ತಿಪಟೂರು
ಎತ್ತಿನಹೊಳೆ ಯೋಜನೆಯ ಕಾಲುವೆ ತಿಪಟೂರಿನ ಮೇಲೆ ಹಾದು ಹೋಗುತ್ತಿದ್ದು, 1000 ಎಕರೆ ಭೂಮಿಸ್ವಾಧೀನವಾಗುತ್ತಿದೆ. ಆದರೆ ಈ ಯೋಜನೆಯಲ್ಲಿ ತಿಪಟೂರಿಗೆ ನೀರಿನ ಹಂಚಿಕೆಯಾಗಿಲ್ಲ, ಅಧಿಕೃತ ಘೋಷಣೆಯಾಗುವವರೆಗೂ ಕಾಮಗಾರಿ ನಿಲ್ಲಿಸಬೇಕೆಂದು ಎತ್ತಿನಹೊಳೆ ಹೋರಾಟ ಸಮಿತಿ ಅಧ್ಯಕ್ಷ ತಿಮ್ಲಾಪುರ ದೇವರಾಜು ನೇತೃತ್ವದಲ್ಲಿ ರೈತರು ಓತ್ತಾಯಿಸಿದರು.
ತಾಲೂಕಿನ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಗ್ರೇಡ್-2 ತಹಸೀಲ್ದಾರ್ಗೆ ಮನವಿ ಪತ್ರಸಲ್ಲಿಸಿ ಮಾತನಾಡಿದ ಅವರು ತುಮಕೂರು ಜಿಲ್ಲೆಯ ತಿಪಟೂರು, ಗುಬ್ಬಿ, ತುಮಕೂರು ಹಾಗೂ ಕೊರಟಗೆರೆ ತಾಲೂಕುಗಳಲ್ಲಿ ಭೂಸ್ವಾಧೀನ ಹಾಗೂ ಕಾಮಗಾರಿಯನ್ನು, ಸಂತ್ರಸ್ತರ ಅಹವಾಲು ಸಹ ಆಲಿಸದೆ ಸರ್ವಾಧಿಕಾರಿ ಧೋರಣೆಯಿಂದ ನಡೆಸುತ್ತಿರುವುದು ದೇಶದ ಪ್ರಜಾಪ್ರಭುತ್ವದ ಅಣಕವೇ ಸರಿ.
ಕಳೆದ 2 ತಿಂಗಳಿಂದ ಲಾಕ್ಡೌನ್ ಇಡೀ ಜಿಲ್ಲೆಯ ರೈತ ಸಮುದಾಯವು ಸಾಕಷ್ಟು ನಷ್ಟಕ್ಕೆ ಗುರಿಯಾಗಿದ್ದು, ಅವರ ಸಮಸ್ಯೆಯನ್ನೇ ಪರಿಹರಿಸದ ಸರ್ಕಾರ, ಈಗ ಗಾಯದ ಮೇಲೆ ಬರೆ ಎಳೆದಂತೆ , ಸಾವಿರಾರು ಸಂತ್ರಸ್ತರನ್ನು ಕತ್ತಲಲ್ಲಿಟ್ಟು ಕಾಮಗಾರಿ ಆರಂಭಿಸಿರುವುದರ ಹಿಂದಿರುವ ಉದ್ದೇಶವೇನು. ಹಾಸನ ಜಿಲ್ಲೆಯಲ್ಲಿ ತ್ರಿಪಕ್ಷೀಯ ಒಪ್ಪಂದದ ಹೆಸರಿನಲ್ಲಿ (ಭೂ ಮಾಲೀಕರು, ಗುತ್ತಿಗೆದಾರರು ಹಾಗೂ ಸರ್ಕಾರ) ರೈತರಿಗೆ ಪುಡಿಗಾಸಿನ ಬೆಳೆ ನಷ್ಟ ಪರಿಹಾರ ನೀಡಿ, ಕಾಮಗಾರಿ ಮುಗಿಸಲಾಗಿದೆ ಎಂದರು.
ಕಾರ್ಯದರ್ಶಿ ಆರ್.ಕೆ.ಎಸ್ ಸ್ವಾಮಿ ಮಾತನಾಡಿ ಭೂಸ್ವಾಧೀನ ಕಾಯ್ದೆಯಂತೆ ರೈತರಿಗೆ ಇರುವ ಹಕ್ಕುಗಳು ಪರಿಹಾರ-ಸೌಲಭ್ಯಗಳನ್ನು ನೀಡಬೇಕು ನೀರು ಹಂಚಿಕೆ ಬಗ್ಗೆ ದಾಖಲಾತಿ ನೀಡಬೇಕು, ರೈತರ ವಿರೋಧಿ ತ್ರಿಪಕ್ಷೀಯ ಒಪ್ಪಂದ ರದ್ದು ಮಾಡಬೇಕು ಆಗ್ರಹಿಸಿದರು.
