ಗುಬ್ಬಿ
ಬೇಸಿಗೆ ಬಂತೆಂದರೆ ಪಟ್ಟಣ ಸೇರಿದಂತೆ ಗ್ರಾಮೀಣ ಜನತೆ ವಿದ್ಯುತ್‍ಗಾಗಿ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಗ್ರಾಮೀಣ ಭಾಗದ ರೈತರು ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ನೀರು ಹರಿಸಲು ವಿದ್ಯುತ್ ಅವಶ್ಯಕತೆ ಇದ್ದು ಇನ್ನು ಪಟ್ಟಣ ವಾಸಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಿಕೊಳ್ಳಲು ಮತ್ತು ಮನೆಬಳಕೆಗಾಗಿ ಸಮರ್ಪಕ ವಿದ್ಯುತ್‍ಗಾಗಿ ಪರಿತಪಿಸುವಂತಾಗಿದೆ. ಬೆಸ್ಕಾಂ ಇಲಾಖೆ ಮನಸೊ ಇಚ್ಚೆ ವಿದ್ಯುತ್ ವ್ಯತ್ಯಯ ಮಾಡುತ್ತಿರುವ ಪರಿಣಾಮ ಪಟ್ಟಣ ಸೇರಿದಂತೆ ಇಡೀ ತಾಲ್ಲೂಕಿನ ಜನತೆ ಹಿಡಿಶಾಪ ಹಾಕುವಂತಾಗಿದೆ.
ಸ್ವಲ್ಪ ಮಳೆ ಬಂದರೆ ಸಾಕು ವಿದ್ಯುತ್ ಇದ್ದಕ್ಕಿದ್ದಂತೆ ಮಾಯವಾಗುತ್ತದೆ. ಅಲ್ಲದೆ ಮಧ್ಯಾಹ್ನದ ವೇಳೆ ಯಾವುದೆ ಮುನ್ಸೂಚನೆಯನ್ನು ನೀಡದೆ ಮನಬಂದಂತೆ ಗಂಟೆಗಟ್ಟಲೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಪಟ್ಟಣದ ಸಾರ್ವನಿಕರು ವಿದ್ಯುತ್‍ಗಾಗಿ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸಮರ್ಪಕವಾಗಿ ಉತ್ತರ ನೀಡುತ್ತಿಲ್ಲ. ರೈತರ ಬೆಳೆಗಳಿಗೆ ಬೇಸಿಗೆ ಅವಧಿಯಲ್ಲಿ ನೀರಿನ ಅವಶ್ಯಕತೆಯಿದ್ದು ಸಮರ್ಪಕವಾಗಿ ವಿದ್ಯುತ್ ನೀಡದ ಪರಿಣಾಮ ತೀವ್ರ ಸಮಸ್ಯೆಯಾಗಿದೆ.
ಜತೆಗೆ ಸುಟ್ಟ ಪರಿವರ್ತಕಗಳ ಬದಲಾವಣೆಗೆ ಸಲ್ಲದ ಕಾರಣ ನೀಡುತ್ತಾ ರೈತರ ಬದುಕಿನಲ್ಲಿ ಆಟವಾಡುವ ಬೆಸ್ಕಾಂ ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕಚೇರಿಯಲ್ಲೂ ಸಿಗುತ್ತಿಲ್ಲ, ಫೋನ್ ಕರೆಗೂ ಕನೆಕ್ಟ್ ಆಗುತ್ತಿಲ್ಲ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.ಸುಡು ಬಿಸಿಲಿನ ಈ ಬೇಸಿಗೆಯಲ್ಲಿ ಅಂತರ್ಜಲ ತಳಮುಟ್ಟಿದೆ. ಕೊಳವೆಬಾವಿಗಳಲ್ಲಿ ನೀರಿಲ್ಲದೇ ಪರದಾಡುವ ರೈತರು ಕೆಲ ಬೋರ್‍ಗಳಲ್ಲಿರುವ ಕೊಂಚ ನೀರುಣಿಸಿ ತಮ್ಮ ತೋಟವನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಮಿತಿ ಇಲ್ಲದ ಪವರ್ ಕಟ್ ರೈತರನ್ನು ಕಂಗೆಡಿಸಿದೆ. ತ್ರೀಫೇಸ್ ವಿದ್ಯುತ್ ಸರಬರಾಜು ಮಾಡುವ ಭರವಸೆ ಸರ್ಕಾರ ನೀಡಿದರೆ ಇತ್ತ ಸುಟ್ಟ ಟಿಸಿಗಳ ಬದಲಾವಣೆಗೆ ತಿಂಗಳುಗಟ್ಟಲೆ ಅಲೆದಾಡುವ ಪ್ರಸಂಗ ಬಂದೊದಗಿದೆ.
