ತಿಪಟೂರು
ಪ್ರಪಂಚದಲ್ಲಿ ಕಿಲ್ಲರ್ ಕೊರೊನಾ ತನ್ನ ಕದಂಬ ಬಾಹುವನ್ನು ಚಾಚಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿ ಅಟ್ಟಹಾಸವನ್ನು ಮುಂದುವರೆಸುತ್ತಿರುವ ಈ ಸಂದರ್ಭದಲ್ಲಿ ತನಗರಿಯದಂತೆ ಕೆಲವೊಂದು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ವಸುದೈವ ಕುಟುಂಬಕಂ ಎಂಬ ಮಾತನ್ನು ಸಾಕ್ಷೀಕರಿಸುವಂತಿದೆ
ಪಟ್ಟಣದ ವ್ಯಾಮೋಹ, ಹೆಚ್ಚಿನ ದುಡಿಮೆ ಮಾಡಿ ತಾನು ಮೇಲೆ ಬರಬೇಕೆಂಬ ಹಂಬಲ, ಇಲ್ಲಿ ಏನೂ ಇಲ್ಲ, ತಾನು ಸಾಧಿಸುವುದು ಬೇಕಾದಷ್ಟಿದೆ ಎಂದು ಪಟ್ಟಣ ಸೇರಿದ್ದವರು ತಮ್ಮ ಮನೆಯವರು ಕರೆದರೂ ಮನೆಗೆ ಬರುತ್ತಿರಲಿಲ್ಲ. ಆದರೆ ಈಗ ಚೀನಾದ ಹುವಾನ್ ಪ್ರಾಂತ್ಯದಲ್ಲಿ ಜನ್ಮತಾಳಿದ ಕೊರೊನಾ ಎಂಬ ಮಹಾ ಮಾರಿಯಮ್ಮನ ದಯೆಯಿಂದ ಬೇಡ ಬೇಡವೆಂದರೂ ಯುವಕರು ಹಳ್ಳಿಗಳಿಗೆ ಹಿಂದಿರುಗುತ್ತಿದ್ದು, ಕೆಲವು ದಶಕಗಳ ಹಿಂದ ಇದ್ದ ಅವಿಭಕ್ತ ಕುಟುಂಬವನ್ನು ಮತ್ತೆ ಸೃಷ್ಟಿ ಮಾಡುತ್ತಿದೆ.
ಬಾಂಧವ್ಯ-ಸಂಬಂಧಗಳ ಬೆಸೆಯುತ್ತಿದೆ ಕೊರೊನಾ : ಇಷ್ಟು ದಿನ ಕೇವಲ ವಾಟ್ಸ್‍ಆಪ್, ಫೇಸ್‍ಬುಕ್ ಲೈವ್‍ಗಳಲ್ಲಿ ತಮ್ಮ ಬಂಧು ಬಳಗವನ್ನು ಪರಿಚಯಿಸುತ್ತಿದ್ದ ಪೋಷಕರು ಈಗ ತಮ್ಮ ಹಳ್ಳಿಗಳಿಗೆ ಮಕ್ಕಳ ಸಮೇತ ಹಿಂದಿರುಗಿ ಅಂಕಲ್, ಆಂಟಿ, ಬ್ರ, ಸಿಸ್ ಎಲ್ಲಾ ಹೋಗಿ, ಮತ್ತಜ್ಜ-ಮುತ್ತಜ್ಜಿ, ಅಜ್ಜ-ಅಜ್ಜಿ, ಸೋದರತ್ತೆ-ಮಾವ, ಚಿಕ್ಕಪ್ಪ-ದೊಡ್ಡಪ್ಪ, ಚಿಕ್ಕಮ್ಮ-ದೊಡ್ಡಮ್ಮ, ಅಣ್ಣ, ತಮ್ಮ, ಅಕ್ಕ, ತಂಗಿ ಎಂಬ ಪದಗಳು ಮಕ್ಕಳಿಗೆ ಅರಿವಿಲ್ಲದಂತೆ ಬರುತ್ತಿವೆ. ಇನ್ನು ಪಟ್ಟಣದಲ್ಲಿರಬೇಕು ಎನ್ನುತ್ತಿದ್ದ ಸೊಸೆಯಂದಿರು, ಅಕ್ಕಪಕ್ಕದವರನ್ನು ಮಾತನಾಡಿಸಲು ಮುಜುಗರದಿಂದ ಇರುತ್ತಿದ್ದವರು ಈಗ ಅತ್ತೆ, ನಾದಿನಿ, ಓರಗಿತ್ತಿಯರ ಕೂಡ ಅನ್ಯೋನ್ಯದಿಂದ ಬಾಳುವ ಕನಸನ್ನು ಕಾಣುವಂತಾಗಿದೆ.
