ಹಾವೇರಿ
ಜಿಲ್ಲೆಯಾದ್ಯಂತ ಬಿ.ಎಲ್.ಓಗಳ ಮೂಲಕ ಮನೆ ಮನೆಗೆ ತೆರಳಿ ತುರ್ತು ಆರೋಗ್ಯ ಸಮೀಕ್ಷೆ ಕಾರ್ಯ ನಾಳೆಯಿಂದ (ಎಪ್ರಿಲ್ 24) ನಡೆಸಲು ತಹಶೀಲ್ದಾರಗಳಿಗೆ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರು ಸೂಚನೆ ನೀಡಿದರು.ಜಿಲ್ಲಾಡಳಿತದ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ತಹಶೀಲ್ದಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದ ಅವರು ತುರ್ತು ಆರೋಗ್ಯ ಸಮೀಕ್ಷೆ ಕುರಿತಂತೆ ಎಲ್ಲ ಬಿ.ಎಲ್. ಓ.ಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಎಪ್ರಿಲ್ 23ರಂದು ಆಯಾ ತಾಲೂಕುಗಳಲ್ಲಿ ತರಬೇತಿ ಆಯೋಜಿಸಬೇಕು. ಎಪ್ರಿಲ್ 24 ರಿಂದ ಮನೆ ಮನೆ ಸಮೀಕ್ಷೆ ಕೈಗೊಂಡು ಜನರ ಆರೋಗ್ಯ ಮಾಹಿತಿ ಸಂಗ್ರಹಿಸಿ ಮೂರು ದಿನಗಳೊಳಗೆ ಸಮೀಕ್ಷೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಈವರೆಗೆ ಕೋವಿಡ್ ಸೋಂಕು ಪತ್ತೆಯಾಗಿಲ್ಲ. ಆದಾಗ್ಯೂ ಸರ್ಕಾರದ ಸೂಚನೆಯಂತೆ ರ್ಯಾಪಿಡ್ ಹೆಲ್ತ್ ಸಮೀಕ್ಷೆ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬಿ.ಎಲ್.ಓ(ಮತಗಟ್ಟೆ ಅಧಿಕಾರಿಗಳು)ಗಳ ಮೂಲಕ ಆರೋಗ್ಯ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಈ ಉದ್ದೇಶಕ್ಕಾಗಿ ಮಾಹಿತಿ ಸಂಗ್ರಹಕ್ಕಾಗಿ ಆರೋಗ್ಯ ಇಲಾಖೆಯಿಂದ ಮಾದರಿ ತಯಾರಿಸಲಾಗಿದೆ. ಈ ಮಾದರಿಯಲ್ಲಿ ಮನೆ ಮನೆಗೆ ತೆರಳಿ 60 ವರ್ಷ ಮೇಲ್ಪಟ್ಟ ವಯೋಮಾನದವರ ವಿವರ, ಸಕ್ಕರೆ ಕಾಯಿಲೆ ಇರುವವರು, ರಕ್ತದೊತ್ತಡ ಇರುವವರು, ಕ್ಯಾನ್ಸರ್‍ನಿಂದ ಬಳಲುತ್ತಿರುವವರು, ಜ್ವರ, ಶೀತ, ಕೆಮ್ಮು, ಉಸಿರಾಟದ ತೊಂದರೆ ಇರುವವರ ಹೆಸರು, ವಯಸ್ಸು, ಮೊಬೈಲ್ ಸಂಖ್ಯೆ, ಕಾಯಿಲೆ ವಿವರದ ಮಾಹಿತಿ ಸಂಗ್ರಹಿಸಿ ಆಯಾ ಮೇಲುಸ್ತುವಾರಿ ಅಧಿಕಾರಿಗಳ ಮೂಲಕ ತಹಶೀಲ್ದಾರ ಕಚೇರಿಗೆ ತಲುಪಿಸಬೇಕು. ಆರೋಗ್ಯ ಇಲಾಖೆ ಮೂಲಕ ಜಿಲ್ಲಾಡಳಿತಕ್ಕೆ ಮಾಹಿತಿ ಕ್ರೋಢಿಕರಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ತೀವ್ರತರ ರೋಗ ಲಕ್ಷಣಗಳು ಕಂಡುಬಂದರೆ ಆರೋಗ್ಯ ಇಲಾಖೆ ಮೂಲಕ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶ ಹೊಂದಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ ಅವರು ಮಾತನಾಡಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸಭೆ ನಡೆಸಬೇಕು. ಮನೆ ಮನೆ ಸಮೀಕ್ಷೆಗೆ ತೆರಳುವ ಬಿ.ಎಲ್.ಓ.ಗಳಿಗೆ ಮಾಸ್ಕ್, ಸ್ಯಾನಿಟೇಸರ್ ನೀಡಬೇಕು. ಕೇಂದ್ರ ಸ್ಥಾನದಲ್ಲಿ ಬಿ.ಎಲ್ ಓ.ಗಳು ಇಲ್ಲದಿದ್ದರೆ ಪರ್ಯಾಯ ಶಿಕ್ಷಕರ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ಉಪ ವಿಭಾಗಾಧಿಕಾರಿ ಡಾ.ದೀಲಿಷ್ ಶಶಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಅಂದಾನೆಪ್ಪ ವಡಗೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪನವರ, ಚುನಾವಣಾ ತಹಶೀಲ್ದಾರ ಪ್ರಶಾಂತ ನಾಲವಾರ, ಹಾವೇರಿ ತಹಶೀಲ್ದಾರ ಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ ಇತರರು ಉಪಸ್ಥಿತರಿದ್ದರು.