ಪಟ್ಟಣದ ಕೆಪಿಟಿಸಿಎಲ್ ಸ್ಟೇಷನ್‍ನಲ್ಲಿ ಸಿಡಿಲಿಗೆ ಸುಟ್ಟ 10 ಎಂವಿ ಸಾಮಥ್ರ್ಯದ ಶಕ್ತಿ ಪರಿವರ್ತಕ ಬದಲಿಗೆ ಹೊಸದಾಗಿ 20 ಎಂವಿ ಸಾಮಥ್ರ್ಯದ ಪರಿವರ್ತಕ ಅಳವಡಿಕೆಯಾಗಿ ವರ್ಷ ಕಳೆದರೂ ಪಟ್ಟಣಕ್ಕೆ ವಿದ್ಯುತ್ ಸರಬರಾಜು ಮಾಡುವಲ್ಲಿ ಬೆಸ್ಕಾಂ ನಿರ್ಲಕ್ಷ್ಯ ತಾಳಿರುವುದು ನಾಗರಿಕರಲ್ಲಿ ಆಕ್ರೋಶ ಉಂಟು ಮಾಡಿದೆ. ಸುಮಾರು 20 ಸಾವಿರ ಜನಸಂಖ್ಯೆಯ ಗುಬ್ಬಿ ಪಟ್ಟಣಕ್ಕೆ ಅವಶ್ಯವಿರುವಷ್ಟು ವಿದ್ಯುತ್ ಸರಬರಾಜು ಮಾಡಲು ಸೂಕ್ತ ಕ್ರಮ ಕೈಗೊಂಡಿಲ್ಲ. ಬೇಸಿಗೆ ಕಾಲ ಅನಿಯಮಿತ ಲೋಡ್ ಶೆಡ್ಡಿಂಗ್ ನಡೆದಿದೆ. ಈಚೆಗೆ ಕರೆಂಟ್ ತೆಗೆಯುವ ಸಮಯಕ್ಕಿಂತ ಸಾರ್ವಜನಿಕರ ಬಳಕೆಗೆ ಸಿಕ್ಕ ಸಮಯವಷ್ಟೇ ಲೆಕ್ಕ ಹಾಕಬೇಕಿದೆ. ಪ್ರಶ್ನೆ ಮಾಡಿದರೆ ಇಲಾಖೆಯದು ಮಾತ್ರ ಸಮಸ್ಯೆ ಇದೆ ಎಂಬ ಸಿಂಪಲ್ ಉತ್ತರ.
ಪಟ್ಟಣಕ್ಕೆ ಪ್ರತ್ಯೇಕ ಫೀಡರ್ ಅಳವಡಿಕೆಗೆ ಆಗ್ರಹವಿದ್ದರೂ ಈವರೆವಿಗೂ ಈ ಬಗ್ಗೆ ಗಮನಹರಿಸುವ ಗೋಜಿಗೆ ಹೋಗದ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಪಟ್ಟಣದ ಸುತ್ತಲಿನ ಹೊಸಹಳ್ಳಿ, ಸಿಂಗೋನಹಳ್ಳಿ, ಹೇರೂರು, ಅಮ್ಮನಘಟ್ಟ ಸೇರಿದಂತೆ ಹಲವು ಗ್ರಾಮಗಳನ್ನೊಳಗೊಂಡ 19 ಫೀಡರ್‍ಗಳು ಗುಬ್ಬಿ ಪಟ್ಟಣದ ಉಪಸ್ಥಾವರಕ್ಕೆ ಸೇರಿಸಿ ವಿದ್ಯುತ್ ಖೋತಾಕ್ಕೆ ಕಾರಣವಾಗುತ್ತಿದ್ದಾರೆ. ಪಂಪ್‍ಸೆಟ್‍ಗಳ ಬಳಕೆಯ ಗ್ರಾಮಗಳಲ್ಲಿ ತೊಂದರೆ ಕಂಡರೆ ಸಮಸ್ಯೆ ಆಲಿಸಲು ಬೆಸ್ಕಾಂ ಸಿಬ್ಬಂದಿ ತೆರಳುವುದಿಲ್ಲ. ಓವರ್‍ಲೋಡ್ ಎಂಬ ಉತ್ತರ ಗುಬ್ಬಿ ಸ್ಥಾವರದಲ್ಲಿ ಮಾಮೂಲಿಯಾಗಿದೆ. ಈ ಸಮಸ್ಯೆಗೆ ಪಟ್ಟಣಕ್ಕೆ ಪ್ರತ್ಯೇಕ ಫೀಡರ್ ಅವಶ್ಯವಿದೆ. ಅಳವಡಿಕೆ ಆಗದಿದ್ದಲ್ಲಿ ಪಟ್ಟಣಕ್ಕೆ ವಿದ್ಯುತ್ ಕೊರತೆ ಸಮಸ್ಯೆ ಬಗೆಹರಿಯುವುದಿಲ್ಲ.
