ತುಮಕೂರು
ಜಿಲ್ಲಾ ಜೆಡಿಎಸ್ ಕಾರ್ಮಿಕ ಘಟಕದಿಂದ ಶುಕ್ರವಾರ ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಕಾರ್ಮಿಕರ ದಿನ ಆಚರಿಸಲಾಯಿತು. ಇದರ ಅಂಗವಾಗಿ ಅಸಂಘಟಿತ ಕಾರ್ಮಿಕರ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ಗಳನ್ನು ವಿತರಿಸಲಾಯಿತು.ಕಿಟ್ ವಿತರಸಿ ಮಾತನಾಡಿದ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿಯವರು, ಲಾಕ್ಡೌನ್ ಘೋಷಣೆಯಾದ ಬಳಿಕ ಬಡವರು, ದಿನಗೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತಹವರ ಸಹಾಯಕ್ಕೆ ನಾವಿದ್ದೇವೆ ಎನ್ನುವಂತೆ ಜಿಲ್ಲಾ ಜೆಡಿಎಸ್ನಿಂದ ಪ್ರತಿನಿತ್ಯ ಊಟ ನೀಡುತ್ತಾ, ಅವರ ಹಸಿವು ನೀಗಿಸುವ ಕಾರ್ಯ ಶ್ಲಾಘನೀಯವಾದುದು ಎಂದು ಹೇಳಿದರು.
ಕೊರೊನಾ ವೈರಸ್ ಸೋಂಕು ವಿಶ್ವವ್ಯಾಪಿ ಸಂಕಷ್ಟ ತಂದೊಡ್ಡಿದೆ, ಈ ಪರಿಸ್ಥಿತಿಯಲ್ಲಿ ಲಾಕ್ಡೌನ್ನಿಂದ ಹಲವರು ಬದುಕು ಕಳೆದುಕೊಂಡಿದ್ದಾರೆ, ಅಂತಹವರಿಗೆ ಸಹಾಯ ಮಾಡುತ್ತಾ ಅವರ ಬದುಕಿಗೆ ಶಕ್ತಿ ತುಂಬುವಂತಹ ಮಾನವೀಯ, ದೇವರಿಗೆ ಪ್ರಿಯವಾದ ಕಾರ್ಯ ಎಲ್ಲೆಡೆ ನಡೆಯುತ್ತಿದೆ. ಕಷ್ಟ ಹಂಚಿಕೊಳ್ಳುವುದು ಮಾನವೀಯತೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಹಸಿವಿನಿಂದ ನರಳುವಂತಹ ಒಂದೂ ಪ್ರಕರಣ ಇರಬಾರದು, ಅಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತಕ್ಕೆ ಸಿದ್ಧಗಂಗಾ ಮಠ ನೆರವಾಗುತ್ತದೆ, ಅಗತ್ಯವಿರುವವರಿಗೆಲ್ಲಾ ಊಟದ ವ್ಯವಸ್ಥೆ ಮಾಡಲು ಸಿದ್ಧ, ಶ್ರೀಮಠದ ಸೇವೆ ಬಳಸಿಕೊಳ್ಳಿ ಎಂದು ತಾವು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾಗಿ ಹೇಳಿದ ಶ್ರೀಗಳು, ಈವರೆಗೂ ಜಿಲ್ಲಾಧಿಕಾರಿಗಳು ಈ ಸಂಬಂಧ ತಮಗೆ ತಿಳಿಸಿಲ್ಲ, ಸಂಘಸಂಸ್ಥೆಗಳ ಸಹಕಾರದಿಂದ ಹಸಿವು ನೀಗಿಸುವ ಕೆಲಸ ಯಶಸ್ವೀಯಾಗಿ ನಡೆಯುತ್ತಿದೆ ಎಂದು ತಾವು ಭಾವಿಸಿರುವುದಾಗಿ ಹೇಳಿದರು.
