ತುಮಕೂರು
ಕೊರೊನಾ ಸೋಂಕು ಜನಸಾಮಾನ್ಯರ ಬದುಕನ್ನು ತಲ್ಲಣಗೊಳಿಸಿದೆ. ವ್ಯಾಪಾರ-ವಹಿವಾಟನ್ನು ಅತಂತ್ರಗೊಳಿಸಿ ಆರ್ಥಿಕ ಚಟುವಟಿಕೆಯನ್ನು ಹಾಳು ಮಾಡಿದೆ. ಸಾಲದಕ್ಕೆ, ಸೋಂಕು ಹರಡುವ ಭೀತಿ ಹುಟ್ಟಿಸಿ ಒಬ್ಬರನ್ನೊಬ್ಬರು ಅನುಮಾನಿಸುವ, ಆತಂಕದಿಂದ ಕಾಣುವಂತಹ ವಾತಾವರಣ ನಿರ್ಮಾಣ ಮಾಡಿ ಬಾಂಧವ್ಯ, ಸೌಹಾರ್ದತೆಗೂ ಧಕ್ಕೆ ತಂದಿದೆ.
ಕೊರೊನಾ ಸೋಂಕಿನ ಪರಿಣಾಮಕ್ಕಿಂತಾ, ಅದರ ಬಗೆಗಿನ ಭೀತಿಯೇ ಹೆಚ್ಚಾಗಿದೆ. ಆರಂಭದಲ್ಲಿ ಲಾಕ್ಡೌನ್ ಮಾಡಿ ಎಲ್ಲರೂ ಮನೆಯಲ್ಲೇ ಉಳಿಯುವಂತೆ ಮಾಡಿ ಭಯಸೃಷ್ಟಿ ಮಾಡಿದ್ದೂ ಈ ಆತಂಕ ಹೆಚ್ಚಾಗಲು ಕಾರಣವಾಗಿರಬಹುದು. ಕೊರೊನಾ ವಿರುದ್ಧ ಜಾಗೃತಿ ಮೂಡಿಸುವುದಕ್ಕಿಂತಾ ನಮ್ಮಲ್ಲಿ ಹೆದರಿಕೆ ಹುಟ್ಟಿಸಿದ್ದೇ ಜಾಸ್ತಿಯಾಯಿತೇನೋ ಅನ್ನುವಂತಾಗಿದೆ.
ಇಷ್ಟೆಲ್ಲಾ ನಿರ್ಬಂಧ ಮಾಡಿದರೂ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಣಕ್ಕೆ ಬಂದಿಲ್ಲ. ದಿನೆದಿನೆ ಜಾಸ್ತಿಯಾಗುತ್ತಲೇ ಇದೆ. ಈಗ ಲಾಕ್ಡೌನ್ ಸಡಿಲಗೊಳಿಸಿ ಎಲ್ಲ ಚಟುವಟಿಕೆ ಆರಂಭಿಸಲು ಸರ್ಕಾರ ಅನುಮತಿ ನೀಡಿದ್ದರೂ ಅದರ ಭಯ, ಪರಿಣಾಮ ಮಾತ್ರ ಜನರಲ್ಲಿ ಕಡಿಮೆಯಾಗಿಲ್ಲ. ಜನಜೀವನ ಸಹಜ ಸ್ಥಿತಿಗೆ ಮರಳಲು ಸಾಧ್ಯವಾಗುತ್ತಿಲ್ಲ. ಜನ ಮುಕ್ತವಾಗಿ ತಮ್ಮ ಕೆಲಸಕಾರ್ಯಗಳನ್ನು ನಿರ್ವಹಿಸಿಕೊಳ್ಳಲೂ ಹಿಂಜರಿಯುತ್ತಿದ್ದಾರೆ. ಬಸ್ ಸೇವೆ ಆರಂಭವದರೂ ಜನ ಬಸ್ ಹತ್ತಲೂ ಹಿಂದೆಮುಂದೆ ನೋಡುವಂತಾಗಿದೆ. ತುರ್ತು ಅಗತ್ಯದ ಅನಿವಾರ್ಯ ಸಂದರ್ಭಗಳಲ್ಲಿ ಬಸ್ ಪ್ರಯಾಣ ಆಯ್ಕೆ ಮಾಡಿಕೊಳ್ಳುವಂತಾಗಿದೆ.
