ನಕಲಿ ವೈದ್ಯನಿಂದ ಚಿಕಿತ್ಸೆಯಿಂದ ಕಾಲು ಕಳೆದುಕೊಳ್ಳುವ ಸ್ಥಿತಿಯಲ್ಲಿ ರೋಗಿ

ವೈ.ಎನ್.ಹೊಸಕೋಟೆ :

      ಗ್ರಾಮದ ನಕಲಿ ವೈದ್ಯ ಬುಡ್ಡಾರೆಡ್ಡಿಹಳ್ಳಿ ವೆಂಕಟೇಶ್ ಚುಚ್ಚುಮದ್ದು ನೀಡಿ ಚಿಕಿತ್ಸೆ ಮಾಡಿದ್ದರಿಂದ ರೋಗಿಯೊಬ್ಬರು ಕಾಲು ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ ಎಂದು ರಾಷ್ಟ್ರೀಯ ಕಿಸಾನ್ ಸಂಘದ ಅಧ್ಯಕ್ಷ ಗಂಗಾಧರ ಆರೋಪಿಸಿದ್ದಾರೆ.

     ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಲ್ಯಾಬ್ ಟಿಕ್ನಿಷಿಯನ್ ಕೇಂದ್ರ ತೆರೆದುಕೊಂಡಿರುವ ಬುಡ್ಡಾರೆಡ್ಡಿಹಳ್ಳಿ ವೆಂಕಟೇಶ್ ಅಕ್ರಮವಾಗಿ ರೋಗಿಗಳಿಗೆ ಚುಚ್ಚುಮದ್ದು ನೀಡುವ, ದೇಹಕ್ಕೆ ಬಾಟಲಿಗಳಿಂದ ಗ್ಲೂಕೋಸ್ ಏರಿಸುವ, ಮಾತ್ರೆಗಳನ್ನು ಬರೆದುಕೊಡುವ ಕೆಲಸ ಮಾಡುತ್ತಿದ್ದಾನೆ. ತಾನೂ ಒಬ್ಬ ವೈದ್ಯನಂತೆ ವಿವಿಧ ಕಾಯಿಲೆಗಳಿಗೆ ಶುಶ್ರೂμÉ ನೀಡುತ್ತಾ ನೂರಾರು ರೂಪಾಯಿಗಳನ್ನು ಪಡೆಯುತ್ತಿದ್ದಾನೆ ಎಂಬ ದೂರುಗಳು ಎಲ್ಲೆಡೆ ವ್ಯಾಪಿಸಿದ್ದವು.

     ಈ ಬಗ್ಗೆ ಅರೋಗ್ಯ ಇಲಾಖೆ ಮತ್ತು ಉಪವಿಭಾಧಿಕಾರಿಗಳಿಗೆ ಸಾರ್ವಜನಿಕರಿಂದ ಮಾಹಿತಿ ನೀಡಲಾಗಿತ್ತು. ಅದರನ್ವಯ ಮಧುಗಿರಿ ಉಪವಿಭಾಗಾಧಿಕಾರಿಗಳು ಗ್ರಾಮಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಪರಿಶೀಲನೆ ನಡೆಸಿ ಅತನ ಅಂಗಡಿಗೆ ಬೀಗ ಮುದ್ರೆ ಹಾಕಿಸಿದ್ದರು. ಕೊರೋನಾ ಲಾಕ್ ಡೌನ್ ಮುಗಿಯುವವರೆಗೆ ತೆರೆಯದಂತೆ ಸೂಚಿಸಿದ್ದರು. ಅದಾಗ್ಯೂ ವೆಂಕಟೇಶ್ ಸರ್ಕಾರಿ ಅಧಿಕಾರಿಗಳ ಮಾತನ್ನು ಲೆಕ್ಕಿಸದೆ ಲ್ಯಾಬಿನ ಪಕ್ಕದ ಮತ್ತೊಂದು ಕೊಠಡಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ಮುಂದುವರೆಸುತ್ತಿದ್ದಾನೆ. ರೋಗಿಗಳಿಗೆ ರಾಜಾರೋಷವಾಗಿ ಚಿಕಿತ್ಸೆ ನೀಡುವ ಮೂಲಕ ಹಣ ಮಾಡುವ ದಂದೆ ನಡೆಸುತ್ತಿದ್ದಾನೆ. ಈ ಬಗ್ಗೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಅದರೂ ಯಾವುದೇ ಪ್ರಯೋಜನ ಆಗಿಲ್ಲ.

