ಕೆಲಸದ ಅವಧಿ ವಿಸ್ತರಣೆ : ಸರ್ಕಾರದ ನೀತಿಗೆ ಕಾರ್ಮಿಕ ಸಂಘಟನೆ ಗಳ ಖಂಡನೆ…!

ಬೆಂಗಳೂರು

      ಕಾರ್ಮಿಕರು 10 ಗಂಟೆ ಕಾಲ ಕೆಲಸ ಮಾಡಲು ಅನುವು ಮಾಡಿಕೊಡುವ ಕಾರ್ಮಿಕ ಕಾಯ್ದೆಗೆ ತಿದ್ದುಪಡಿಗೆ ಸುಗ್ರೀವಾಜ್ಞೆ ಬದಲಾಗಿ ಸರ್ಕಾರ ಅಧಿಸೂಚನೆ ಹೊರಡಿಸಿರುವುದನ್ನು ಕೈಗಾರಿಕಾ ಸಂಸ್ಥೆಗಳು ಸ್ವಾಗತಿಸಿದರೆ, ಸರ್ಕಾರದ ನೀತಿಗೆ ಕಾರ್ಮಿಕ ಸಂಘಟನೆಗಳು ಕಿಡಿಕಾರಿವೆ.

      ಅನ್ಯ ರಾಜ್ಯಗಳಂತೆ ಕರ್ನಾಟಕದಲ್ಲಿಯೂ ಕಾರ್ಮಿಕ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಬೇಕೆಂದು ಸರ್ಕಾರ ಕೆಲವು ದಿನಗಳಿಂದ ಪ್ರಯತ್ನಿಸಿತ್ತು. ಆದರೆ ಕಾರ್ಮಿಕ ಕಾಯಿದೆಗೆ ತಿದ್ದುಪಡಿ ತಂದು ಕಾರ್ಮಿಕರ ಕೆಲಸದ ಅವಧಿಯನ್ನು 8 ರಿಂದ 10 ತಾಸಿಗೆ ಏರಿಕೆ ಮಾಡಲು ನಿರ್ಧರಿಸಿತ್ತು. ಆದರೆ ಸುಗ್ರೀವಾಜ್ಞೆ ತರಲು ಕಾರ್ಮಿಕ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆ ಹೋರಾಟದ ಮೂಲಕವೇ ಗುರುತಿಸಿಕೊಂಡು ಬಿಜೆಪಿಯಲ್ಲಿ ರಾಜಕೀಯ ನಾಯಕನಾಗಿ ಬೆಳೆದಿರುವ ಮೇಲ್ಮನೆ ಸದಸ್ಯ ಆಯನೂರು ಮಂಜುನಾಥ್ ಸೇರಿದಂತೆ ಮತ್ತಿತರರು ವಿರೋಧ ವ್ಯಕ್ತಪಡಿಸಿದ್ದರು.

      ಹೀಗಾಗಿ ಕಾರ್ಮಿಕ ಕಾಯಿದೆ ತಿದ್ದುಪಡಿ ವಿಚಾರದಲ್ಲಿ ಕಾದುನೋಡುವ ತಂತ್ರಕ್ಕೆ ಜಾರಿದ್ದ ಸರ್ಕಾರವೀಗ ಸುಗ್ರೀವಾಜ್ಞೆ ಬದಲಿಗೆ ಅಧಿಸೂಚನೆ ಮೂಲಕ ಆದೇಶ ಹೊರಡಿಸಿದೆ.ಇನ್ನು ಮುಂದೆ ಕೈಗಾರಿಕೆಗಳಲ್ಲಿ 10 ಗಂಟೆ ಕೆಲಸ ಮಾಡುವುದು ಕಡ್ಡಾಯ. 10 ಗಂಟೆ ದುಡಿಮೆಗೆ 8 ಗಂಟೆ ವೇತನ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ವಾರಕ್ಕೆ 60 ಗಂಟೆ ದುಡಿಮೆ ಮಾಡುವುದು ಕಡ್ಡಾಯವಾಗಿದ್ದು ಕೈಗಾರಿಕೆಗಳು, ಕಾರ್ಮಿಕರು, ಕೈಗಾರಿಕೆ ಮಾಲೀಕರು ಎಲ್ಲರ ಹಿತ ಮುಖ್ಯ ಎಂದಿದೆ.

