ನವದೆಹಲಿ:
ಮಹಾಮಾರಿ ಕೊರೋನಾ ವೈರಸ್ ಅಟ್ಟಹಾಸ ಒಂದೇ ದಿನ 8,000 ಮಂದಿಯಲ್ಲಿ ಸೋಂಕು ಪತ್ತೆ ಪತ್ತೆಯಾಗಿದೆ. ಅಲ್ಲದೆ. 193 ಮಂದಿ ಬಲಿಯಾಗಿದ್ದಾರೆ. ಒಂದೇ ದಿನ ಇಷ್ಟೊಂದು ಸಂಖ್ಯೆಯಲ್ಲಿ ಜನರಲ್ಲಿ ಸೋಂಕು ಪತ್ತೆಯಾಗಿರುವುದು ಇದೇ ಮೊದಲಾಗಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1.82 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 8,380 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,82,143ಕ್ಕೆ ಏರಿಕೆಯಾಗಿದೆ. ಅಲ್ಲದೆ, ಒಂದೇ ದಿನ 193 ಮಂದಿ ಸಾವಿನೊಂದಿಗೆ ಸಾವನ್ನಪ್ಪಿದವರ ಸಂಖ್ಯೆ ಕೂಡ 5164ಕ್ಕೆ ತಲುಪಿದೆ. ಈ ಸಂಖ್ಯೆ ಇದೀಗ ತೀವ್ರ ಆತಂಕಕ್ಕೆ ಕಾರಣವಾಗಿವೆ.
ಕೊರೋನಾದಿಂದ ಅತೀ ಹೆಚ್ಚು ನಲುಗಿರುವ ಮಹಾರಾಷ್ಟ್ರದಲ್ಲಿ ವೈರಸ್ ಮತ್ತಷ್ಟು ಪ್ರತಾಪ ಮೆರೆದಿದೆ. ಒಂದೇ ದಿನ 2940 ಮಂದಿಯಲ್ಲಿ ಹೊಸದಾಗಿ ಸೋಂಕು ಕಂಡು ಬಂದಿದ್ದು, 99 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 65,168ಕ್ಕೆ ಹೆಚ್ಚಳವಾಗಿದ್ದರೆ, ಮೃತರ ಸಂಖ್ಯೆ 2197ಕ್ಕೇರಿದೆ.
ಗುಜರಾತಿನಲ್ಲಿ ಶನಿವಾರ 27 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಆ ರಾಜ್ಯದಲ್ಲಿ ಮೃತರ ಸಂಖ್ಯೆ 1000 ಗಡಿದಾಟಿ 10007ಕ್ಕೆ ಹೆಚ್ಚಳವಾಗಿದೆ. 412 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 16356ಕ್ಕೆ ಏರಿಕೆಯಾಗಿದೆ. ತಮಿಳುನಾಡಿನಲ್ಲಿ ದಾಖಲೆಯ 938 ಪ್ರಕರಣಗಳು ವರದಿಯಾಗಿದ್ದು, ಒಟ್ಟು ವೈರಸ್ ಪೀಡಿತರ ಸಂಖ್ಯೆ 21184ಕ್ಕೆ ಹೆಚ್ಚಳವಾಗಿದೆ.