ತುಮಕೂರು:
ಕಳೆದ ಎರಡು ವಾರಗಳಿಂದ ನಗರದ ವಿವಿಧ ಬಡಾವಣೆಗಳ ಮನೆಗಳಿಗೆ ಕಲುಷಿತ ನೀರು ಸರಬರಾಜಾಗಿತ್ತು. ಮಣ್ಣು ಮಿಶ್ರಿತ ಹೊಂಡು ನೀರು ನಲ್ಲಿಗಳಲ್ಲಿ ಬಂದು ನಾಗರೀಕರು ಆತಂಕಪಟ್ಟಿದ್ದರು. ಕೊರೊನಾ ಸೋಂಕಿನ ಜೊತೆಗೆ ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಕಲುಶಿತ ನೀರು ಸೇವೆನೆಯಿಂದ ಇನ್ನಾವ ರೋಗ ಹರಡಬಹುದೊ ಎಂದು ಹೆದರಿದ್ದರು. ನಗರ ಪಾಲಿಕೆಗೆ ಈ ಬಗ್ಗೆ ಹಲವು ದೂರು ಬಂದಿದ್ದವು.
ಹೊಂಡು ನೀರನ್ನು ಬಾಟೆಲ್‍ಗಳಲ್ಲಿ ತುಂಬಿ ತಂದು ನಗರ ಪಾಲಿಕೆ ಸದಸ್ಯರಿಗೆ ತೋರಿಸಿ, ಈ ನೀರನ್ನು ಮನೆಯಲ್ಲಿ ವಾಟರ್‍ಫಿಲ್ಟರ್ ಮೂಲಕ ಶುದ್ಧೀಕರಿಸಿಕೊಳ್ಳಲೂ ಕಷ್ಟವಾಗುತ್ತಿದೆ. ಅಧಿಕ ಪ್ರಮಾಣದಲ್ಲಿ ಹೊಂಡು ನೀರು ಪೂರೈಕೆಯಾಗುತ್ತಿರುವುದರಿಂದ ವಾಟರ್ ಫಿಲ್ಟರ್ ಕೂಡಾ ಹಾಳಾಗುತ್ತವೆ. ಇಂಥಾ ನೀರು ಕುಡಿಯುವುದಿರಲ್ಲಿ, ಇತರೆ ಬಳಕೆಗೂ ಯೋಗ್ಯವಾಗಿಲ್ಲ ಎಂದು ನೀರು ಸರಬರಾಜು ವ್ಯವಸ್ಥೆ ವಿರುದ್ಧ ಆಕ್ರೋಶವ್ಯಕ್ತಪಡಿಸಿದ ನಾಗರೀಕರು, ಸಮಸ್ಯೆ ಬಗೆಹರಿಸಲು ಒತ್ತಾಯಿಸಿದ್ದರು.
ಪಾಲಿಕೆ ಸದಸ್ಯರೂ ನೀರು ಸರಬರಾಜು ಅಧಿಕಾರಿಗಳ ವಿರುದ್ಧ ಹರಿಹಾಯ್ದು, ಶುದ್ಧ ಕುಡಿಯುವ ನೀರು ಸರಬರಾಜಿಗೆ ಒತ್ತಾಯ ಮಾಡಿದ್ದರು. ನಮ್ಮ ವಾರ್ಡಿನ ಹಲವಾರು ಮನೆಗಳಿಗೂ ಕಲುಶಿತ ನೀರು ಸರಬರಾಜಾಗುತ್ತಿತ್ತು, ಹಲವಾರು ಜನ ಈ ಬಗ್ಗೆ ಕಂಪ್ಲೇಂಟ್ ಮಾಡಿದ್ದರು. ಕಲುಶಿತ ನೀರು ಸರಬರಾಜಾಗಲು ಕಾರಣವೇನು ಎಂದು ಪತ್ತೆ ಮಾಡಿ, ಸಮಸ್ಯೆ ಬಗೆಹರಿಸಿ ಎಂದು ತಾವು ಅಧಿಕಾರಿಗಳನ್ನು ಒತ್ತಾಯ ಮಾಡಿದ್ದು, ಅವರು ವಿಳಂಬ ಮಾಡಿದರು ಎಂದು 15ನೇ ವಾರ್ಡ್ ನಗರ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ಕುಡಿಯುವ ನೀರಿನಂತಹ ವಿಚಾರದಲ್ಲಿ ನಿರ್ಲಕ್ಷ ಮಾಡಬಾರದು ಎಂದರು.
