ಚಿಕ್ಕನಾಯಕನಹಳ್ಳಿ 

ತಾಲ್ಲೂಕಿನ ಎಲ್ಲಾ ಮೆಡಿಕಲ್ ಸ್ಟೋರ್ ಮಾಲೀಕರು ವೈದ್ಯರ ಸಲಹೆಯಂತೆ ಮಾತ್ರೆಗಳನ್ನು ವಿತರಣೆ ಮಾಡುವಾಗ ಗ್ರಾಹಕರ ವಿವರಗಳನ್ನು ನಮೂದು ಮಾಡಿಕೊಳ್ಳಬೇಕು ಎಂದು ತಹಸೀಲ್ದಾರ್ ತೇಜಸ್ವಿನಿ ಹನೂರು ಸೂಚಿಸಿದ್ದಾರೆ.
ಕೋವಿಡ್-19 ಕೊರೋನಾ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮದ ಮುಂದುವರೆದ ಭಾಗವಾಗಿ, ಮೆಡಿಕಲ್ ಸ್ಟೋರ್‍ಗಳಲ್ಲಿ ವೈದ್ಯರ ಸಲಹೆಯ ಚೀಟಿ ಇಲ್ಲದಂತೆ ಯಾರಾದರೂ ಸಾರ್ವಜನಿಕರು ಜ್ವರಕ್ಕೆ ಸಂಬಂಧಿಸಿದ ಮಾತ್ರೆಗಳಾದ ಪ್ಯಾರಾಸಿಟಮಲ್, ಡೋಲೋ-650 ಹಾಗೂ ಇತರೆ ಮಾತ್ರೆಗಳನ್ನು ಕೊಂಡರೆ, ಮಾರಾಟ ಮಾಡುವಾಗ ಗ್ರಾಹಕರ ವಿಳಾಸ, ಹೋಬಳಿ, ಫೋನ್ ನಂಬರ್ ಬರೆದುಕೊಂಡಿರಬೇಕು. ಈ ಬಗ್ಗೆ ಆರೋಗ್ಯ ಅಥವಾ ಕಂದಾಯ ಇಲಾಖೆಯ ಅಧಿಕಾರಿಗಳು ಕೇಳಿದಾಗ ಅಂತಹವರ ಪೂರ್ಣವಿವರವನ್ನು ಹಾಜರು ಪಡಿಸಬೇಕು ಎಂದಿದ್ದಾರೆ.
ಕಡ್ಡಾಯವಾಗಿ ವೈದ್ಯರ ಸಲಹೆಯ ಮೇರೆಗೆ ಮಾತ್ರ ಮಾತ್ರೆಗಳನ್ನು ಮಾರಾಟ ಮಾಡುವುದು. ನೇರ ಖರೀದಿದಾರರಿಗೆ ಜ್ವರಕ್ಕೆ ಸಂಬಂಧಿಸಿದ ಮಾತ್ರೆಗಳನ್ನು ಮಾರಾಟ ಮಾಡಬಾರದು. ಮಾತ್ರೆಗಳ ವಿವರಗಳ ಸ್ಟಾಕ್ ರಿಜಿಸ್ಟರ್‍ಗಳನ್ನು ಕಡ್ಡಾಯವಾಗಿ ಇಡತಕ್ಕದ್ದು. ಹಾಗಾಗಿ ತಾಲ್ಲೂಕಿನ ಎಲ್ಲಾ ಮೆಡಿಕಲ್ ಸ್ಟೋರ್‍ಗಳಲ್ಲಿ ಮಾತ್ರೆಗಳನ್ನು ಮಾರಾಟ ಮಾಡುವಾಗ ಈಗ ಹೇಳಿರುವ ಸೂಚನೆಗಳನ್ನು ಪಾಲಿಸಬೇಕು.
ಯಾವುದೇ ಸಂದರ್ಭದಲ್ಲಾದರೂ ಮೆಡಿಕಲ್ ಸ್ಟೋರ್‍ಗಳ ಪರಿಶೀಲನೆ ನಡೆಸಿದಾಗ ಯಾವುದಾದರೂ ಲೋಪ-ದೋಷಗಳು ಕಂಡು ಬಂದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು. ಯಾವುದೇ ದೂರುಗಳು ಇದ್ದರೆ ಕಚೆರಿಯ ಸಹಾಯವಾಣಿ 08133-267242 ಕರೆ ಮಾಡಬಹುದಾಗಿದೆ ಎಂದು ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