ಕೊರೊನಾ ಕಾಯಿಲೆಗೆ ಮದ್ದಿಲ್ಲ, ಔಷಧಿ ಕಂಡುಹಿಡಿಯುವ ಪ್ರಯತ್ನ ನಡೆದಿದೆ. ಅಲ್ಲಿಯವರೆಗೂ ನಾವೆಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿ, ಕೈಗಳನ್ನು ಸ್ವಚ್ಚಗೊಳಿಸಿಕೊಂಡು ಕೊರೊನಾ ಹರಡದಂತೆ ತಡೆಯಬೇಕು ಎಂದು ಸ್ವಾಮೀಜಿ ಸಲಹೆ ಮಾಡಿದರು.
ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿಯವರು ಮಾತನಾಡಿ, ಕೊರೊನಾದಿಂದ ಸಾಕಷ್ಟ ಜನ ಬಾಧಿತರಾಗಿದ್ದಾರೆ. ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪನವರು ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಂಡಿರುವ ನಿರ್ಧಾರಕ್ಕೆ ಎಲ್ಲರೂ ಸಹಕಾರ ನೀಡುತ್ತಿದ್ದೇವೆ. ಕೊರೊನಾವನ್ನು ಮುಕ್ತಗೊಳಿಸಲು ಎಲ್ಲರೂ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದರು.
ಲಾಕ್ಡೌನ್ನಿಂದಾಗಿ ಕಷ್ಟಕ್ಕೆ ಒಳಗಾಗಿ ಹಸಿವಿನಿಂದ ಬಳಲುವವರಿಗೆ ಊಟದ ವ್ಯವಸ್ಥೆ ಮಾಡಬೇಕು ಎಂಬ ಕಾರಣದಿಂದ ಜೆಡಿಎಸ್ನಿಂದ ಊಟ ಸಿದ್ಧಪಡಿಸಿ ಬಡವರಿಗೆ ಪೂರೈಸುವ ಕೆಲಸ ಮಾಡಲಾಗುತ್ತದೆ. ಜಿಲ್ಲೆಯ ಇತರೆ ಭಾಗಗಳಲ್ಲೂ ಜೆಡಿಎಸ್ ಮುಖಂಡರು ಬಡವರಿಗೆ ಊಟ, ಆಹಾರ ಧಾನ್ಯ ವಿತರಿಸಿ ನೆರವಾಗುತ್ತಿದ್ದಾರೆ ಎಂದು ಹೇಳಿದರು.
ಲಾಕ್ಡೌನ್ನಿಂದಾಗಿ ಕಾರ್ಮಿಕ ವಲಯ ಚೆದುರಿಹೋಗಿದೆ. ಅವರನ್ನು ಒಗ್ಗೂಡಿಸಿ, ದುಡಿಯುವ ಕೈಗಳಿಗೆ ಉದ್ಯೋಗ ದೊರಕಿಸುವಂತಹ ಕಾರ್ಯಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡಬೇಕು ಎಂದು ತಿಪ್ಪೇಸ್ವಾಮಿ ಹೇಳಿದರು.
ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ಲಾಕ್ಡೌನ್ನಿಂದ ಕಾರ್ಮಿಕರು ಕೆಲಸ ಕಳೆದುಕೊಂಡು ಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅನ್ನದಾನ ಮಾಡುವ ಮೂಲಕ ಅವರಿಗೆ ನೆರವಾಗುತ್ತಿರುವುದು ಉತ್ತಮ ಕೆಲಸ ಎಂದ ಅವರು, ತಾವು ಗ್ರಾಮಾಂತರ ಕ್ಷೇತ್ರದಲ್ಲಿ 60 ಸಾವಿರ ಕುಟುಂಬಗಳಿಗೆ ಆಹಾರ ಧಾನ್ಯ ವಿತರಿಸುತಿದ್ದು, ಲಾಕ್ಡೌನ್ ಮುಂದುವರೆದರೆ ಮತ್ತೊಂದು ಸುತ್ತಿನಲ್ಲಿ ದಿನಸಿ ವಿತರಣೆ ಮಾಡುವುದಾಗಿ ಹೇಳಿದ ಅವರು, ತಮ್ಮ ಈ ಕಾರ್ಯಕ್ಕೆ ನಿತ್ಯ ಅನ್ನದಾಸೋಹದ ಸಿದ್ಧಗಂಗಾ ಮಠದ ಸೇವೆಯೇ ಸ್ಫೂರ್ತಿ ಎಂದರು.
