ಹೊಸದುರ್ಗ
ನಮ್ಮೂರನ್ನು ಮರೆತಿರುವಿರಾ ಸಂಸದರೇ ರಾಜ್ಯದಲ್ಲಿ ಅತ್ಯಂತ ಬರಗಾಲ ಪೀಡಿತ ಪ್ರದೇಶ ಹೊಸದುರ್ಗ ಕ್ಷೇತ್ರ ಕೂಡ ಒಂದೆಡೆಯಾದರೆ, ಅತ್ಯಂತ ಕಡು ಬಡವರು, ನಿರ್ಗತಿಕರು, ಅಕ್ಕಿ ಪಿಕ್ಕಿ ಜನಾಂಗದವರು ಮತ್ತು ಏಳವರು ಸಂಖ್ಯೆ ಸಾಕಷ್ಟಿರುವ ತಾಲ್ಲೂಕನ್ನೆ ತಾವು ನಿರ್ಲಕ್ಷ್ಯ ಮಾಡಿ ಮರೆತರೆ ಹೇಗೆ..?
ಇಂಥಹದ್ದೊಂದು ಪ್ರಶ್ನೆಯನ್ನು ಹೊಸದುರ್ಗ ತಾಲ್ಲೂಕಿನ ಜನತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಕೇಳುತ್ತಿದ್ದಾರೆ. ಸಂಸದ ಎ.ನಾರಾಯಣಸ್ವಾಮಿ ಲಾಕ್ ಡೌನ್ ಶುರುವಾದ ದಿನದಿಂದಲೂ ಒಮ್ಮೆಯಾದರೂ ಜನತೆಯ ಸಮಸ್ಯೆ ಆಲಿಸಲು ಹಾಗೂ ಕೋರೋನಾ ವಾರಿಯರ್ಸ್ ತಂಡ ಭೇಟಿ ಮಾಡಲು ಬರಲಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ ಜನತೆಗಾಗಿ ಸಂಸದರು ಸಾಕಷ್ಟು ಶ್ರಮಿಸುತ್ತಿದ್ದಾರೆ. ದಿನನಿತ್ಯ ಸೋಷಿಯಲ್ ಮೀಡಿಯಾದಲ್ಲಿ ಅವರ ಕಾರ್ಯ ವೈಖರಿಗಳನ್ನು ನೋಡುತ್ತಿದ್ದೇವೆ. ಆದರೆ ಚಿತ್ರದುರ್ಗ ಮತ್ತು ಚಳ್ಳಕೆರೆಯಲ್ಲಿ ದಾಸೋಹ ಕೇಂದ್ರ ತೆರೆದಿರುವ ಸಂಸದರು ಎಲ್ಲಿದ್ದರೂ ಹೊಸದುರ್ಗ ಕ್ಷೇತ್ರಕ್ಕೆ ಬರಬೇಕು ಎಂಬುದು ಸಾರ್ವಜನಿಕರ ಕೂಗು.
ಚಿತ್ರದುರ್ಗ ಜಿಲ್ಲೆಯ ಅವರ 8 ಕ್ಷೇತ್ರಗಳ ಪೈಕಿ ಆನೇಕಲ್ ಕ್ಷೇತ್ರವೂ ಕೂಡ ಅವರಿಗೆ ಸೇರಿದೆ. ತಮ್ಮ ಸ್ವಂತ ಖರ್ಚಿನಲ್ಲಿ ಆಹಾರ ಸಾಮಗ್ರಿಗಳನ್ನು ಒದಗಿಸುತ್ತಿದ್ದಾರೆ. ಬಡವರಿಗೆ ಆಹಾರದ ಕಿಟ್ ವಿತರಣೆ, ಅನ್ನ ದಾಸೋಹ ಕುಟೀರ ತೆರೆಯುತ್ತಿದ್ದು, ಹಗಲು ರಾತ್ರಿಯೆನ್ನದೇ ಇವನ್ನೆಲ್ಲಾ ಒದಗಿಸಲು ಓಡಾಡುತ್ತಿರುವುದು ಉತ್ತಮ ಕಾರ್ಯ. ಆದರೆ ಬಡತನವನ್ನೇ ಬೆನ್ನಿಗೆ ಕಟ್ಟಿಕೊಂಡು ಜೀವಿಸುತ್ತಿರುವ ಹೊಸದುರ್ಗ ಕ್ಷೇತ್ರದ ಜನರ ಪ್ರೀತಿಗೆ ಸಂಸದರು ಪಾತ್ರರಾಗುತ್ತಿಲ್ಲವೇಕೆ ಎಂದು ಜನ ಕೊರಗುತ್ತಿದ್ದಾರೆ.
ಇತ್ತೀಚೆಗೆ ಸಂಸದರು ನೀಡಿದ್ದ ಆಹಾರ ಸಾಮಗ್ರಿ ಕಿಟ್ ಗಳು, ಸ್ಯಾನಿಟೈಸರ್ ಹಾಗೂ ಮಾಸ್ಕ್ ಗಳನ್ನು ಇಲ್ಲಿನ ಕೆಲ ಮುಖಂಡರುಗಳು ಮತ್ತು ಕಾರ್ಯಕರ್ತರು ಇಲ್ಲಿರುವ ಪೌರ ಕಾರ್ಮಿಕರಿಗೆ, ಕಡು ಬಡವರಿಗೆ, ನಿರ್ಗತಿಕರಿಗೆ ವಿತರಣೆ ಮಾಡಿದ್ದಾರೆ. ಆದರೆ ಸ್ವತಃ ಸಂಸದರೇ ಬಂದು ಜನರ ಸಮಸ್ಯೆ ಆಲಿಸಿ ಕಿಟ್ ಗಳನ್ನು ವಿತರಿಸಲು ಹೊಸದುರ್ಗ ಜನತೆ ಅವರ ಬರುವಿಕೆಗಾಗಿ ಕಾಯುತ್ತಿದ್ದಾರೆ. ಇದನ್ನರಿತು ಸಂಸದರು ಬರುವರೇ ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