      8 ತಾಸು ಇದ್ದ ಕಾರ್ಮಿಕರ ಕೆಲಸದ ಅವಧಿಯನ್ನು ಸರ್ಕಾರ ಇದೀಗ 10 ತಾಸಿಗೆ ಏರಿಕೆ ಮಾಡಿದೆ. ಆಗಸ್ಟ್ 21ರವರೆಗೆ ಈ ಆದೇಶ ಜಾರಿಯಲ್ಲಿ ಇರುತ್ತದೆ ಎಂದು ಸರ್ಕಾರ ಹೇಳಿದೆ. ಈ ಮೂಲಕ ಮುಂದಿನ 2 ತಿಂಗಳ ಕಾಲ ಪ್ರತಿ ದಿನ ಕಾರ್ಮಿಕರು 2 ತಾಸು ಹೆಚ್ಚಾಗಿ ದುಡಿಯಬೇಕಿದೆ. ಸರ್ಕಾರಿ ಅಧಿಕೃತ ಆದೇಶವನ್ನು ಧೃಡಪಡಿಸಿದ ಸಚಿವ ಶಿವರಾಮ್ ಹೆಬ್ಬಾರ್, ಕೆಲವೇ ದಿನಗಳಲ್ಲಿ ಕಾರ್ಮಿಕ ಕಾಯ್ದೆ ಸುಗ್ರೀವಾಜ್ಞೆ ಜಾರಿಯಾಗಲಿದೆ. ಸಚಿವ ಸಂಪುಟದಲ್ಲಿ ಈಗಾಗಲೇ ಸಾಕಷ್ಟು ಬಾರಿ ಚಚೆಯಾಗಿದೆ.ಉತ್ತರ ಪ್ರದೇಶ, ಪಂಜಾಬ್ ಹಾಗೂ 6 ರಾಜ್ಯಗಳಲ್ಲಿ ಈಗಾಗಲೇ ಕಾಯ್ದೆ ಜಾರಿಯಾಗಿದೆ.ರಾಜ್ಯದಲ್ಲಿ ಎಲ್ಲರ ಹಿತ ದೃಷ್ಟಿಯಿಂದ ಕಾಯ್ದೆ ಜಾರಿಗೆ ತರಲಾಗಿದೆ. ಇದರಲ್ಲಿ ಯಾರನ್ನೂ ಓಲೈಸುವ ಅಥವಾ ಮೋಸಗೊಳಿಸುವ ಪ್ರಯತ್ನವಿಲ್ಲ ಎಂದಿದ್ದಾರೆ.

     ಆದರೆ ಸರ್ಕಾರದ ಈ ಆದೇಶಕ್ಕೆ ಕಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಗಾರ್ಮೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಜಯರಾಮ್ ಮಾತನಾಡಿ, ಸರ್ಕಾರದ ಈ ಆದೇಶ ಕಾರ್ಮಿಕ ವಿರೋಧಿ ನೀತಿಯಾಗಿದೆ. ಎರಡು ತಾಸು ಹೆಚ್ಚಿಗೆ ಕೆಲಸ ಮಾಡುವುದು ಮಹಿಳಾ ಕಾರ್ಮಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಈಗ ಎರಡು ತಾಸು ಹೆಚ್ಚಿಗೆ ಅವಧಿ ವಿಸ್ತರಣೆ ಮಾಡಿರುವುದರಿಂದ ಕಾರ್ಮಿಕರು ಬೆಳಿಗ್ಗೆ ಹಾಗೂ ಸಂಜೆ ಹೆಚ್ಚಿಗೆ ಒಂದೊಂದು ಗಂಟೆ ಬರಲು ಹೋಗಲು ವ್ಯಯಿಸಬೇಕಾಗುವುದು. ಇದು ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಖಂಡಿತ. ಸರ್ಕಾರದ ಈ ಆದೇಶ ಕಾರ್ಮಿಕ ವಿರೋಧಿಯಾಗಿದ್ದು ತಾವು ಖಂಡಿಸುವುದಾಗಿ ಹೇಳಿದರು.