ಲಾಕ್‍ಡೌನ್ ಜಾರಿಯಾದ ನಂತರದಲ್ಲಿ ಕರೆಂಟ್ ಬಿಲ್ ಪಾವತಿಗೆ ವಿನಾಯತಿ ನೀಡಿದ ಬೆಸ್ಕಾಂ ಎರಡು ತಿಂಗಳ ದುಬಾರಿ ಬಿಲ್ ಒಟ್ಟಾಗಿ ನೀಡಿ ಶಾಕ್ ನೀಡಿದೆ. ಪ್ರತಿ ತಿಂಗಳ ಬಿಲ್ ಬರುವ ಅಂದಾಜಿನಲ್ಲೆ ಲೆಕ್ಕಾಚಾರ ಮಾಡಿದ್ದ ಶ್ರೀಸಾಮಾನ್ಯರು ಬೆಸ್ಕಾಂ ವಿದ್ಯುತ್ ಬಿಲ್‍ಗೆ ಹೌಹಾರಿದ್ದಾರೆ. ಫೆಬ್ರ್ರುವರಿ ಮಾಹೆಯ ಬಿಲ್ ಮೊತ್ತವನ್ನೇ ಮಾರ್ಚ್ ತಿಂಗಳಲ್ಲಿ ಪಾವತಿ ಮಾಡಲು ಗ್ರಾಹಕರಿಗೆ ತಿಳಿಸಿದ್ದ ಬೆಸ್ಕಾಂ ಎರಡು ತಿಂಗಳ ರೀಡಿಂಗ್ ಒಟ್ಟಾಗಿ ನಡೆಸಿದೆ.
ಎರಡು ತಿಂಗಳ ಒಟ್ಟು ವಿದ್ಯುತ್ ಯೂನಿಟ್ ಲೆಕ್ಕದಲ್ಲಿ ನೂರರ ಗಡಿ ದಾಟಿದ ಯೂನಿಟ್ ಬಿಲ್ ಸಾವಿರಾರು ರೂ.ಗಳಲ್ಲಿ ಮೊತ್ತ ಬಂದರೆ, ಮತ್ತೆ ಕೆಲವರ ಬಿಲ್ ಪಾವತಿ ಮಾಡಿದ್ದ ಫೆಬ್ರ್ರುವರಿ ಬಿಲ್ ಸೇರಿದಂತೆ ಅಧಿಕ ಮೊತ್ತ ಬಂದಿದೆ ಎಂಬ ಆರೋಪ ಗ್ರಾಹಕರು ಮಾಡಿದ್ದಾರೆ. ಆದರೆ ಯೂನಿಟ್‍ಗಳ ಬಳಕೆ ಲೆಕ್ಕ 30 ರ ಗಡಿದಾಟಿದಂತೆ ದ್ವಿಗುಣಗೊಳ್ಳುವ ಮೊತ್ತ ಆನ್‍ಲೈನ್ ಮೂಲಕವೆ ದುಬಾರಿ ಬಿಲ್ ಜನರ ಕೈ ಸೇರಿದೆ. ವಿನಾಯಿತಿ ಹೆಸರಿನಲ್ಲಿ ಗ್ರಾಹಕರಿಗೆ ಹೊರೆಯಾಗಿರುವುದಂತೂ ನಿಜ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