ತೋಟ-ಹೊಲ, ಗದ್ದೆಗಳು ಸ್ವಚ್ಛವಾಗಿವೆ : ಸರ್.ಎಂ. ವಿಶ್ವೇರಯ್ಯನವರು ಹೇಳಿರುವ ಮಾತಾದ ಕುಳಿತು ತುಕ್ಕು ಹಿಡಿಯುವುದ ಕ್ಕಿಂತ, ದುಡಿದು ಸವೆಯುವುದೇ ಲೇಸು ಎಂಬ ಮಾತು ನೆನಪಿಗೆ ಬರುತ್ತಿದೆ. ನಗರಗಳಿಂದ ಹಿಂದಿರುಗಿರುವ ಯುವಕರಿಂದ ಹಿಡಿದು ವಯಸ್ಕರು, ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗುವ ತಮ್ಮ ದಿನಚರಿಯನ್ನು ಬದಲಿಸಿ, ಹೊಲ, ಗದ್ದೆ, ತೋಟ, ತುಡಿಕೆಗಳಿಗೆ ಹೋಗಿ ತಮ್ಮ ಅಪ್ಪನ ಜೊತೆ ಕೈಜೋಡಿಸಿ ತೋಟವನ್ನು ಹದ ಮಾಡುವುದಲ್ಲದೆ, ಗೊಬ್ಬರ, ಮಣ್ಣನ್ನು ತಮ್ಮ ತೋಟ-ಹೊಲಗಳಿಗೆ ಹೊಡೆಸಿ ಫಲವತ್ತುಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
ಇನ್ನು ತಮಗೆ ಹೇಗೆ ಬೇಕೋ ಹಾಗೆ ಬೆಳದಿದ್ದ ತೋಟದ ಬೇಲಿಗಳನ್ನು ಒಪ್ಪವಾಗಿ ಜೋಡಿಸಿದಂತೆ ಅಚ್ಚುಕಟ್ಟಾಗಿ ಕತ್ತರಿಸುವುದಲ್ಲದೆ, ಹಾಳಾಗಿದ್ದ ತಂತಿ ಬೇಲಿಯನ್ನು ಹೊಸ ಮುಳ್ಳು ತಂತಿಯನ್ನು ತಂದು ಮತ್ತೆ ಎಳೆದು ಕಟ್ಟುವವರಿಗೇನು ಕಡಿಮೆ ಇಲ್ಲದೆ, ಅಂಗಡಿಗಳಲ್ಲಿ ಇದ್ದ ತಂತಿಯೆಲ್ಲಾ ಖಾಲಿಯಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಇನ್ನು ವಿವಿಧ ಕಡೆಗಳಲ್ಲಿ ನೆಲೆಸಿದ್ದ, ನಮ್ಮ ತಾಲ್ಲೂಕಿನ ಸುಮಾರು 10 ರಿಂದ 15 ಸಾವಿರ ಜನರು ಆಗಮಿಸಿದ್ದಾರೆ.
ಸಮಯ ಕಳೆಯುವ ಸಲುವಾಗಿಯಾದರು ತೋಟ-ತುಡಿಕೆಗಳತ್ತ ಹೋಗುತ್ತಿರುವುದರಿಂದ ಭಾಗಶಃ ಎಲ್ಲಾ ತೋಟಗಳು ಅದರಲ್ಲೂ ನೀರಿನ ಸೌಕರ್ಯವಿರುವ ತೋಟಗಳೆಲ್ಲಾ ನಳನಳಿಸುವಂತೆ ಮಾಡುತ್ತಿದ್ದಾರೆ. ಇದೆಲ್ಲದರ ಮಧ್ಯೆ ಹಿರಿಯರು ಹೇಳಿರುವಂತೆ ಮಣ್ಣನ್ನು ನಂಬಿ ಕೆಟ್ಟವರಿಲ್ಲ ಎನ್ನುವ ಮಾತನ್ನು ಇಂದು ಕೊರೊನಾ ನಿಜವಾಗಿಸುತ್ತಿದೆ.
ಬಯಲಿಗೆ ಬರುತ್ತಿರುವ ಗ್ರಾಮೀಣ ಒಳಾಂಗಣ ಕ್ರೀಡೆಗಳು :
ಇನ್ನು ಯಾವಾಗಲು ಮೊಬೈಲ್, ವಿಡಿಯೊ ಗೇಮ್ ಹಿಡಿದು ಇಲ್ಲ ಕಂಪ್ಯೂಟರ್-ಟಿ.ವಿ ಮುಂದೆ ಆಟವಾಡುತ್ತಿದ್ದ ಮಕ್ಕಳು ಇಂದು ಅಜ್ಜ-ಅಜ್ಜಿಯರ ಜೊತೆ ಸೇರಿ, ಚೌಕಾಬಾರ, ಪಗಡೆ, ದಾಯ, ಪಗಡೆಯನ್ನು ಆಡುತ್ತಿದ್ದು ಮಕ್ಕಳ ಕೌಶಲ್ಯವು ವೃದ್ಧಿಯಾಗುವುದಲ್ಲದೇ ಈ ಆಟಗಳನ್ನು ತಿಳಿಯದ ಮಕ್ಕಳು ಇಂದು ಅಜ್ಜ-ಅಜ್ಜಿಯರ ಪ್ರೀತಿಯಿಂದ ಎಲ್ಲರೂ ಕಲಿಯುವಂತಾಗಿದ್ದು ಇನ್ನು ಅಜ್ಜಿ-ತಾತ ಹೇಳುವ ಕಥೆ ಕೇಳುವುದಂತು ಮಕ್ಕಳಿಗೆ ಪಂಚಪ್ರಾಣವಾಗಿ ಬಿಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