ಇದೇ ಸಂಧರ್ಭದಲ್ಲಿ ತಾಲೂಕಿನ ಎತ್ತಿನಹೊಳೆ ಹೋರಾಟ ಸಮಿತಿಯ ಪದಾಧಿಕಾರಿಗಳು ರೈತರು ಇದ್ದರು.
ಉಪಾಧ್ಯಕ್ಷ ಸಿದ್ದಲಿಂಗಮೂರ್ತಿ ಮಾತನಾಡಿ ನಮ್ಮ ಬೇಡಿಕೆಗಳೆಂದರೆ ಎತ್ತಿನಹೊಳೆ ಯೋಜನೆಯಲ್ಲಿ ತಿಪಟೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ ತಾಲೂಕುಗಳಿಗೆ ನೀರಿನ ಹಂಚಿಕೆಯನ್ನು ಪ್ರತ್ಯೇಕವಾಗಿ ನಿಗದಿ ಮಾಡಿ ಆದೇಶವನ್ನು ಹೊರಡಿಸಬೇಕು .ಎತ್ತಿನಹೊಳೆ ಯೋಜನೆಯಲ್ಲಿ ಭೂಮಿ, ಮನೆ, ಕಟ್ಟಡ, ಮುಂತಾದವುಗಳನ್ನು ಕಳೆದುಕೊಳ್ಳುವ ಸಂತ್ರಸ ್ತರಿಗೆ ಬದುಕನ್ನು ಕಟ್ಟಿಕೊಳ್ಳುವಷ್ಟು ನ್ಯಾಯಬದ್ಧ ಪರಿಹಾರ ನೀಡಬೇಕು ಮತ್ತು ಆರ್ಎಫ್ಸಿಟಿಎಲ್ಎಆರ್ಆರ್-2013 ಕಾಯ್ದೆ ಪ್ರಕಾರ ಪರಿಹಾರದ ವಿವರಗಳನ್ನು ಸಂತ್ರಸ ್ತರಿಗೆ ಮೊದಲೇ ಒದಗಿಸಬೇಕು.
ಒಂದನೇ ಹಾಗೂ ಎರಡನೇ ಶೆಡ್ಯೂಲ್ ಪರಿಹಾರಗಳನ್ನು ಸಂತ್ರಸ್ತರಿಗೆ ನೀಡುವವರೆಗೂ ಕಾಮಗಾರಿಯನ್ನು ಆರಂಭಿಸಬಾರದು .ಹಿಡುವಳಿದಾರರ ಸಂತ್ರಸ್ತರ ಅನುಪಸ್ಥಿತಿಯಲ್ಲಿ ನೀಡಿದ ಜೆಎಂಸಿ ವರದಿಯನ್ನು ಆರ್ಎಫ್ಸಿ ಟಿಎಲ್ಎಆರ್ಆರ್-2013 ಕಾಯ್ದೆಯ ಪ್ರಕಾರ ಅಸಿಂಧು ಎಂದು ಪರಿಗಣಿಸಿ, ಹೊಸದಾಗಿ ಜೆಎಂಸಿ ವರದಿಯನ್ನು ತಯಾರಿಸಬೇಕು.ರೈತರಿಗೆ ವಂಚನೆ ಮಾಡುತ್ತಿರುವ ಮತ್ತು ಗುತ್ತಿಗೆದಾರರ ಪರವಾಗಿರುವ ತ್ರಿಪಕ್ಷೀಯ ಒಪ್ಪಂದವನ್ನು ರದ್ದುಗೊಳಿಸಬೇಕು.ಯೋಜನಾ ಬಾಧಿತ ರೈತ ಕುಟುಂಬಗಳ ಸಾಮಾಜಿಕ ಪರಿಣಾಮ ಅಧ್ಯಯನ ವರದಿಯನ್ನು ಬಹಿರಂಗಗೊಳಿಸಬೇಕು ಮತ್ತು ಯೋಜನಾ ನಿರಾಶ್ರಿತರ ಪಟ್ಟಿಯನ್ನು ತಯಾರಿಸಿ ಸಂತ್ರಸ್ತರಿಗೆ ಹಂಚಬೇಕು.ಅರಣ್ಯ ನಾಶ, ಪರಿಸರ ನಾಶ, ಜೀವವೈವಿಧ್ಯತೆಯ ನಾಶಗಳನ್ನು ಸರಿಪಡಿಸಲು ಸೂಕ್ತ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕು. ಪರಿಹಾರ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಪಟ್ಟಂತೆ ಕೂಡಲೇ ಸಂತ್ರಸ್ಥರ ಜೊತೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