ಕುಣಿಗಲ್
ದೇಶದಲ್ಲಿ ವೇಗವಾಗಿ ಹರಡುತ್ತಿರುವ ಕೊರೋನಾ ವೈರಾಣುವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಕಾಲದಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಂಡು ತಡೆಗಟ್ಟುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಬೆಂಗಳೂರು ಗ್ರಾ.ಮಾಂತರ ಸಂಸದ ಡಿ.ಕೆ.ಸುರೇಶ್ ಆರೋಪಿಸಿದರು.
ಅವರು ಪಟ್ಟಣದ ಸಂಸದರ ಕಚೇರಿಯಲ್ಲಿ ಕೊರೋನಾ ರೋಗ ತಡೆಗಟ್ಟಲು ಪೌಷ್ಟಿಕಾಂಶವುಳ್ಳ ರೋಗನಿರೋಧಕ ಮಾತ್ರೆಗಳನ್ನು ತಾಲ್ಲೂಕಿನ ಜನರಿಗೆ ಉಚಿತವಾಗಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದು ಕೋವಿಡ್ 19 ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಇದನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ಕ್ರಮಕೈಗೊಳ್ಳದೆ ಕೇವಲ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಹಾಕಿ, ಸ್ಯಾನಿಟರಿ ಹಾಕಿ ಎಂದರು. ಅಲ್ಲದೆ ಚಪ್ಪಾಳೆ ಹೊಡೆಯಿರಿ, ದೀಪಬೆಳಗುವುದು ಸೇರಿದಂತೆ ಅವೈಜ್ಞಾನಿಕವಾದ ಪ್ರಚಾರದಲ್ಲಿ ತೊಡಗಿದ್ದು ಬಿಟ್ಟರೆ ತಜ್ಞ ವೈದ್ಯರ ಸಲಹೆ ಸೂಚನೆಗಳನ್ನು ಕೇಂದ್ರದ ಪ್ರಧಾನಿಗಳಾಗಲಿ, ರಾಜ್ಯದ ಮುಖ್ಯಮಂತ್ರಿಗಳಾಗಲಿ ಕೈಗೊಳ್ಳುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಕೊರೋನಾ ಸೋಂಕು ರೋಗ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸೋಂಕನ್ನು ಮುಂಜಾಗ್ರತಾ ಕ್ರಮವಾಗಿ ತಡೆಗಟ್ಟುವ ಸಲುವಾಗಿ ಮನುಷ್ಯನ ದೇಹಕ್ಕೆ ಅಗತ್ಯವಾದ ವಿಟಮಿನ್‍ಗಳು, ಪ್ರೋಟಿನ್‍ಗಳು ದೊರೆತರೆ ಈ ಸೋಂಕು ತಗುಲಿದರೂ ಚೇತರಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು ಇದ್ದು, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ವಿಟಮಿನ್ ಸಿ, ಕ್ಯಾಲ್ಸಿಯಂ ಸಿಟ್ರಿಕ್, ಝಿಂಕ್, ಫೆರೋಸ್ ಪ್ಯೂಮರೇಟ್‍ಗಳನ್ನು ಒಳಗೊಂಡ ರೋಗ ನಿರೋಧಕ ಮಾತ್ರೆಗಳನ್ನು ದೇಶದಲ್ಲಿಯೇ ಮೊದಲ ಬಾರಿಗೆ ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದಲೆ ಸುಮಾರು 60 ಸಾವಿರ ಕುಟುಂಬಗಳಿಗೆ 2 ಲಕ್ಷ ಮಾತ್ರೆಗಳನ್ನು ಉಚಿತವಾಗಿ ಪ್ರತಿ ಮನೆಮನೆಗೂ ಹಂಚುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ತಜ್ಞವೈದ್ಯರ ಸಲಹೆ ಸೂಚನೆಗಳ ಮೇರೆಗೆ ತಯಾರು ಮಾಡಿದ ಮಾತ್ರೆಗಳನ್ನು ಸ್ವತಃ ನಾವುಗಳು ಬಳಸುತ್ತಿದ್ದು, ಇದನ್ನು 18 ವರ್ಷದ ಮೇಲ್ಪಟ್ಟ ಜನರಿಗೆ ನೀಡಲಾಗುತ್ತಿದೆ. ಇದರಿಂದ ಯಾವುದೇ ಅಡ್ಡಪರಿಣಾಮ ಇರುವುದಿಲ್ಲ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊರೋನಾ ವೈರಾಣು ತಡೆಯಲು ಯಾವುದೆ ಸಮರ್ಪಕ ಪೂರ್ವ ಯೋಜನೆಗಳನ್ನು ಮಾಡದೇ ಇನ್ನೂ ಗೊಂದಲದಲ್ಲಿದ್ದು ಶಾಲಾ ಕಾಲೇಜು ಪ್ರಾರಂಭಿಸುವ ಬಗ್ಗೆ, ಕಾರ್ಮಿಕ ನೀತಿ ಜಾರಿ ತರುವ ಬಗ್ಗೆ, ಕಾರ್ಖಾನೆಗಳನ್ನು ಪ್ರಾರಂಭಿಸುವ ಬಗ್ಗೆ ಸೇರಿದಂತೆ ಅಂತಾರಾಜ್ಯ ಹಾಗೂ ಹೊರದೇಶದಿಂದ ಬರುವ ಪ್ರಯಾಣಿಕರನ್ನು ಸರಿಯಾದ ಸಮಯಕ್ಕೆ ಸಮರ್ಪಕ ನೀತಿ ಜಾರಿಗೆ ತಂದು ಕೋವಿಡ್ ತಡೆಗಟ್ಟುವಲ್ಲಿ ಸರ್ಕಾರಗಳು ವಿಫಲವಾಗಿವೆ. ಇದೀಗ ಇಲ್ಲ ಸಲ್ಲದ ಸಬೂಬು ಹೇಳುತ್ತಿದ್ದಾರೆಯೇ ಹೊರತು, ನಾವು ನೀಡುತ್ತಿರುವ ಮಾತ್ರೆಗಳಂತೆ ಸರ್ಕಾರವೇ ಜನರಿಗೆ ಪೂರೈಸ ಬಹುದಿತ್ತು. ಆದರೆ ಮುಂದಿನ ದಿನದಲ್ಲಾದರೂ ಇಂತಹ ಮಾತ್ರೆಗಳನ್ನು ಜನಸಾಮಾನ್ಯರಿಗೆ ನೀಡುವ ವ್ಯವಸ್ಥೆ ಮಾಡುವಂತೆ ನಾನೂ ಸಹ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿಯೂ ತಿಳಿಸಿದರು.
ಇದಕ್ಕೂ ಮುನ್ನ ಹೇಮಾವತಿ ನೀರು ಕುಣಿಗಲ್ ದೊಡ್ಡಕೆರೆ ಕಡೆಗೆ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕುರುಡಿಹಳ್ಳಿ ನಾಲೆ ಬಳಿ ಗಂಗಾಪೂಜೆ ನೆರವೇರಿಸಿದರು. ನಂತರ ಪುರಸಭೆಯವರು ಹೊಸದಾಗಿ ಖರೀದಿಸಿರುವ ತ್ಯಾಜ್ಯ ಸಾಗಿಸುವ ನಾಲ್ಕು ವಾಹನಗಳಿಗೆ ಚಾಲನೆ ನೀಡಿದರು. ಶಾಸಕ ಡಾ.ರಂಗನಾಥ್ ಮಾತನಾಡಿ, ಲಾಕ್‍ಡೌನ್ ಹಿನ್ನೆಲೆಯಲ್ಲಿ ಆಹಾರ ದಿನಸಿ ತರಕಾರಿ ಇತ್ಯಾದಿಗಳನ್ನು ಜನರಿಗೆ ವಿತರಿಸಿದ್ದು, ಈಗ ರೋಗ ನಿರೋಧಕ ಮಾತ್ರೆಗಳನ್ನು ಸಂಸದರು ಮತ್ತು ಡಿ.ಕೆ.ಶಿವಕುಮಾರ್ ಸಹಕಾರದೊಂದಿಗೆ ಪ್ರತಿಮನೆಗೂ ವಿತರಿಸುವ ಕಾರ್ಯ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ರಂಗಸ್ವಾಮಿ, ನಾಗೇಂದ್ರ, ದೇವರಾಜ್, ಜಯಲಕ್ಷ್ಮೀ, ರೂಪಿಣಿಮಹೇಂದ್ರ, ತಾ.ಪಂ.ಸದಸ್ಯ ಐ.ಎ.ವಿಶ್ವನಾಥ್, ಮುಖಂಡರಾದ ರಂಗಣ್ಣಗೌಡ, ಬೇಗೂರು ನಾರಾಯಣ್, ಕೆಂಪೀರೇಗೌಡ, ಆಲ್ಕೆರೆ ನಾರಾಯಣ್, ಅಬ್ದುಲ್‍ಹಮೀದ್, ಚಂದ್ರು ಇತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