ಕೊರೊನಾ ಹಿನ್ನೆಲೆ ಎಡೆಯೂರು ಪಾದಯಾತ್ರಿಗಳ ಸಂಖ್ಯೆ ಇಳಿಮುಖ!

ಹುಳಿಯಾರು : 

      ಕೊರೊನಾ ಸೋಂಕಿನ ಆತಂಕ 40 ವರ್ಷಗಳಿಂದ ಎಡೆಯೂರು ಸಿದ್ದಲಿಂಗೇಶ್ವರ ಲಕ್ಷ ದೀಪೋತ್ಸವಕ್ಕೆ ತೆರಳುತ್ತಿರುವ ಪಾದಯಾತ್ರಿಗಳನ್ನೂ ಕಾಡಿದೆ. ಪರಿಣಾಮ ಬರೋಬ್ಬರಿ ನಾಲ್ಕು ನೂರಕ್ಕೂ ಹೆಚ್ಚು ಮಂದಿ ತೆರಳುತ್ತಿದ್ದ ಈ ಪಾದಯಾತ್ರೆಗಳ ಸಂಖ್ಯೆ ಈಗ ಕೇವಲ ಐವತ್ತಕ್ಕೆ ಕುಸಿದಿದೆ.

     ಹೌದು, ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಶಲವಡಿಯ ಸಿದ್ದಲಿಂಗೇಶ್ವರ ಭಕ್ತ ಮಂಡಳಿ ಪ್ರತಿ ವರ್ಷ ಕಾರ್ತೀಕ ಮಾಸದಲ್ಲಿ ಎಡೆಯೂರಿಗೆ ಪಾದಯಾತ್ರೆ ಕೈಗೊಳ್ಳುತ್ತದೆ. ಜಾತಿಮತ ಭೇದವಿಲ್ಲದೇ ಪಾದಯಾತ್ರೆ ನಡೆಸುವ ಇವರು ಶಲವಡಿಯಿಂದ ಕುರ್ತುಕೋಟಿ, ಮುಳಗುಂದ, ಬಟ್ಟೂರ, ಸುರಣಿಗಿ, ಹಾಲಗಿ, ಗುತ್ತಲ, ಅನ್ವೇರಿ, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಹೊಳಲ್ಕೆರೆ, ಹೊಸದುರ್ಗ ಮಾರ್ಗವಾಗಿ ಶ್ರೀರಾಂಪುರ, ಹುಳಿಯಾರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ಮೂಲಕ ಯಡೆಯೂರು ತಲುಪಲಿದ್ದಾರೆ.

      ಪಾದಯಾತ್ರೆಯ ಯಾತ್ರಿಗಳು ನಿತ್ಯ 35 ರಿಂದ 40 ಕಿ.ಮೀ. ಕ್ರಮಿಸಿ, ಸಂಜೆ ನಂತರ ಮೊದಲೇ ನಿಗದಿಯಾದ ಸ್ಥಳಗಳಲ್ಲಿ, ದೇವಾಲಯಗಳಲ್ಲಿ ತಂಗುತ್ತಾರೆ. ವಿಶ್ರಮಿಸಿಕೊಂಡು, ದೇವರ ಭಜನೆ ಮಾಡಿ ಭಕ್ತಾಧಿಗಳು ನೀಡುವ ಪ್ರಸಾದವನ್ನು ಸ್ವೀಕರಿಸಿ, ಮರುದಿನ ಮುಂಜಾನೆ ತಮ್ಮ ಪಾದಯಾತ್ರೆಯನ್ನು ಮುಂದುವರೆಸುತ್ತಾರೆ. ಹೀಗೆ ಪ್ರತಿ ವರ್ಷ ತಪ್ಪದೆ ತೆರಳುವ ಈ ಪಾದಯಲ್ಲಿ ಕನಿಷ್ಟ ಎಂದರೂ 400 ರಕ್ಕೂ ಹೆಚ್ಚು ಮಂದಿ ಭಾಗವಹಿಸುತ್ತಾರೆ. ಈ ವರ್ಷ ಕೊರೊನಾದಿಂದಾಗಿ ಗಣನೀಯವಾಗಿ ಪಾದಯಾತ್ರಿಗಳ ಸಂಖ್ಯೆ ಇಳಿದಿದ್ದು ಮಕ್ಕಳು, ವೃದ್ಧರು ಪಾದಯಾತ್ರೆಯಲ್ಲಿ ಕಾಣದಾಗಿದ್ದಾರೆ.

      ಧೋತಿ, ಕೊರಳಿಗೆ ಕೆಂಪು ವಸ್ತ್ರ ಧರಿಸಿ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿಯ ಪದಗಳನ್ನು ತಾಳ ಹಾಕಿ ಹಾಡುತ್ತಾ ಪ್ರತಿ ವರ್ಷ ಪಾದಯಾತ್ರೆ ಮಾಡುತ್ತಾರೆ. ಆದರೆ ಈ ವರ್ಷ ಕೋವಿಡ್‍ನಿಂದಾಗಿ ಮಾಸ್ಕ್, ಸ್ಯಾನಿಟೈಸರ್, ರೋಗನಿರೋಧಕ ಶಕ್ತಿ ವೃದ್ಧಿಸುವ ಮಾತ್ರೆ ಸೇರ್ಪಡೆಗೊಂಡಿದೆ. ಒಟ್ಟಾರೆ ಕೋವಿಡ್ ನಡುವಿನಲ್ಲೂ ಹಿಂದಿನಿಂದ ನಡೆದು ಬಂದಿರುವ ಸಂಪ್ರದಾಯ ಕೈ ಬಿಡಬಾರದೆಂದು ಐವತ್ತು ಮಂದಿ ಈ ವರ್ಷ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link