ರೆಡ್ಕ್ರಾಸ್ ಸಂಸ್ಥೆಯ ರಾಜ್ಯ ಘಟಕದ ಸಭಾಪತಿ ಎಸ್.ನಾಗಣ್ಣನವರು ಮಾತನಾಡಿ, ಲಾಕ್ಡೌನ್ ಸಂದರ್ಭದಲ್ಲಿ ಹಲವಾರು ಸಂಘಸಂಸ್ಥೆಗಳು ನಿರ್ಗತಿಕರಿಗೆ ಅನ್ನ ಕೊಡುತ್ತಾ ಸಹಾಯ ಮಾಡುತ್ತಿದ್ದಾರೆ, ಇಲ್ಲವಾಗಿದ್ದರೆ ದೇಶದ ಪರಿಸ್ಥಿತಿ ಎಲ್ಲಿಗೆ ಹೋಗುತ್ತಿತ್ತೋ ಹೇಳಲಾಗುತ್ತಿರಲಿಲ್ಲ, ಸರ್ಕಾರ ಮಾಡದ ಅನ್ನ ದಾಸೋಹ ಕಾರ್ಯವನ್ನು ಸಂಘಸಂಸ್ಥೆಗಳು ಮಾಡುತ್ತಿವೆ ಎಂದು ಶ್ಲಾಘಿಸಿದರು.
ಸಿದ್ಧಗಂಗಾ ಶ್ರೀಗಳು ಅನುಸರಿಸಿದ ದಾಸೋಹದ ಪರಿಕಲ್ಪನೆ ಇಂದು ಕೊರೊನಾ ಸಂಕಷ್ಟ ಕಾಲದಲ್ಲಿ ಇಡೀ ದೇಶಕ್ಕೆ ಪಸರಿಸಿದೆ. ಕೊರೊನ ಬಾಧೆ ಮುಗಿಯಬೇಕು. ದೇಶದಲ್ಲಿ ಕೊರೊನಾ ಹಾನಿ ದೊಡ್ಡ ಪ್ರಮಾಣದಲ್ಲಿ ಆಗಿಲ್ಲ, ಅದನ್ನು ಎದುರಿಸುವ, ಸಹಿಸಿಕೊಳ್ಳುವ ಶಕ್ತಿ ನಮಗಿದೆ ಎಂದು ತೋರಿಸಿಕೊಟ್ಟಿದ್ದೇವೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಕಷ್ಟಕ್ಕೆ ಸಿಕ್ಕಿದವರಿಗೆ ನೆರವಾಗುವಂತಹ ಮನಸುಗಳು ಹೆಚ್ಚಾಗಲಿ ಎಂದು ಆಶಿಸಿದರು.
ಜೆಡಿಎಸ್ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಶ್ರೀರಾಮಯ್ಯ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಟಿ.ಆರ್.ಆಂಜನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ರಂಗಪ್ಪ, ನಗರ ಪಾಲಿಕೆ ಉಪ ಮೇಯರ್ ಶಶಿಕಲಾ ಗಂಗಹನುಮಯ್ಯ, ನಗರ ಅಧ್ಯಕ್ಷ ಬೆಳ್ಳಿ ಲೋಕೇಶ್, ಮುಖಂಡರಾದ ನರಸೇಗೌಡ, ಮಹಾಲಿಂಗಯ್ಯ, ಪ್ರೆಸ್ ರಾಜಣ್ಣ, ಗಂಗಣ್ಣ, ಪ್ರಸನ್ನ(ಪಚ್ಚಿ) ಕುಂಭಣ್ಣ, ಗಂಗಹನುಮಯ್ಯ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