ಒತ್ತಡ ಹೆಚ್ಚಾದಾಗ, ಶುದ್ಧ ಕುಡಿಯುವ ನೀರು ಎಲ್ಲಿ ಕಲುಶಿತಗೊಳ್ಳುತ್ತಿದೆ ಎಂದು ಅಧಿಕಾರಿಗಳು ಮೂಲ ಹುಡುಕಲು ಹೊರಟರು. ಪಿ.ಎನ್.ಪಾಳ್ಯದ ಹೇಮಾವತಿ ನೀರು ಶುದ್ಧೀಕರಣ ಘಟಕದ ತೊಟ್ಟಿಗಳನ್ನು ಇತ್ತೀಚೆಗೆ ಸ್ವಚ್ಛಗೊಳಿಸಲಾಗಿತ್ತು. ಸ್ವಚ್ಚ ಮಾಡಿದಾಗಿನ ಗಲೀಜು ನೀರು ಮನೆಗಳಿಗೆ ಪೂರೈಕೆಯಾಗಿದೆಯೆ ಎಂಬ ಅನುಮಾನ ಅಧಿಕಾರಿಗಳಿಗೆ ಬಂದಿತ್ತು. ಇಲ್ಲವೇ, ಇತ್ತೀಚೆಗೆ ಸುರಿದ ಮಳೆ ನೀರಿನಿಂದ ಮಣ್ಣು ನೀರಿನೊಂದಿಗೆ ಸೇರಿಕೊಂಡಿತೆ ಎಂಬ ಪ್ರಶ್ನೆಯೂ ಮೂಡಿತ್ತು. ಆದರೆ ಇದಾವುದೂ ಅಲ್ಲ ಎಂಬ ತೀಮಾನಕ್ಕೆ ಬಂದ ಅಧಿಕಾರಿಗಳು, ನೀರು ಸರಬರಾಜು ಪೈಪ್‍ಲೈನ್ ಸಾಗಿಬಂದಿರುವ ಮಾರ್ಗ ಹುಡುಕಿ ಹೊರಟಾಗ ಗಾರ್ಡನ್ ರಸ್ತೆಯಲ್ಲಿ ಸಮಸ್ಯೆ ಕಂಡು ಬಂದಿತು.
ಇತ್ತೀಚೆಗೆ ಗಾರ್ಡನ್ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ಮಾಡಲಾಗಿತ್ತು. ಈ ವೇಳೆ ಹಳ್ಳ ತೆಗೆಯುವ ಭರದಲ್ಲಿ ಅಲ್ಲಿದ್ದ ಕುಡಿಯುವ ನೀರಿನ ದೊಡ್ಡ ಪೈಪ್ ಒಡೆದುಹೋಗಿತ್ತು, ಆಗ ಅಲ್ಲಿ ವೆಲ್ಡಿಂಗ್ ಮಾಡಿ ಡ್ಯಾಮೇಜ್ ಸರಿಪಡಿಸಿ, ಮಣ್ಣು ತುಂಬಿ ಮುಚ್ಚಲಾಗಿತ್ತು. ಆದರೆ, ಹರಿಯುವ ನೀರಿನ ಒತ್ತಡ ಹೆಚ್ಚಾಗಿ, ಪೈಪಿಗೆ ಮಾಡಿದ್ದ ವೆಲ್ಡಿಂಗ್ ತೆರೆದುಕೊಂಡು ನೀರು ಸೋರಿಕೆಯಾಗಿತ್ತು. ಮಣ್ಣು ನೀರಿನೊಡನೆ ಸೇರಿ ಹೊಂಡು ನೀರು ಸರಬರಾಜಾಗಿತ್ತು. ಈಗ ಈ ಮಾರ್ಗದ ನೀರನ್ನು ಸ್ಥಗಿತಗೊಳಿಸಿ, ಪರ್ಯಾಯ ಮಾರ್ಗದಿಂದ ಸಂಬಂಧಿಸಿದ ಬಡಾವಣೆಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ ಎಂದು ನಗರ ಪಾಲಿಕೆ ಇಂಜಿನಿಯರ್ ವಸಂತ ಕುಮಾರ್ ಹೇಳಿದರು.
ಈಗ ಪೂರೈಕೆ ಮಾಡಲಾಗುತ್ತಿರುವ ನೀರಿನ ಮಾದರಿಯನ್ನು ಜಿಲ್ಲಾ ಸರ್ವೆಲೆನ್ಸ್ ಇಲಾಖೆ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು, ಕುಡಿಯಲು ನೀರು ಯೋಗ್ಯ ಎಂದು ತಜ್ಞರು ವರದಿ ನೀಡಿದ್ದಾರೆ, ನಾಗರೀಕರು ಆತಂಕಪಡಬೇಕಾಗಿಲ್ಲ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