ತುಮಕೂರು ಜಿಲ್ಲೆಯಲ್ಲಿ ನಿತ್ಯ ಕೆಎಸ್ಆರ್ಟಿಸಿ, ಖಾಸಗಿ ಬಸ್ಗಳು ಸಾವಿರಾರು ಟ್ರಿಪ್ ಹೊಡೆದರೂ ಪ್ರಯಾಣಿಕರ ಬೇಡಿಗೆ ಪೂರೈಸಲಾಗುತ್ತಿರಲಿಲ್ಲ. ಈಗ ಖಾಸಗಿ ಬಸ್ಗಳಿಲ್ಲ. ಚಾಲನೆಯಲ್ಲಿರುವ ಕೆಎಸ್ಆರ್ಟಿಸಿ ಬಸ್ಗಳಿಗೂ ನಿರೀಕ್ಷಿಸಿದಷ್ಟು ಪ್ರಯಾಣಿಕರು ಬರುತ್ತಿಲ್ಲ. ಪ್ರಯಾಣಿಕರಿಲ್ಲದೆ ಜಿಲ್ಲೆಯ ಎಷ್ಟೋ ಮಾರ್ಗಗಳಿಗೆ ಬಸ್ ಸಂಚಾರ ಪರಿಪೂರ್ಣವಾಗಿ ಆರಂಭಿಸಲು ಸಾಧ್ಯವಾಗಿಲ್ಲ. ಹಾಗಾದರೆ, ಈ ಹಿಂದೆ ಆ ಪ್ರಮಾಣದಲ್ಲಿ ಸಂಚಾರ ಮಾಡುತ್ತಿದ್ದ ಜನ ಈಗ ಯಾಕೆ ಹಿಂಜರಿಯುತ್ತಿದ್ದಾರೆ ಎಂದರೆ, ಕೊರೊನಾ ಭೀತಿ ಹಾಗೂ ಹಣದ ಕೊರತೆಯಿಂದ ತಮ್ಮ ಖರೀದಿ, ಚಟುವಟಿಕೆಗಳಿಗೆ ಕಡಿವಾಣ ಹಾಕಿರುವುದು ಎಂದು ಹೇಳಲಾಗುತ್ತದೆ.ಜನ ಸಂಚಾರ, ಹಣಕಾಸಿನ ವಿನಿಮಯವಾಗದೆ ಯಾವುದೇ ಆರ್ಥಿಕ ಚಟುವಟಿಕೆ ವೃದ್ಧಿಯಾಗಲು ಸಾಧ್ಯವಿಲ್ಲ.
ತುಮಕೂರಿನ ವ್ಯವಹಾರದ ಪರಿಸ್ಥಿತಿಯೂ ಇದೇ ಆಗಿದೆ. ಜನ ಕೊಳ್ಳಲು ಬರುತ್ತಿಲ್ಲ, ವ್ಯಾಪಾರ ವಹಿವಾಟು ಸುಧಾರಣೆ ಆಗುತ್ತಿಲ್ಲ. ಪ್ರಮುಖ ವಾಣಿಜ್ಯ ಪ್ರದೇಶಗಳಾದ ನಗರದ ಎಂ.ಜಿ.ರಸ್ತೆ, ಮಂಡಿಪೇಟೆ ಮುಖ್ಯ ರಸ್ತೆಗಳ ವಾಣಿಜ್ಯ ಮಳಿಗೆಗಳಲ್ಲಿ ವ್ಯಾಪಾರವಿಲ್ಲ. ಖರೀದಿಗೆ ಜನ ಬರುತ್ತಿಲ್ಲ. ತುಮಕೂರು ಜನರ ಜೊತೆಗೆ ಗ್ರಾಮೀಣ ಪ್ರದೇಶದ ಜನ ಇಲ್ಲಿಗೆ ಅಗತ್ಯ ಪದಾರ್ಥಗಳನ್ನು ಕೊಳ್ಳಲು ಬರುತ್ತಿದ್ದರು. ಈಗ ಹಳ್ಳಿ ಜನ ತುಮಕೂರಿಗೆ ಬರುತ್ತಿರುವುದು ತೀರಾ ಕಮ್ಮಿಯಾಗಿದೆ.