   ಇಂತಹ ಸಂದರ್ಭದಲ್ಲಿ ಸೋಮವಾರದಂದು ಜಾಲೋಡು ಗ್ರಾಮದ ಪಾತಣ್ಣನವರು ಕಾಲಿನ ಚಿಕಿತ್ಸೆಗೆಂದು ಲ್ಯಾಬ್ ತಂತ್ರಜ್ಞ ವೆಂಕಟೇಶ್ ಬಳಿ ಬಂದಿದ್ದಾರೆ. ಆತ ಚುಚ್ಚುಮದ್ದು ನೀಡಿ ಮಾತ್ರೆಗಳನ್ನು ಬರೆದುಕೊಟ್ಟು ಅವುಗಳನ್ನು ತರಿಸಿ ತೋರಿಸಿಕೊಟ್ಟು 2 ದಿನ ನುಂಗುವಂತೆ ಹೇಳಿ ಕಳುಹಿಸಿದ್ದಾರೆ. ಅತನಿಂದ ಚಿಕಿತ್ಸೆ ಪಡೆದು ಹಳ್ಳಿಗೆ ಬಂದ ಸ್ವಲ್ಪ ಸಮಯದಲ್ಲೇ ಕಾಲು ಬಾವು ಬಂದು, ಅಲ್ಲಲ್ಲಿ ಬೊಬ್ಬೆಗಳು ಮೂಡಿವೆ.

    ಓಡಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಗಮನಿಸಿದ ಪಾತಣ್ಣನ ಮಗ. ತಕ್ಷಣವೇ ತಾಲ್ಲೂಕು ಕೇಂದ್ರಕ್ಕೆ ಹೊರಟುಬಂದು ಮತ್ತೊಂದು ಆಸ್ಪತ್ರೆಯಲ್ಲಿ ತಂದೆಗೆ ಚಿಕಿತ್ಸೆ ಕೊಡಿಸಿದ್ದಾರೆ. ಅದಾಗ್ಯೂ ಕಾಲಿನ ಬಾವು ಕಡಿಮೆ ಆಗಿಲ್ಲ. ಇಂತಹ ಅನಾಹುತಕ್ಕೆ ನಕಲಿ ವೈದ್ಯ ವೆಂಕಟೇಶನ ನಿರ್ಲಕ್ಷ ಮತ್ತು ಅವೈಜ್ಞಾನಿಕವಾದ ಚಿಕಿತ್ಸೆಯೇ ಕಾರಣವಾಗಿದೆ ಎಂದು ತಿಳಿದು, ಈ ಸಂಬಂದ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ವಿಷಯ ತಿಳಿದ ನಕಲಿ ವೈದ್ಯ ತಕ್ಷಣ ಠಾಣೆಯ ಬಳಿ ಬಂದು ನಡೆದಿರುವ ಅಚಾತುರ್ಯಕ್ಕೆ ಕ್ಷಮೆ ಕೇಳಿದ್ದಾನೆ.

    ಜೊತೆಗೆ ಕಾಲಿನ ಸಮಸ್ಯೆ ನಿವಾರಣೆಯಾಗುವವರೆಗೆ ತಾನೇ ಮುಂದೆ ನಿಂತು ಚಿಕಿತ್ಸೆ ಕೊಡಿಸಿಕೊಡುವುದಾಗಿ ರೋಗಿಯ ಕುಟುಂಬಕ್ಕೆ ಭರವಸೆ ನೀಡಿದ್ದಾನೆ. ಅದರಂತೆ ಪಾತಣ್ಣನನ್ನು ಬುಧವಾರದಂದು ಚಿಕಿತ್ಸೆಗೆಂದು ಜಿಲ್ಲಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿಸುತ್ತಿದ್ದಾನೆ.ಈಗಲಾದರೂ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ನಕಲಿ ವೈದ್ಯ ವೆಂಕಟೇಶನ ಮೇಲೆ ಸೂಕ್ತ ಕ್ರಮ ಕೈಗೊಂಡು ಗ್ರಾಮದಲ್ಲಿರುವ ನಕಲಿ ವೈದ್ಯರ ಹಾವಳಿಯನ್ನು ತಪ್ಪಿಸಬೇಕು ಹಾಗೂ ಮುಗ್ದ ರೋಗಿಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link