ್ ಹಾಲು ವಿತರಣೆ:
ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿನಿತ್ಯ 30 ಸಾವಿರ ಲೀಟರ್ ಹಾಲುಗಳನ್ನು ವಿತರಣೆ ಮಾಡಲಾಗುತ್ತಿದೆ. ವಾಹನಗಳ ಮ್ಯಾಪಿಂಗ್ ಮಾಡಿಸಿ ಮಹಾನಗರ ಪಾಲಿಕೆ ಹಾಗೂ ಕೆಎಂಎಫ್ ವಾಹನಗಳ ಮೂಲಕ ವಿತರಣೆ ಮಾಡಲಾಗುತ್ತಿದೆ ಎಂದು ಡಿಸಿ ನಕುಲ್ ಅವರು ಸಭೆಗೆ ವಿವರಿಸಿದರು.
ಬಳ್ಳಾರಿಯಲ್ಲಿರುವ ಎಪಿಎಂಸಿ ಆರಂಭಿಸಿ ಮತ್ತು ಸಾಮಾಜಿಕ ಅಂತರ ಪಾಲಿಸಿ ಜನರು ಖರೀದಿಸುವಂತೆ ನೋಡಿಕೊಳ್ಳಬೇಕು ಮತ್ತು ಮಾಂಸದ ಮಾರುಕಟ್ಟೆಯ ವಿಷಯದಲ್ಲಿ ಇದನ್ನೇ ಪಾಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀಕರ್ ಅವರು ಸೂಚನೆ ನೀಡಿದರು.
ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಈ ಸದಾವಕಾಶವನ್ನು ಬಳಸಿಕೊಂಡು ಇಡೀ ನಗರ ಮತ್ತು ಪಟ್ಟಣಗಳನ್ನು ಸಂಪೂರ್ಣ ಸ್ವಚ್ಛಗೊಳಿಸಬೇಕು ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಎಸ್ಪಿ ಸಿ.ಕೆ.ಬಾಬಾ, ಜಿಪಂ ಸಿಇಒ ಕೆ.ನಿತೀಶ್,ಅಪರ ಜಿಲ್ಲಾಧಿಕಾರಿ ಮಂಜುನಾಥ, ಡಿಎಚ್‍ಒ ಜನಾರ್ಧನ್, ಜಿಲ್ಲಾ ಶಸ್ತ್ರಚಿಕಿತ್ಸಕ ಬಸರೆಡ್ಡಿ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