     ಸಿಐಟಿಯು ಅಧ್ಯಕ್ಷರಾದ ಮೀನಾಕ್ಷಿ ಸುಂದರಂ ಮಾತನಾಡಿ, ಸರ್ಕಾರದ ಈ ಕಾಯಿದೆ ತಿದ್ದುಪಡಿ ಕಾರ್ಮಿಕ ವಿರೋಧಿಯಾಗಿದೆ. ಇದು ಕೈಗಾರಿಕೆಗಳಿಗೆ ಅನುಕೂಲ ಕಲ್ಪಿಸಲೆಂದೇ ತಿದ್ದುಪಡಿ ತರಲಾಗಿದೆ. ಸರ್ಕಾರದ ನಡೆ ಖಂಡನೀಯ ಎಂದರು.ಇನ್ನು ಕೆಎಸ್‍ಆರ್‍ಟಿಸಿ, ಸ್ಟಾಫ್ ಮತ್ತು ವರ್ಕರ್ಸ್ ಫೇಡರೇಷನ್‍ಅಧ್ಯಕ್ಷ ಅನಂತ ಸುಬ್ಬರಾವ್ ಸಹ ಆಕ್ರೋಶ ವ್ಯಕ್ತಪಡಿಸಿ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

     ಈ ತಿದ್ದುಪಡಿಗೆ ಎಫ್‍ಕೆಸಿಸಿಐ ಸಂತಸ ವ್ಯಕ್ತಪಡಿಸಿ ಸರ್ಕಾರದ ತಿರ್ಮಾನವನ್ನು ಸ್ವಾಗತಿಸಿದೆ. ಎಫ್‍ಕೆಸಿಸಿಐ ಅಧ್ಯಕ್ಷ ಸಿ.ಆರ್. ಜನಾರ್ದನ್, ಮಾತನಾಡಿ, ಕಾಯಿದೆ ತಿದ್ದುಪಡಿಯಿಂದ ಕೈಗಾರಿಕೆಗಳ ಮಾಲೀಕರಿಗೆ ಅನುಕೂಲವಾಗಲಿದೆ. ಕೊರೊನಾದಿಂದ ಆರ್ಥಿಕ ಚಟುವಟಿಕೆ ಕುಂಠಿತಗೊಂಡಿದೆ. ನಾವು ಕೂಲಿರಹಿತವಾಗಿ ಕೆಲಸದ ಅವಧಿಯನ್ನು 8 ರಿಂದ 9 ಕ್ಕೆ ಏರಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದೆವು. ಸರ್ಕಾರ ಈಗ ಎರಡು ತಾಸು ಹೆಚ್ಚಿಸಿ ಕೂಲಿಯನ್ನು ಪಾವತಿಸಲು ಹೇಳಿದೆ. ಕೈಗಾರಿಕೆಗಳು ಅಭಿವೃದ್ಧಿಯಾದರೆ ಕಾರ್ಮಿಕರಿಗೂ ಇದು ಅನುಕೂಲವಾಗಲಿದೆ. ಕೈಗಾರಿಕೆಗಳು ಉಳಿದರೆ ಕಾರ್ಮಿಕರು ಉಳಿಯುತ್ತಾರೆ. ಆಗಸ್ಟ್ 31ರವರೆಗೆ ಆದೇಶ ಜಾರಿಯಲ್ಲಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link