ಬೆಂಗಳೂರು:
ನಗರದಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ಗನ್ ಸದ್ದು ಮಾಡಿದೆ. ಬಾಗಲೂರಿನಲ್ಲಿ ರೌಡಿ ಮುನಿಕೃಷ್ಣ ಅಲಿಯಾಸ್ ಕಪ್ಪೆ ಎಂಬವನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಅಮೃತಹಳ್ಳಿ ರೌಡಿಶೀಟರ್ ಆಗಿರುವ ಮುನಿರತ್ನ ಮದ್ಯ ನೀಡಿಲ್ಲ ಎಂದು ತನ್ನ ಗೆಳೆಯನಿಗೆ ಚಾಕುವಿನಿಂದ ಇರಿದಿದ್ದ. ಈ ಬಗ್ಗೆ ಅಮೃತಹಳ್ಳಿ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಇದರ ಜೊತೆಗೆ ಕೊಲೆ ಯತ್ನ, ಹಲ್ಲೆಯಂತಹ ಇತರೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಈತನ ವಿರುದ್ಧ ಅಮೃತಹಳ್ಳಿ, ಕೊಡಿಗೆಹಳ್ಳಿ, ಜ್ಞಾನಭಾರತಿ, ಚಿಕ್ಕಜಾಲ ಠಾಣೆಯಲ್ಲಿ 8ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.
ಇಂದು ಮುಂಜಾನೆ ಬಾಗಲೂರು ಠಾಣಾ ವ್ಯಾಪ್ತಿಯ ಮಿಟ್ಟಗಾನಹಳ್ಳಿ ಕಲ್ಲು ಕ್ವಾರೆ ಸಮೀಪ ಆರೋಪಿಗಳಿರುವ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಸುತ್ತ ಮುತ್ತ ಹುಡುಕುವಾಗ ಪಾಳು ಬಿದ್ದ ಮನೆಯಿಂದ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಆಗ ಇನ್ಸ್ಪೆಕ್ಟರ್ ಅರುಣ್ ಕುಮಾರ್, ಸರೆಂಡರ್ ಆಗಲು ಸೂಚಿಸಿ ಏರ್ ಫೈರ್ ಮಾಡಿದ್ದಾರೆ. ಈ ವೇಳೆ ಆತ ಪೊಲೀಸ್ ಪೇದೆಗೆ ಡ್ರ್ಯಾಗರ್ ನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ನಂತರ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಗುಂಡೇಟಿನಿಂದ ಗಾಯಗೊಂಡಿರುವ ರೌಡಿಶೀಟರ್ನನ್ನು ಯಲಹಂಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಯಿಂದ ಗಾಯಗೊಂಡಿರುವ ಹೆಡ್ಕಾನ್ಸ್ಟೆಬಲ್ ನಂದೀಶ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಕರೆದೊಯ್ಯಲಾಗಿದೆ.