ಹೀಗಾಗಿ ಬಿಸಿನೆಸ್ ಇಲ್ಲ ಎಂ.ಜಿ.ರಸ್ತೆಯ ವರ್ತಕರು ಹೇಳುತ್ತಾರೆ. ಇಷ್ಟೇ ಅಲ್ಲದೆ, ಇಲ್ಲಿನ ಅಂಗಡಿಗಳಲ್ಲಿ ಈ ಹಿಂದೆ ಇದ್ದ ಕಾರ್ಮಿಕರು ಲಾಕ್ಡೌನ್ನಲ್ಲಿ ತಮ್ಮ ಊರಿಗೆ ಹೋದವರು ವಾಪಸ್ಸಾಗಿಲ್ಲ, ಕೊರೊನಾ ಕಾಟ ಸಂಪೂರ್ಣ ಮುಗಿದ ಮೇಲೆ ಬರುತ್ತೇವೆ ಎನ್ನುತ್ತಿದ್ದಾರೆ. ನಮ್ಮ ಅಂಗಡಿಯಲ್ಲಿ 7 ಜನ ಸಹಾಯಕರಿದ್ದರು, ಇವರಲ್ಲಿ ಒಬ್ಬರು ಮಾತ್ರ ಬರುತ್ತಿದ್ದಾರೆ. ಉಳಿದವರು ಮಧುಗಿರಿ ತಾಲ್ಲೂಕಿನ ಹಳ್ಳಿಯವರು, ಮೊದಲು ಬಸ್ಗಳಲ್ಲಿ ದಿನಾ ಬಂದು ಹೋಗುತ್ತಿದ್ದರು, ಈಗ ಬಸ್ ಇಲ್ಲ, ಅಲ್ಲದೆ ಕೊರೊನಾ ಭಯ ಹಾಗಾಗಿ ಬರುತ್ತಿಲ್ಲ ಎಂದು ಎಂ.ಜಿ.ರಸ್ತೆಯ ಚೌಹಾಣ್ ಅಂಡ್ ಸನ್ಸ್ ಯೂನಿಫಾರಂ ಅಂಗಡಿ ಮಾಲೀಕ ಜಿ.ಪಿ.ಸುಧೀಂದ್ರ ಹೇಳುತ್ತಾರೆ.
ಕೊರೊನಾ ಸೋಂಕಿನ ಬಗ್ಗೆ ವಿಪರೀತ ಭಯ ಹುಟ್ಟಿಸಲಾಗಿದೆ. ಸೋಂಕು ತಡೆಗೆ ಅನುಸರಿಸಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದ್ದರೆ, ಈ ರೀತಿ ಆತಂಕ ಮೂಡುತ್ತಿರಲಿಲ್ಲ. ಕೊರೊನಾ ಸೋಂಕು ತಗುಲಿದ ಮಾತ್ರಕ್ಕೆ ಸಾವು ಖಚಿತವೆಂದೇನೂ ಭಾವಿಸಬೇಕಾಗಿಲ್ಲ. ಇದೂ ಒಂದು ಸಾಮಾನ್ಯ ಕಾಯಿಲೆ. ಕ್ಯಾನ್ಸ್ರ್ನಂತಹ ಕಾಯಿಲೆ ಜೊತೆ ನಾವು ಬದುಕಿತ್ತಿಲ್ಲವೆ ಎಂದು ಅಭಿಪ್ರಾಯಪಡುತ್ತಾರೆ.
