ಪಟ್ಟನಾಯಕನಹಳ್ಳಿ:
ಕಳೆದ ಎರಡು ವರ್ಷಗಳಿಂದಲೂ ರಸ್ತೆಯೊಂದರ ಕಾಮಗಾರಿಗೆ ಜಲ್ಲಿ ಹಾಕುವ ಆಮೆ ವೇಗದ ಕಾಮಗಾರಿ ನಡೆಯುತ್ತಿದ್ದು, ಈ ಬಗ್ಗೆ ಕೂಡಲೆ ಕ್ಷೇತ್ರದ ಶಾಸಕರು ಗಮನ ಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.ತಾಲ್ಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ ಬಸ್ ನಿಲ್ದಾಣಕ್ಕೆ ಹೋಗುವ ಪ್ರಮುಖ ರಸ್ತೆಗೆ ಡಾಂಬರ್ ಹಾಕಲು ಕಾಮಗಾರಿ ಮಂಜೂರಾಗಿ ಎರಡು ವರ್ಷವಾಯಿತು. ಎರಡು ವರ್ಷದ ಹಿಂದೆಯೇ ಈ ರಸ್ತೆಯನ್ನು ಅಭಿವೃದ್ಧಿಪಡಿಸುವ ಕೆಲಸಕ್ಕೆ ಚಾಲನೆ ದೊರೆಯಿತು.
2018 ರಲ್ಲಿ ಗುತ್ತಿಗೆದಾರರು ಕಾಮಗಾರಿ ಶುರು ಮಾಡಿದವರು ಇದುವರೆಗೂ ರೋಡಿಗೆ ಜೆಲ್ಲಿ ತುಂಬುವುದರಲ್ಲೆ ಕಾಲಹರಣ ಮಾಡುತ್ತಿದ್ದಾರೆ. ಆಮೆಗತಿಯಲ್ಲಿ ಕೆಲಸ ಮಾಡುವುದನ್ನು ನೋಡಿದರೆ ಇವರು ಇದನ್ನು ಯಾವ ಕಾಲಕ್ಕೆ ಮುಗಿಸುತ್ತಾರೋ ಎಂದೆನಿಸುತ್ತದೆ. ತಕ್ಷಣದ ಮಟ್ಟಿಗೆ ಇದೇನೂ ಮುಗಿಯುವಂತೆ ಕಾಣಿಸುತ್ತಿಲ್ಲ. ಜಲ್ಲಿ ಕಲ್ಲುಗಳಲ್ಲಿಯೇ ವಾಹನ ಸವಾರರು, ಪಾದಚಾರಿಗಳು ಓಡಾಡಬೇಕಿದೆ.
ಇದರಿಂದಾಗಿ ಅಲ್ಲಿನ ಜನರಿಗೆ ತುಂಬಾ ತೊಂದರೆಯಾಗಿದ್ದು ರಸ್ತೆಯ ಅಕ್ಕ ಪಕ್ಕದ ಚರಂಡಿಯಲ್ಲಿಯೂ ನೀರು ಶೇಖರಣೆಯಾಗಿ ಸೊಳ್ಳೆಗಳು ಉತ್ಪತ್ತಿಯಾಗಿ ಜನತೆ ತುಂಬಾ ತೊಂದರೆಯನ್ನು ಅನುಭವಿಸುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡ ಕಣ್ಣು ಮುಚ್ಚಿ ಕುಳಿತಿದ್ದಾರೆ ಎನ್ನಿಸುವಂತಿದೆ ಇಲ್ಲಿನ ನೈಜ ಪರಿಸ್ಥಿತಿ.
ರಸ್ತೆಗೆ ತಕ್ಕನಾಗಿ ಹೊಂದಿಕೊಂಡಂತೆ ಕೆನರಾ ಬ್ಯಾಂಕ್ ಇರುವುದರಿಂದ ಬ್ಯಾಂಕಿಗೆ ಬರುವ ಗ್ರಾಹಕರಿಗೂ ಕೂಡ ತೊಂದರೆ ಯುಂಟಾಗುತ್ತಿದೆ. ಇನ್ನು ಗ್ರಾಮದ ಬಸ್ ನಿಲ್ದಾಣದ ಸಮಸ್ಯೆಯನ್ನು ಬಗೆಹರಿಸುವವರೆ ಇಲ್ಲವಾಗಿದೆ. ಅರ್ಧ ಚರಂಡಿಯ ಭಾಗವು ಬಸ್ ನಿಲ್ದಾಣದ ಮಧ್ಯದಲ್ಲಿದ್ದು ಅದು ಬಸ್ಸು ತಿರುಗಿಸಿಕೊಳ್ಳಲಾಗದಷ್ಟು ಅವಾಂತರಗಳನ್ನು ಈ ಅಪೂರ್ಣ ರಸ್ತೆ ನಿರ್ಮಾಣ ತಂದೊಡ್ಡಿದೆ.
ಇನ್ನು ಈ ಊರಿನ ಎಲ್ಲಾ ವಹಿವಾಟಿಗೂ ಇದೇ ರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಹೊಂದಿರುವ ಕಾರಣ ಹೆಚ್ಚಿನ ಜನದಟ್ಟಣೆಯಿಂದ ಇಲ್ಲಿನ ಜನತೆಗೆ ತೊಂದರೆಯಾಗುತ್ತಿದೆ. ಶಾಸಕರು ಕೂಡಲೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಹಾಗೂ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