ಬಟ್ಟೆ ಅಂಗಡಿಗಳಿಗೆ ಸೇಲ್ಸ್ ಗಲ್ಸ್ ಕೆಲಸಕ್ಕೆ ಹಳ್ಳಿಗಳಿಂದ ನಿತ್ಯ ಬಂದು ಹೋಗುತ್ತಿದ್ದ ಹೆಣ್ಣು ಮಕ್ಕಳು ಈಗ ಬರುತ್ತಿಲ್ಲ. ಡಾಟಾ ಎಂಟ್ರಿ ಕೇಂದ್ರಗಳಿಗೆ ಕೆಲಸಕ್ಕೆ ಬರುತ್ತಿದ್ದವರೂ ಈಗಿಲ್ಲ. ಹೀಗಾಗಿ ಅನೇಕ ಅಂಗಡಿಗಳಲ್ಲಿ ಸಹಾಯಕರಿಲ್ಲದೆ ಸಮಸ್ಯೆಯಾಗಿದೆ.
ಗ್ರಾಮೀಣ ಜನ ಮೊದಲಿನಂತೆ ತುಮಕೂರಿಗೆ ಖರೀದಿಗೆ ಬರುತ್ತಿಲ್ಲ. ಈ ಬಾರಿ ಜಾತ್ರೆ, ಮದುವೆಯಂತಹ ಸಮಾರಂಭಗಳು ನಡೆಯಲಿಲ್ಲ, ಕೊರೊನಾ ಭೀತಿಯಲ್ಲಿ ಹಬ್ಬಗಳ ಸಡಗರವಿಲ್ಲ. ಹೀಗಾಗಿ, ಜವಳಿ, ಒಡವೆ, ಮತ್ತಿತರ ವಸ್ತು ಖರೀದಿಯ ಅಗತ್ಯಬರಲಿಲ್ಲ. ಅಲ್ಲದೆ, ಲಾಕ್ಡೌನಿಂದ ದುಡಿಮೆ ಇಲ್ಲದೆ ಜನ ಆದಾಯ ಕಳೆದುಕೊಂಡಿದ್ದಾರೆ. ಯಾರೂ ದುಂದುವೆಚ್ಚ ಮಾಡುವ ಪರಿಸ್ಥಿತಿಯಲ್ಲಿಲ್ಲ. ಮುಂದೆ ಇನ್ನೆಂಥಾ ಕೆಟ್ಟ ಕಾಲ ಬರುವುದೋ ಎಂದು ಹಣವಿದ್ದರೂ ಖರ್ಚು ಮಾಡಲು ಯಾರೂ ಧೈರ್ಯ ಮಾಡುತ್ತಿಲ್ಲ.
ತೀರಾ ಅಗತ್ಯವಿರುವ ಪದಾರ್ಥಗಳನ್ನು ತಾಲ್ಲೂಕು, ಹೋಬಳಿಮಟ್ಟದ ಅಂಗಡಿಗಳಲ್ಲಿ ಖರೀದಿಮಾಡಿಕೊಂಡಿದ್ದಾರೆ. ತುಮಕೂರಿಗೆ ಬಂದು ಸಗಟಾಗಿ ಕೊಳ್ಳುವ ಅಥವಾ ಇನ್ನಾವುದಕ್ಕೆ ಪದಾರ್ಥಗಳಿಗೆ ಹಣ ಖರ್ಚು ಮಾಡುವ ಯೋಚನೆ ಮಾಡುತ್ತಿಲ್ಲ. ಸದ್ಯಕ್ಕೆ, ದಿನಸಿ, ತರಕಾರಿ, ಹಾಲು, ಔಷಧಿಯಂತಹ ಅಗತ್ಯ ವಸ್ತುಗಳನ್ನಷ್ಟೇ ಕೊಳ್ಳಲು ನಿರ್ಧರಿಸಿದಂತಿದೆ.
ಗ್ರಾಮೀಣ ಪ್ರದೇಶದವರಿರಲಿ, ಸುಮಾರು ನಾಲ್ಕು ಲಕ್ಷ ಜನ ಸಂಖ್ಯೆ ಇರುವ ತುಮಕೂರಿನ ಜನರೂ ಎಂ.ಜಿ.ರಸ್ತೆ ಕಡೆ ಶಾಪಿಂಗ್ಗೆ ಬಂದು, ಹೊಸತನ್ನು ಕೊಳ್ಳಲು ಆಸಕ್ತಿ ವಹಿಸುತ್ತಿಲ್ಲ. ಈ ಪರಿಣಾಮದಿಂದ, ಸದಾ ಜನಸಂದಣಿ ಇರುತ್ತಿದ್ದ ಎಂ.ಜಿ.ರಸ್ತೆಯಲ್ಲಿ ಜನಸಂಚಾರ ತೀರಾ ಕಮ್ಮಿ ಇದೆ. ರಾತಿ ್ರ9 ಗಂಟೆಯಾದರೂ ಇಲ್ಲಿನ ಅಂಗಡಿಗಳಲ್ಲಿ ವ್ಯಾಪಾರ ನಡೆಯುತ್ತಿತ್ತು. ಈಗ ಸಂಜೆಯಾಗುತ್ತಿದ್ದಂತೆ ಜನರಿಲ್ಲದೆ ರಸ್ತೆ ಬಿಕೋ ಎನ್ನುತ್ತದೆ. ಕೆಲವು ಅಂಗಡಿಗಳವರು ವ್ಯಾಪಾರವಿಲ್ಲದೆ ಸಂಜೆ 7 ಗಂಟೆಗೇ ಬಾಗಿಲು ಮುಚ್ಚುವಂತಾಗಿದೆ ಎಂದು ಜವಳಿ ಅಂಗಡಿಯೊಂದರ ಸಿಬ್ಬಂದಿ ಪ್ರಹ್ಲಾದ್ ಹೇಳುತ್ತಾರೆ.
ಮಂಡಿಪೇಟೆಯ ಅಂಗಡಿಗಳಲ್ಲೂ ಇಂತಹುದ್ದೇ ಪರಿಸ್ಥಿತಿ ಇದೆ. ಕೊಳ್ಳುವವರೂ ಕಮ್ಮಿ, ಅನೇಕ ಅಂಗಡಿಗಳಲ್ಲಿ ಸಹಾಯಕರಿಲ್ಲ. ಸುತ್ತಮುತ್ತಲ ಹಳ್ಳಿಗಳವರೇ ಇಲ್ಲಿನ ಅಂಗಡಿಗಳಿಗೆ ಪ್ರಮುಖ ಗ್ರಾಹಕರು. ಅವರು ಬರದೆ, ವ್ಯಾಪಾರ ಕಮ್ಮಿಯಾಗಿದೆ. ದಿನ ಬಳಕೆ ಪದಾರ್ಥಗಳಿರಲಿ, ಹಿಂದಿನಂತೆ ಕೃಷಿ ಸಲಕರಣೆ ಕೊಳ್ಳಲು ಬರುತ್ತಿದ್ದ ರೈತರೂ ಕಡಿಮೆಯಾಗಿದ್ದಾರೆ, ಹತ್ತಿರದ ಅಂಗಡಿಗಳಲ್ಲಿ ಕೊಳ್ಳು ಶುರುಮಾಡಿದ್ದಾರೆ ಎನಿಸುತ್ತಿದೆ. ಕೊರೊನಾ ಭೀತಿಗಿಂತಾ ಜನರಲ್ಲಿ ಹಣವಿಲ್ಲ ಎಂಬುದು ವರ್ತಕರ ಅಭಿಪ್ರಾಯ.ಎಲ್ಲಾ ಸಮಸ್ಯೆ, ಆತಂಕ ನಿವಾರಣೆಯಾಗಿ ಜನಜೀವನ ಸಹಜ ಸ್ಥಿತಿಗೆ ಬಂದು ವ್ಯಾಪಾರ ವಹಿವಾಟು ಸುಧಾರಣೆ ಆಗುತ್ತದೆ. ಅಲ್ಲಿಯವರೆಗೂ ಕಾಯಬೇಕಾಗುತ್ತದೆ ಎಂದುದು ಎಲ್ಲರ ನಿರೀಕ್ಷೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
